ಟಿ20 ಸರಣಿ ಸೋಲಿನ ಬೆನ್ನಲ್ಲೇ ಕಿವೀಸ್‌ಗೆ ಮತ್ತೊಂದು ಶಾಕ್
ಭಾರತ ವಿರುದ್ಧದ ವೈಟ್‌ವಾಷ್ ಶಾಕ್‌ನಿಂದ ಹೊರಬೀಳುವ ಮೊದಲೇ ಕಿವೀಸ್ ಪಡೆಗೆ ಮತ್ತೊಂದು ಶಾಕ್ ಎದುರಾಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...
ವೆಲ್ಲಿಂಗ್ಟನ್(ಫೆ.04): ತವರಿನಲ್ಲೇ ಭಾರತದ ಎದುರು ಹೀನಾಯವಾಗಿ ಟಿ20 ಸರಣಿ ಸೋತಿರುವ ನ್ಯೂಜಿಲೆಂಡ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಗಾಯದ ಸಮಸ್ಯೆಯಿಂದಾಗಿ ಕಿವೀಸ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಭಾರತದ ವಿರುದ್ಧದ ಮೊದಲೆರಡು ಪಂದ್ಯಗಳಿಂದ ಹೊರಬಿದ್ದಿದ್ದಾರೆ.
ಸರಣಿ ಕ್ಲೀನ್ ಸ್ವೀಪ್ ಮಾಡಿ ಸೇಡು ತೀರಿಸಿಕೊಂಡ ಟೀಂ ಇಂಡಿಯಾ
ಹ್ಯಾಮಿಲ್ಟನ್‌ನಲ್ಲಿ ನಡೆದ ಭಾರತ ವಿರುದ್ಧ ಮೂರನೇ ಟಿ20 ಪಂದ್ಯದ ವೇಳೆಯಲ್ಲೇ ವಿಲಿಯಮ್ಸನ್ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಉಳಿದೆರಡು ಟಿ20 ಪಂದ್ಯಗಳಿಂದಲೂ ವಿಲಿಯಮ್ಸನ್ ವಿಶ್ರಾಂತಿ ತೆಗೆದುಕೊಂಡಿದ್ದರು. ಕೇನ್ ಅನುಪಸ್ಥಿತಿಯಲ್ಲಿ ಟಿಮ್ ಸೌಥಿ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿದ್ದರು.
ಕೇನ್ ಗಾಯದ ಬಗ್ಗೆ ಎಕ್ಸ್-ರೇ ತೆಗೆಯಲಾಗಿದೆ. ಗಂಭೀರವಾದ ಗಾಯಗಳೇನು ಆಗಿಲ್ಲ. ಆದರೆ ಅವರಿಗೆ ಕೆಲದಿನಗಳ ಮಟ್ಟಿಗೆ ಪ್ರಸ್ತುತ ವಿಶ್ರಾಂತಿಯ ಅಗತ್ಯವಿದೆ ಎಂದು ನ್ಯೂಜಿಲೆಂಡ್ ತಂಡದ ಫಿಸಿಯೋ ವಿಜಯ್ ವಲ್ಲಭ್ ತಿಳಿಸಿದ್ದಾರೆ.
ವಿಲಿಯಮ್ಸನ್ ತಂಡದಿಂದ ಹೊರಬಿದ್ದಿದ್ದರಿಂದ ಅವರ ಸ್ಥಾನಕ್ಕೆ ಆಲ್ರೌಂಡರ್ ಮಾರ್ಕ್ ಕ್ಯಾಂಪ್‌ನ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಕಿವೀಸ್ ತಂಡವನ್ನು ಟಾಮ್ ಲಾಥಮ್ ಮುನ್ನಡೆಸಲಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಫೆಬ್ರವರಿ 5ರಂದು ಹ್ಯಾಮಿಲ್ಟನ್‌ನಲ್ಲಿ ನಡೆಯಲಿದೆ.