ಕೊರೋನಾ ಭೀತಿಯ ನಡುವೆಯೇ ದೇಸಿ ಕ್ರಿಕೆಟ್ ಟೂರ್ನಿಯಾದ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿ ಆಯೋಜನೆಗೊಂಡಿದೆ. ಈ ಟೂರ್ನಿಗೆ ಬಿಸಿಸಿಐ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಪ್ರಕಟಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಜ.02): ಇದೇ ಜನವರಿ 10ರಿಂದ ಆರಂಭಗೊಳ್ಳಲಿರುವ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಆಟಗಾರರು ಪರಸ್ಪರ ಕೈಕುಲುಕುವಂತಿಲ್ಲ. ಇದು ಬಿಸಿಸಿಐನ ನಿಯಮ. ಕೊರೋನಾ ತಡೆಯಲು ಅಗತ್ಯ ಕ್ರಮಗಳೊಂದಿಗೆ ಟಿ20 ಟೂರ್ನಿ ನಡೆಸಲು ಮುಂದಾಗಿರುವ ಬಿಸಿಸಿಐ, 30 ಪುಟಗಳ ಕಠಿಣ ಮಾರ್ಗಸೂಚಿ ಪ್ರಕಟಿಸಿದ್ದು ಎಲ್ಲ ತಂಡಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದೆ.
ಇದೇ ವೇಳೆ ಟಾಸ್ ಸಂದರ್ಭದಲ್ಲಿ ತಂಡಗಳ ಆಡುವ ಹನ್ನೊಂದರ ಪಟ್ಟಿಯಿರುವ ಕಾಗದವನ್ನು ನೀಡುವ ಬದಲು ಎಲೆಕ್ಟ್ರಾನಿಕ್ ಟೀಮ್ ಶೀಟ್ (ಇ-ಮೇಲ್)ಗಳನ್ನು ಬಳಸಲು ಸೂಚಿಸಲಾಗಿದೆ. ಮೈದಾನದಲ್ಲಿರುವ ಮಾಧ್ಯಮದವರು ಪಂದ್ಯದ ಬಳಿಕ ಆಟಗಾರರ ಸಂದರ್ಶನ ನಡೆಸಲು ನಿರ್ಬಂಧ ಹೇರಿರುವ ಬಿಸಿಸಿಐ, ವಿಡಿಯೋ ಕಾನ್ಫರೆನ್ಸ್ ಮೂಲಕ ಪತ್ರಿಕಾಗೋಷ್ಠಿಗಳನ್ನು ನಡೆಸಲು ಸೂಚಿಸಿದೆ.
ಮುಷ್ತಾಕ್ ಅಲಿ ಟೂರ್ನಿಗೆ ಕೇರಳ ತಂಡ ಪ್ರಕಟ; ಟೀಂ ಕೂಡಿಕೊಂಡ ವೇಗಿ ಶ್ರೀಶಾಂತ್
ಪ್ರೇಕ್ಷಕರಿಗೆ ಪ್ರವೇಶವಿಲ್ಲ: 6 ನಗರಗಳಲ್ಲಿ ಪಂದ್ಯಗಳು ನಡೆಯಲಿದ್ದು, ಎಲ್ಲಿಯೂ ಕ್ರೀಡಾಂಗಣಗಳಿಗೆ ಪ್ರೇಕ್ಷಕರಿಗೆ ಪ್ರವೇಶವಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಅಲ್ಲದೇ ಆಟಗಾರರು ಅಂತರ ಕಾಯ್ದುಕೊಂಡು ಕೂರಲು ಡ್ರೆಸ್ಸಿಂಗ್ ಕೊಠಡಿ ಜೊತೆ ಪ್ರೇಕ್ಷಕರ ಗ್ಯಾಲರಿಗಳನ್ನೂ ಬಳಸಿಕೊಳ್ಳಲು ಸಲಹೆ ನೀಡಲಾಗಿದೆ.
ಇಂದಿನಿಂದ ಆಟಗಾರರಿಗೆ 6 ದಿನಗಳ ಕ್ವಾರಂಟೈನ್
ಜ.10ರಿಂದ ಟೂರ್ನಿ ಆರಂಭಗೊಳ್ಳಲಿದ್ದು, ಜನವರಿ 2ರ ವೇಳೆಗೆ ತಂಡಗಳು ತಮಗೆ ನಿಗದಿಯಾಗಿರುವ ನಗರಗಳಿಗೆ ತಲುಪಲು ಬಿಸಿಸಿಐ ಸೂಚಿಸಿತ್ತು. ಜ.2ರಿಂದ 6 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರುವ ತಂಡಗಳು, ಜ.8, 9ರಂದು ಅಭ್ಯಾಸ ನಡೆಸಲಿವೆ. 6 ದಿನಗಳ ಕ್ವಾರಂಟೈನ್ ಅವಧಿಯಲ್ಲಿ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ 3 ಬಾರಿ ಕೋವಿಡ್ ಪರೀಕ್ಷೆಗೆ ಒಳಪಡಲಿದ್ದಾರೆ.
‘ಎ’ ಗುಂಪಿನಲ್ಲಿರುವ ಕರ್ನಾಟಕ, ಗುಂಪು ಹಂತದ ಪಂದ್ಯಗಳನ್ನು ಬೆಂಗಳೂರಲ್ಲೇ ಆಡಲಿದೆ. ಬೆಂಗಳೂರಿನ ಹೊರವಲಯದಲ್ಲಿರುವ ಆಲೂರು ಮೈದಾನದಲ್ಲಿ ಪಂದ್ಯಗಳು ನಡೆಯಲಿದ್ದು, ಅಲ್ಲೇ ಸಮೀಪದಲ್ಲಿರುವ ರೆಸಾರ್ಟ್‌ವೊಂದರಲ್ಲಿ ಕರ್ನಾಟಕ ತಂಡ ಉಳಿದುಕೊಳ್ಳಲಿದೆ. ಜ.10ರಂದು ಕರ್ನಾಟಕ ತನ್ನ ಮೊದಲ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ವಿರುದ್ಧ ಆಡಲಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 2, 2021, 10:23 AM IST