ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ದುಬೈನಲ್ಲೇ ಎಲ್ಲಾ ಪಂದ್ಯಗಳನ್ನಾಡಿದೆ. ಆದರೆ ನ್ಯೂಜಿಲೆಂಡ್ ತಂಡ ಸುಮಾರು 7,048 ಕಿ.ಮೀ ಪ್ರಯಾಣಿಸಿದೆ. ದಕ್ಷಿಣ ಆಫ್ರಿಕಾ ತಂಡದ ಆಟಗಾರ ಮಿಲ್ಲರ್ ಸೆಮಿಫೈನಲ್ ವೇಳಾಪಟ್ಟಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆ.ಎಲ್.ರಾಹುಲ್ ಒತ್ತಡದಲ್ಲಿದ್ದಾರೆ, ಒಂದು ಇನ್ನಿಂಗ್ಸ್ ವಿಫಲವಾದರೂ ಟೀಕೆ ಎದುರಿಸುತ್ತಾರೆ ಎಂದು ಕುಂಬ್ಳೆ ಹೇಳಿದ್ದಾರೆ.
ದುಬೈ: ಭಾರತ ತಂಡ ಈ ಬಾರಿ ಚಾಂಪಿಯನ್ಸ್ ಟ್ರೋಫಿಯ ಎಲ್ಲಾ ಪಂದ್ಯಗಳನ್ನು ದುಬೈ ಕ್ರೀಡಾಂಗಣದಲ್ಲೇ ಆಡಿದೆ. ಫೈನಲ್ ಪಂದ್ಯ ಕೂಡಾ ದುಬೈನಲ್ಲೇ ನಿಗದಿಯಾಗಿದೆ. ಅಂದರೆ ಆಟಗಾರರು ಭಾರತದಿಂದ ದುಬೈಗೆ ಪ್ರಯಾಣಿಸಿದ ಬಳಿಕ ಒಂದೇ ಕ್ರೀಡಾಂಗಣ, ಒಂದೇ ಹೋಟೆಲ್‌ನಲ್ಲೇ ಉಳಿದುಕೊಂಡಿದ್ದಾರೆ. ಒಂದರ್ಥದಲ್ಲಿ ತಂಡಕ್ಕಿದು ವರದಾನ. ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನಾಡಲು ಪಾಕಿಸ್ತಾನ ಪ್ರವಾಸಕ್ಕೆ ಹಿಂದೇಟು ಹಾಕಿದ್ದರಿಂದ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜನೆಗೊಂಡಿದೆ
ಆದರೆ ಫೈನಲ್‌ಗೇರಿರುವ ಮತ್ತೊಂದು ತಂಡ ನ್ಯೂಜಿಲೆಂಡ್‌ನ ಪರಿಸ್ಥಿತಿ ಭಿನ್ನ. ಟೂರ್ನಿಯುದ್ದಕ್ಕೂ ನ್ಯೂಜಿಲೆಂಡ್ ಆಟಗಾರರು ಅಂದಾಜು 7,048 ಕಿ.ಮೀ. ಪ್ರಯಾಣಿಸಿದ್ದಾರೆ. ಟೂರ್ನಿಗೆ ಕೆಲ ದಿನಗಳ ಮುನ್ನ ನ್ಯೂಜಿಲೆಂಡ್‌ನಿಂದ ಪಾಕಿಸ್ತಾನಕ್ಕೆ ಆಗಮಿಸಿದ್ದ ಕಿವೀಸ್ ಆಟಗಾರರು, ಫೆ.19ಕ್ಕೆ ಕರಾಚಿಯಲ್ಲಿ ಪಾಕಿಸ್ತಾನ ವಿರುದ್ಧ ಆಡಿ, ಫೆ.24ರ ಬಾಂಗ್ಲಾದೇಶ ವಿರುದ್ಧ ಪಂದ್ಯಕ್ಕಾಗಿ ರಾವಲ್ಪಿಂಡಿಗೆ ತೆರಳಿದ್ದರು. ಆ ಬಳಿಕ ಮಾ.2ರ ಭಾರತ ವಿರುದ್ಧ ಪಂದ್ಯಕ್ಕಾಗಿ ನ್ಯೂಜಿಲೆಂಡ್ ತಂಡ ಯುಎಇ ದೇಶದ ದುಬೈಗೆ ಪ್ರಯಾಣಿಸಿದೆ. ಬಳಿಕ ಮಾ.5ರ ಸೆಮಿಫೈನಲ್ ಪಂದ್ಯಕ್ಕಾಗಿ ಮತ್ತೆ ಲಾಹೋರ್‌ಗೆ ತೆರಳಿದೆ. ಗುರುವಾರ ಮತ್ತೆ ದುಬೈಗೆ ಪ್ರಯಾಣಿಸಿದ್ದು, ಮಾ.9ರಂದು ಭಾರತ ವಿರುದ್ಧ ಫೈನಲ್ ಆಡಲಿದೆ.
ಇದನ್ನೂ ಓದಿ: ಕ್ರೀಡಾಂಗಣದಲ್ಲಿ ನಿದ್ದೆ ಮಾಡಿದ ತಪ್ಪಿಗೆ ಪಾಕ್ ಕ್ರಿಕೆಟಿಗನಿಗೆ ವಿಚಿತ್ರ ಶಿಕ್ಷೆ!
ಇದೇ ವೇಳೆ, ಇಂಗ್ಲೆಂಡ್, ಅಫ್ಘಾನಿಸ್ತಾನ ತಂಡಗಳು ಟೂರ್ನಿ ವೇಳೆ 1,020 ಕಿ.ಮೀ, ಬಾಂಗ್ಲಾದೇಶ 1,953 ಕಿ.ಮೀ., ಆಸ್ಟ್ರೇಲಿಯಾ 2,509 ಕಿ.ಮೀ, ಪಾಕಿಸ್ತಾನ 3,133 ಕಿ.ಮೀ., ಹಾಗೂ ದಕ್ಷಿಣ ಆಫ್ರಿಕಾ 3,286 ಕಿ.ಮೀ. ಪ್ರಯಾಣಿಸಿದೆ.
ಚಾಂಪಿಯನ್ಸ್ ಟ್ರೋಫಿ: ಸೆಮಿಫೈನಲ್ ವೇಳಾಪಟ್ಟಿ ಬಗ್ಗೆ ಮಿಲ್ಲರ್ ಅಸಮಾಧಾನ
ಲಾಹೋರ್: ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯಗಳ ವೇಳಾಪಟ್ಟಿ ಬಗ್ಗೆ ದಕ್ಷಿಣ ಆಫ್ರಿಕಾ ಬ್ಯಾಟರ್ ಡೇವಿಡ್ ಮಿಲ್ಲರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುಂಪು ಹಂತದ ಪಂದ್ಯಗಳ ಬಳಿಕ ಪಾಕಿಸ್ತಾನದಿಂದ ದುಬೈಗೆ ಪ್ರಯಾಣಿಸಿದ್ದ ದ.ಆಫ್ರಿಕಾ, ಮರು ದಿನವೇ ಸೆಮಿಫೈನಲ್ ಆಡಲು ಲಾಹೋರ್‌ಗೆ ಮರಳಿತ್ತು.
ಈ ಬಗ್ಗೆ ಮಾತನಾಡಿರುವ ಮಿಲ್ಲರ್, 'ವಿಮಾನ ಪ್ರಯಾಣ ಕೇವಲ 1 ಗಂಟೆ 40 ನಿಮಿಷ ಮಾತ್ರ. ಆದರೆ ಅದಕ್ಕೆ ನಾವು ಸಿದ್ಧವಾಗಬೇಕಿತ್ತು. ಪಂದ್ಯದ ಬಳಿಕ, ಬೆಳ್ಳಂಬೆಳಗ್ಗೆ 4 ಗಂಟೆಗೆ ಎದ್ದು ನಾವು ದುಬೈಗೆ ಪ್ರಯಾಣಿಸಿದ್ದೆವು. 7.30ಕ್ಕೆ ಮರಳಿ ಬರಬೇಕಾಯಿತು ಎಂದಿದ್ದಾರೆ.
ಇದನ್ನೂ ಓದಿ: 'ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಗಢಾಫಿ ಸ್ಟೇಡಿಯಂ': ಪಾಕ್ ಕಾಲೆಳೆದ ನೆಟ್ಟಿಗರು!
ರಾಹುಲ್ ಒಂದು ಇನ್ನಿಂಗ್ಸ್ ವಿಫಲವಾದರೂ ಕ್ರಿಕೆಟ್ ಜಗತ್ತು ಟೀಕಿಸುತ್ತೆ: ಕುಂಬ್ಳೆ
ದುಬೈ: ಭಾರತದ ನಾಐಕ ರೋಹಿತ್ ಶರ್ಮಾ, ಮುಖ್ಯ ಕೋಚ್ ಗೌತಮ್ ಗಂಭೀರ್‌ರಿಂದಾಗಿ ಕೆ.ಎಲ್.ರಾಹುಲ್ ತೀವ್ರ ಒತ್ತಡದಲ್ಲಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ‘ಅಕ್ಷರ್ ಪಟೇಲ್‌ಗೂ ಮುನ್ನ ರಾಹುಲ್ ಬ್ಯಾಟಿಂಗ್‌ಗೆ ಆಗಮಿಸಬೇಕು. ಅಕ್ಷರ್ ಉತ್ತಮ ಆಟವಾಡುತ್ತಿದ್ದಾರೆ. ಆದರೆ ರಾಹುಲ್ ಕೂಡಾ ಉತ್ತಮ ಆಟವಾಡಬಲ್ಲರು. ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಒಂದು ಅವಕಾಶವನ್ನು ಕೈಚೆಲ್ಲಿದರು. ಅದರ ಹೊರತಾಗಿಯೂ ಕೆ.ಎಲ್. ಉತ್ತಮ ಪ್ರದರ್ಶನ ನೀಡುತ್ತಾರೆ. ಸದ್ಯ ಅವರ ಮೇಲೆ ತೀವ್ರ ಒತ್ತಡ ಇದೆ. ಅವರು ಒಂದು ಪಂದ್ಯದಲ್ಲಿ ವಿಫಲರಾದರೂ, ಇಡೀ ಕ್ರಿಕೆಟ್ ಜಗತ್ತೇ ಟೀಕಿಸಲು ಶುರು ಮಾಡುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
