Asianet Suvarna News Asianet Suvarna News

ಇಂಡೋ-ಕಿವೀಸ್ 3ನೇ ಪಂದ್ಯ ಟೈನಲ್ಲಿ ಅಂತ್ಯ; ಟೀಂ ಇಂಡಿಯಾ ತೆಕ್ಕೆಗೆ ಟಿ20 ಸರಣಿ

* ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಟೈನಲ್ಲಿ ಅಂತ್ಯ

* 1-0 ಅಂತರದಲ್ಲಿ ಟಿ20 ಸರಣಿ ಟೀಂ ಇಂಡಿಯಾ ಪಾಲು

* ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ ಮೊಹಮ್ಮದ್ ಸಿರಾಜ್

IND vs NZ 3rd T20I Match Ends In A Tie India Win Series kvn
Author
First Published Nov 22, 2022, 4:11 PM IST

ನೇಪಿಯರ್(ನ.22): ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ಮೂರನೇ ಹಾಗೂ ಕೊನೆಯ ಟಿ20 ಪಂದ್ಯವು ಟೈನಲ್ಲಿ ಅಂತ್ಯವಾಗಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು 1-0 ಅಂತರದಲ್ಲಿ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನ್ಯೂಜಿಲೆಂಡ್ ನೀಡಿದ್ದ 161 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ, 9 ಓವರ್ ಅಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 75 ರನ್ ಗಳಿಸಿದ್ದಾಗ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ. ಹೀಗಾಗಿ ಡೆಕ್ವರ್ಥ್ ಲೂಯಿಸ್ ನಿಯಮದನ್ವಯ ಪಂದ್ಯವನ್ನು ಟೈ ಎಂದು ಘೋಷಿಸಲಾಯಿತು.

ಇಲ್ಲಿನ ಮೆಕ್‌ಲ್ಯಾನ್ ಪಾರ್ಕ್‌ ಮೈದಾನದಲ್ಲಿ ಆಯೋಜನೆಗೊಂಡಿದ್ದ ಮೂರನೆ ಟಿ20 ಪಂದ್ಯ ಆರಂಭಕ್ಕೂ ಮುನ್ನವೇ ಮಳೆರಾಯ ಕೊಂಚ ಅಡ್ಡಿಪಡಿಸಿದ್ದ. ಹೀಗಾಗಿ ಟಾಸ್ ಕೂಡಾ ಕೆಲಕಾಲ ತಡವಾಗಿ ನಡೆಯಿತು. ಇನ್ನು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು ಮೊಹಮ್ಮದ್ ಸಿರಾಜ್ ಹಾಗೂ ಆರ್ಶದೀಪ್ ಸಿಂಗ್ ಮಾರಕ ದಾಳಿಗೆ ತತ್ತರಿಸಿ 19.4 ಓವರ್‌ಗಳಲ್ಲಿ 160 ರನ್ ಬಾರಿಸಿ ಸರ್ವಪತನ ಕಂಡಿತು. ನ್ಯೂಜಿಲೆಂಡ್ ತಂಡದ ಪರ ಆರಂಭಿಕ ಬ್ಯಾಟರ್ ಡೆವೊನ್ ಕಾನ್‌ವೇ 59 ರನ್ ಬಾರಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಫಿಲಿಫ್ಸ್‌ 54 ರನ್ ಬಾರಿಸಿ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು.

ಸಿರಾಜ್-ಆರ್ಶದೀಪ್ ಸಿಂಗ್ ಮಾರಕ ದಾಳಿ: ಒಂದು ಹಂತದಲ್ಲಿ ನ್ಯೂಜಿಲೆಂಡ್ ತಂಡವು 15 ಓವರ್ ಅಂತ್ಯದ ವೇಳೆಗೆ ಕೇವಲ 2 ವಿಕೆಟ್ ಕಳೆದುಕೊಂಡು 130 ರನ್ ಗಳಿಸುವ ಮೂಲಕ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿತ್ತು. ಆದರೆ ಕೊನೆಯ 5 ಓವರ್‌ಗಳಲ್ಲಿ ಮಾರಕ ದಾಳಿ ನಡೆಸಿದ ಟೀಂ ಇಂಡಿಯಾ ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಆರ್ಶದೀಪ್ ಸಿಂಗ್ ತಲಾ 4 ವಿಕೆಟ್ ಕಬಳಿಸುವ ಮೂಲಕ ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ ಕಿವೀಸ್‌ ಇನಿಂಗ್ಸ್‌ ಮುಗಿಸುವಲ್ಲಿ ವೇಗಿಗಳು ಯಶಸ್ವಿಯಾದರು. ಸಿರಾಜ್ 4 ಓವರ್‌ನಲ್ಲಿ ಕೇವಲ 17 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದರೆ, ಮತ್ತೋರ್ವ ವೇಗಿ ಆರ್ಶದೀಪ್ ಸಿಂಗ್ 37 ರನ್ ನೀಡಿ 4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇನ್ನು ಹರ್ಷಲ್ ಪಟೇಲ್ ಒಂದು ವಿಕೆಟ್ ಪಡೆದರು.

ಇನ್ನು ನ್ಯೂಜಿಲೆಂಡ್ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಭಾರತ ತಂಡವು ಕೇವಲ 21 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳ ವಿಕೆಟ್ ಕಳೆದಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಶಾನ್ ಕಿಶನ್ ಕೇವಲ 10 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ರಿಷಭ್ ಪಂತ್ ಬ್ಯಾಟಿಂಗ್ 11 ರನ್‌ಗಳಿಗೆ ಸೀಮಿತವಾಯಿತು. ಇದರ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಖಾತೆ ತೆರೆಯುವ ಮುನ್ನವೇ ಟಿಮ್‌ ಸೌಥಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಈ ವೇಳೆ 4ನೇ ವಿಕೆಟ್‌ಗೆ ಜತೆಯಾದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ 39 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ನಾಯಕ ಹಾರ್ದಿಕ್ ಪಾಂಡ್ಯ ಕೇವಲ 18 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಆಕರ್ಷಕ ಸಿಕ್ಸರ್ ಸಹಿತ ಅಜೇಯ 30 ರನ್ ಬಾರಿಸಿ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಇನ್ನು ಕಳೆದ ಪಂದ್ಯದಲ್ಲಿ ವಿಸ್ಪೋಟಕ ಶತಕ ಸಿಡಿಸಿದ್ದ ಸೂರ್ಯಕುಮಾರ್ ಯಾದವ್ ಕೇವಲ 13 ರನ್ ಬಾರಿಸಿ ಇಶ್ ಸೋಧಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

Ind vs NZ: ಇಂಡೋ-ಕಿವೀಸ್ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿ; ಪಂದ್ಯ ಟೈ..?

ಟೀಂ ಇಂಡಿಯಾ 9 ಓವರ್ ಅಂತ್ಯದ ವೇಳೆಗೆ 75 ರನ್ ಬಾರಿಸಿದ್ದು, ನಾಯಕ ಹಾರ್ದಿಕ್ ಪಾಂಡ್ಯ 30* ಹಾಗೂ ದೀಪಕ್ ಹೂಡಾ 9 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದರು.ಇದೀಗ ಪಂದ್ಯ ಸ್ಥಗಿತಗೊಂಡ ಹಿನ್ನೆಲೆಯಲ್ಲಿ, ಡೆಕ್ವರ್ಥ್ ಲೂಯಿಸ್ ನಿಯಮದನ್ವಯ ಫಲಿತಾಂಶ ಘೋಷಿಸಲಾಗಿದೆ. ಡೆಕ್ವರ್ಥ್ ಲೂಯಿಸ್ ನಿಯಮದನ್ವಯ 9 ಓವರ್ ಅಂತ್ಯದ ವೇಳೆಗೆ ಭಾರತ ಗೆಲುವು ಸಾಧಿಸಬೇಕಿದ್ದರೇ 76 ರನ್ ಗಳಿಸಬೇಕಿತ್ತು. ಆದರೆ ಇದೀಗ 75 ರನ್ ಗಳಿಸಿರುವುದರಿಂದ ಪಂದ್ಯವನ್ನು ಟೈ ಎಂದು ಘೋಷಿಸಲಾಯಿತು.

ಟಿ20 ಸರಣಿ ಟೀಂ ಇಂಡಿಯಾ ಪಾಲು: ಹೌದು, ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಆಡಿದ ಮೊದಲ ಟಿ20 ಸರಣಿಯನ್ನು 1-0 ಅಂತರದಲ್ಲಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯವು ಮಳೆಯಿಂದಾಗಿ ಒಂದೂ ಎಸೆತ ಕಾಣದೇ ರದ್ದಾಗಿತ್ತು. ಇನ್ನು ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 65 ರನ್‌ಗಳ ಜಯ ಸಾಧಿಸಿ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿತ್ತು. ಇದೀಗ ಮೂರನೇ ಟಿ20 ಪಂದ್ಯವು ಟೈ ಆಗಿರುವುದರಿಂದ 3 ಪಂದ್ಯಗಳ ಟಿ20 ಸರಣಿ ಭಾರತದ ಪಾಲಾಗಿದೆ. ಇನ್ನು ಕೊನೆಯ ಪಂದ್ಯದಲ್ಲಿ ಕೇವಲ 17 ರನ್ ನೀಡಿ 4 ವಿಕೆಟ್ ಕಬಳಿಸಿದ ಮೊಹಮ್ಮದ್ ಸಿರಾಜ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಎರಡನೇ ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸಿದ್ದ ಸೂರ್ಯಕುಮಾರ್ ಯಾದವ್ ಸರಣಿಶ್ರೇಷ್ಠ ಗೌರವಕ್ಕೆ ಭಾಜನರಾದರು.

Follow Us:
Download App:
  • android
  • ios