Asianet Suvarna News Asianet Suvarna News

ವಿಂಡೀಸ್‌ ಏಕದಿನ, ಟಿ20 ನಾಯಕತ್ವಕ್ಕೆ ನಿಕೋಲಸ್ ಪೂರನ್‌ ಗುಡ್‌ ಬೈ

ವೆಸ್ಟ್ ಇಂಡೀಸ್ ಸೀಮಿತ ಓವರ್‌ಗಳ ತಂಡದ ನಾಯಕತ್ವಕ್ಕೆ ನಿಕೋಲಸ್ ಪೂರನ್ ವಿದಾಯ
ಕಳೆದ ಮೇ ತಿಂಗಳಿನಲ್ಲಿ ವಿಂಡೀಸ್ ನಾಯಕನಾಗಿ ನೇಮಕವಾಗಿದ್ದ ಪೂರನ್
ಟಿ20 ವಿಶ್ವಕಪ್ ಟೂರ್ನಿಯಲ್ಲಿನ ಹೀನಾಯ ಪ್ರದರ್ಶನದ ಬೆನ್ನಲ್ಲೇ ಕಠಿಣ ನಿರ್ಧಾರ ಪ್ರಕಟಿಸಿದ ವಿಕೆಟ್ ಕೀಪರ್ ಬ್ಯಾಟರ್

Nicholas Pooran steps down as West Indies Limited over Cricket captain kvn
Author
First Published Nov 23, 2022, 10:32 AM IST

ಸೇಂಟ್‌ ಜಾನ್ಸ್‌(ಆ್ಯಂಟಿಗಾ): ಟಿ20 ವಿಶ್ವಕಪ್‌ ಅರ್ಹತಾ ಸುತ್ತಿನಲ್ಲೇ ಹೀನಾಯವಾಗಿ ಸೋತು ಹೊರಬಿದ್ದ ಬಳಿಕ ವೆಸ್ಟ್‌ಇಂಡೀಸ್‌ ಟಿ20, ಏಕದಿನ ನಾಯಕತ್ವಕ್ಕೆ ನಿಕೋಲಸ್‌ ಪೂರನ್‌ ರಾಜೀನಾಮೆ ನೀಡಿದ್ದಾರೆ. ಕಳೆದ ವರ್ಷ ಪೊಲ್ಲಾರ್ಡ್‌ ಗಾಯಗೊಂಡಿದ್ದರಿಂದ ಪೂರನ್‌ಗೆ ತಂಡದ ನಾಯಕತ್ವ ಹುದ್ದೆ ಒಲಿದಿತ್ತು. ಬಳಿಕ ಮೇ ತಿಂಗಳಲ್ಲಿ ಪೊಲ್ಲಾರ್ಡ್‌ ನಿವೃತ್ತಿ ಬಳಿಕ ಖಾಯಂ ನಾಯಕರಾಗಿ ಪೂರನ್‌ ಆಯ್ಕೆಯಾಗಿದ್ದರು. 

ಅವರ ನಾಯಕತ್ವದಲ್ಲಿ ಟಿ20 ವಿಶ್ವಕಪ್‌ನಲ್ಲಿ ಆಘಾತಕಾರಿ ಸೋಲನುಭವಿಸಿತ್ತು. ವೆಸ್ಟ್ ಇಂಡೀಸ್ ತಂಡದ ನಾಯಕತ್ವದಿಂದ ಕೆಳಗಿಳಿದಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಪೂರನ್, "ನಾನು ವೆಸ್ಟ್ ಇಂಡೀಸ್ ತಂಡದ ಕುರಿತಂತೆ ಸಂಪೂರ್ಣ ಬದ್ದತೆ ಹೊಂದಿದ್ದೇನೆ. ಇನ್ನು ಮುಂದೆ ತಂಡದ ಹಿರಿಯ ಆಟಗಾರನಾಗಿ ತಂಡಕ್ಕೆ ಅಗತ್ಯ ಸಹಕಾರ ನೀಡಲು ಉತ್ಸುಕನಾಗಿದ್ದೇನೆ. ಕ್ಲಿಷ್ಟಕರ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾಗಬಲ್ಲ ಇನಿಂಗ್ಸ್‌ ಆಡಲು ನಾನು ಎದುರು ನೋಡುತ್ತಿದ್ದೇನೆ" ಎಂದು ಪೂರನ್ ಹೇಳಿದ್ದಾರೆ.

ನಿಕೋಲಸ್ ಪೂರನ್‌, ವೆಸ್ಟ್ ಇಂಡೀಸ್ ತಂಡದ ನಾಯಕತ್ವ ವಹಿಸಿಕೊಂಡ ಬಳಿಕ ಗೆಲುವು ಸಾಧಿಸಿದ್ದಕ್ಕಿಂತ ಸೋತಿದ್ದೇ ಹೆಚ್ಚು ಎನಿಸಿಕೊಂಡಿತ್ತು. ನಿಕೋಲಸ್ ಪೂರನ್ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ತಂಡವು 15 ಏಕದಿನ ಪಂದ್ಯಗಳನ್ನಾಡಿ ಕೇವಲ 4 ಪಂದ್ಯಗಳಲ್ಲಷ್ಟೇ ಗೆಲುವು ದಾಖಲಿಸಿತ್ತು. ಇನ್ನು 15 ಟಿ20 ಪಂದ್ಯಗಳಿಂದ ವಿಂಡೀಸ್ ತಂಡ 4 ಪಂದ್ಯಗಳಲ್ಲಿ ಮಾತ್ರ ಗೆಲುವಿನ ನಗೆ ಬೀರಿತ್ತು. ನಿಕೋಲಸ್ ಪೂರನ್ ವಿಂಡೀಸ್ ನಾಯಕತ್ವ ವಹಿಸಿಕೊಂಡ ಬಳಿಕ ಕೇವಲ ನಾಯಕನಾಗಿ ಮಾತ್ರವಲ್ಲದೇ ಬ್ಯಾಟರ್ ಆಗಿಯೂ ವೈಫಲ್ಯ ಅನುಭವಿಸಿದ್ದರು. ನಿಕೋಲಸ್ ಪೂರನ್‌ ಕಳೆದ 10 ಟಿ20 ಇನಿಂಗ್ಸ್‌ಗಳಿಂದ ಕೇವಲ 94 ರನ್‌ ಬಾರಿಸಿದ್ದರು. ಇನ್ನು ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಿಕೋಲಸ್ ಪೂರನ್‌ ಕೇವಲ 5, 7 ಹಾಗೂ 13 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

ಇಂಡೋ-ಕಿವೀಸ್ 3ನೇ ಪಂದ್ಯ ಟೈನಲ್ಲಿ ಅಂತ್ಯ; ಟೀಂ ಇಂಡಿಯಾ ತೆಕ್ಕೆಗೆ ಟಿ20 ಸರಣಿ

ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವು, ಅರ್ಹತಾ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಇದರ ಬೆನ್ನಲ್ಲೇ ತಂಡದ ಹೆಡ್ ಕೋಚ್ ಫಿಲ್ ಸಿಮೊನ್ಸ್‌ ತಮ್ಮ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದರು. ಇದೀಗ ನಾಯಕ ಪೂರನ್ ಕೂಡಾ ತಮ್ಮ ಸ್ಥಾನಕ್ಕೆ ಗುಡ್‌ ಬೈ ಹೇಳಿದ್ದು, ಆಟಗಾರನಾಗಿ ವಿಂಡೀಸ್ ತಂಡದ ಪರ ಕಣಕ್ಕಿಳಿಯುವುದಾಗಿ ಖಚಿತಪಡಿಸಿದ್ದಾರೆ.

ಏಕದಿನ: ಇಂಗ್ಲೆಂಡ್‌ ವಿರುದ್ಧ ಆಸೀಸ್‌ 3-0 ಕ್ಲೀನ್‌ಸ್ವೀಪ್‌

ಮೆಲ್ಬರ್ನ್‌: ಟ್ರಾವಿಸ್‌ ಹೆಡ್‌(152), ಡೇವಿಡ್‌ ವಾರ್ನರ್‌(106) ಭರ್ಜರಿ ಶತಕದ ನೆರವಿನಿಂದ ಇಂಗ್ಲೆಂಡ್‌ ವಿರುದ್ಧದ ಮಳೆ ಪೀಡಿತ 3ನೇ ಏಕದಿನ ಪಂದ್ಯದಲ್ಲಿ ಆಸ್ಪ್ರೇಲಿಯಾ 221 ರನ್‌ ಭರ್ಜರಿ ಗೆಲುವು ಸಾಧಿಸಿದ್ದು, ಸರಣಿಯನ್ನು 3-0 ಕ್ಲೀನ್‌ಸ್ವೀಪ್‌ ಮಾಡಿಕೊಂಡಿದೆ. ಆಸೀಸ್‌ ಮೊದಲು ಬ್ಯಾಟ್‌ ಮಾಡಿ 48 ಓವರಲ್ಲಿ 5 ವಿಕೆಟ್‌ಗೆ 355 ರನ್‌ ಕಲೆ ಹಾಕಿತು. ಸ್ಟೋನ್‌ 4 ವಿಕೆಟ್‌ ಕಿತ್ತರು. ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್‌ 31.4 ಓವರಲ್ಲಿ 142ಕ್ಕೆ ಆಲೌಟಾಯಿತು. ಆ್ಯಡಂ ಜಂಪಾ 31ಕ್ಕೆ 4 ವಿಕೆಟ್‌ ಪಡೆದರು.
 

Follow Us:
Download App:
  • android
  • ios