ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ 29ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಐಪಿಎಲ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದ ಪೂರನ್, ಈ ನಿರ್ಧಾರದಿಂದ ಕ್ರಿಕೆಟ್ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.

ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ತಮ್ಮ 29ನೇ ವಯಸ್ಸಿನಲ್ಲಿಯೇ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿ ಕ್ರಿಕೆಟ್ ಲೋಕಕ್ಕೆ ಶಾಕ್ ನೀಡಿದ್ದಾರೆ. ಜೂನ್ 10 ರಂದು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್ ಮೂಲಕ ಈ "ಕಠಿಣ" ನಿರ್ಧಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ವೆಸ್ಟ್ ಇಂಡೀಸ್ ಪರ 61 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು 106 ಏಕದಿನ ಪಂದ್ಯಗಳಲ್ಲಿ 4,000ಕ್ಕೂ ಹೆಚ್ಚು ರನ್ ಗಳಿಸಿರುವ ಈ ವಿಕೆಟ್ ಕೀಪರ್ ಬ್ಯಾಟರ್ ತೀರ್ಮಾನ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಅಚ್ಚರಿ ಮೂಡಿಸಿದೆ.

ಐಪಿಎಲ್ 2025ರಲ್ಲಿ ರಿಷಭ್ ಪಂತ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ತಂಡದ ಪರ ಅದ್ಭುತ ಪ್ರದರ್ಶನ ನೀಡಿ 14 ಪಂದ್ಯಗಳಲ್ಲಿ ಸುಮಾರು 200 ಸ್ಟ್ರೈಕ್ ರೇಟ್‌ನೊಂದಿಗೆ 524 ರನ್ ಗಳಿಸಿದ್ದ ಪೂರನ್, ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಿಂದ ಹೊರಗುಳಿದ ಕೆಲವೇ ದಿನಗಳಲ್ಲಿ ಈ ಅನಿರೀಕ್ಷಿತ ನಿರ್ಧಾರ ಪ್ರಕಟಿಸಿದ್ದಾರೆ.

"ಸಾಕಷ್ಟು ಯೋಚಿಸಿದ ನಂತರ, ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ" ಎಂದು ಪ್ರತಿಭಾವಂತ ಆಟಗಾರ ಪೂರನ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

View post on Instagram
 

 

ಮೊದಲು ವೆಸ್ಟ್ ಇಂಡೀಸ್ ಟಿ20 ತಂಡದ ನಾಯಕರಾಗಿದ್ದ ಪೂರನ್, ಮುಂದಿನ ಟಿ20 ವಿಶ್ವಕಪ್‌ಗೆ ಕೇವಲ ಎಂಟು ತಿಂಗಳು ಬಾಕಿ ಇರುವಾಗಲೇ ನಿವೃತ್ತಿ ಘೋಷಿಸಿದ್ದಾರೆ. ಈ ವಿಶ್ವಕಪ್ ಅನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿವೆ.

"ನಾವು ಪ್ರೀತಿಸುವ ಈ ಕ್ರೀಡೆಯು ನನಗೆ ಬಹಳಷ್ಟು ನೀಡಿದೆ ಮತ್ತು ಮುಂದೆಯೂ ನೀಡುತ್ತದೆ - ಸಂತೋಷ, ಉದ್ದೇಶ, ಮರೆಯಲಾಗದ ನೆನಪುಗಳು ಮತ್ತು ವೆಸ್ಟ್ ಇಂಡೀಸ್ ಜನರನ್ನು ಪ್ರತಿನಿಧಿಸುವ ಅವಕಾಶ. ಆ ಮೆರೂನ್ ಜೆರ್ಸಿಯನ್ನು ಧರಿಸುವುದು, ರಾಷ್ಟ್ರಗೀತೆಗಾಗಿ ನಿಲ್ಲುವುದು, ಪ್ರತಿ ಬಾರಿಯೂ ಕ್ರೀಡಾಂಗಣಕ್ಕೆ ಇಳಿಯುವಾಗ ನನ್ನಿಂದಾದ ಎಲ್ಲವನ್ನೂ ನೀಡುವುದು. ಅದರ ನಿಜವಾದ ಅರ್ಥವನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಕಷ್ಟ. ತಂಡದ ನಾಯಕನಾಗಿ ನೇತೃತ್ವ ವಹಿಸುವುದು ನನ್ನ ಹೃದಯಕ್ಕೆ ಹತ್ತಿರವಾದ ಗೌರವ."

"ಅಭಿಮಾನಿಗಳಿಗೆ - ನಿಮ್ಮ ನಿರಂತರ ಪ್ರೀತಿಗೆ ಧನ್ಯವಾದಗಳು. ಕಠಿಣ ಸಮಯದಲ್ಲಿ ನೀವು ನನ್ನನ್ನು ಹುರಿದುಂಬಿಸಿದ್ದೀರಿ, ಒಳ್ಳೆಯ ಸಮಯವನ್ನು ಅದ್ಭುತ ಉತ್ಸಾಹದಿಂದ ಆಚರಿಸಿದ್ದೀರಿ. ನನ್ನ ಕುಟುಂಬ, ಸ್ನೇಹಿತರು ಮತ್ತು ತಂಡದ ಸದಸ್ಯರಿಗೆ - ಈ ಪ್ರಯಾಣದಲ್ಲಿ ನನ್ನೊಂದಿಗೆ ಇದ್ದಿದ್ದಕ್ಕಾಗಿ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.

ಪೂರನ್ 2016 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಕೊನೆಯದಾಗಿ ಜುಲೈ 2023 ರಲ್ಲಿ ವೆಸ್ಟ್ ಇಂಡೀಸ್ ಪರ ಏಕದಿನ ಪಂದ್ಯವನ್ನು ಆಡಿದರು. ಕಳೆದ ವರ್ಷದ ಟಿ20 ವಿಶ್ವಕಪ್ ತಂಡದಲ್ಲಿದ್ದ ಅವರು, ಡಿಸೆಂಬರ್ 2024 ರಲ್ಲಿ ತಮ್ಮ ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು. 2021 ಮತ್ತು 2022 ರ ನಡುವೆ 15 ಟಿ20 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಿದ್ದರು.

"ನನ್ನ ಜೀವನದ ಈ ಅಂತಾರಾಷ್ಟ್ರೀಯ ಅಧ್ಯಾಯ ಮುಗಿದಿದ್ದರೂ, ವೆಸ್ಟ್ ಇಂಡೀಸ್ ಕ್ರಿಕೆಟ್ ಮೇಲಿನ ನನ್ನ ಪ್ರೀತಿ ಎಂದಿಗೂ ಮಾಸುವುದಿಲ್ಲ. ತಂಡಕ್ಕೆ ಭವಿಷ್ಯದಲ್ಲಿ ಯಶಸ್ಸು ಮತ್ತು ಶಕ್ತಿ ಸಿಗಲಿ ಎಂದು ನಾನು ಹಾರೈಸುತ್ತೇನೆ" ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ನಿಕೋಲಸ್ ಪೂರನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರೂ, ಟಿ20 ಫ್ರಾಂಚೈಸಿ ಲೀಗ್‌ನಲ್ಲಿ ಮುಂದುವರೆಯಲಿದ್ದಾರೆ. ಐಪಿಎಲ್ 2025 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರಲ್ಲಿ ಒಬ್ಬರಾಗಿದ್ದ ಅವರನ್ನು ಲಖನೌ ಸೂಪರ್ ಜೈಂಟ್ಸ್‌ ತಂಡವು 21 ಕೋಟಿ ರೂಪಾಯಿಗಳಿಗೆ ಉಳಿಸಿಕೊಂಡಿತ್ತು.