ಮೌಂಟ್‌ ಮಾಂಗನ್ಯುಯಿ(ಫೆ.02): ರಾಸ್ ಟೇಲರ್, ಟಿಮ್ ಸೈಫರ್ಟ್ ಅರ್ಧಶತಕದ ಹೊರತಾಗಿಯೂ ಟೀಂ ಇಂಡಿಯಾ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ 7 ರನ್‌ಗಳ ರೋಚಕ ಸೋಲು ಕಂಡಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡುವುದರ ಮೂಲಕ ಏಕದಿನ ವಿಶ್ವಕಪ್ ಸೆಮಿಫೈನಲ್‌ ಸೋಲಿನ ಸೇಡು ತೀರಿಸಿಕೊಂಡಿದೆ.

ಟೀಂ ಇಂಡಿಯಾ ನೀಡಿದ್ದ 164 ರನ್‌ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಎರಡನೇ ಓವರ್‌ನಲ್ಲೇ ಆಘಾತ ಅನುಭವಿಸಿತು. ಮಾರ್ಟಿನ್ ಗಪ್ಟಿಲ್ ಕೇವಲ 2 ರನ್ ಗಳಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಇದಾಗಿ ಕೆಲವೇ ಹೊತ್ತಿನಲ್ಲಿ ಕಾಲಿನ್ ಮನ್ರೋ ಸಹಾ ವಿಕೆಟ್ ಒಪ್ಪಿಸಿದರು. ಗಾಯದ ಮೇಲೆ ಬರೆ ಎಳೆದಂತೆ ಟಾಮ್ ಬ್ರೂಸ್ ರನೌಟ್ ಆದಾಗ ಕಿವೀಸ್ ಪಾಳಯದಲ್ಲಿ ಆತಂಕ ಮನೆ ಮಾಡಿತು. ಕೇವಲ 17 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿದ್ದ ನ್ಯೂಜಿಲೆಂಡ್ ತಂಡಕ್ಕೆ ಟಿಮ್ ಸೈಫರ್ಟ್- ರಾಸ್ ಟೇಲರ್ ಆಸರೆಯಾದರು. 

ಟೇಲರ್-ಸೈಫರ್ಟ್ 99 ರನ್‌ಗಳ ಜತೆಯಾಟ: ಒಂದು ಹಂತದಲ್ಲಿ 17 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕಿವೀಸ್ ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಟಿಮ್ ಸೈಫರ್ಟ್-ರಾಸ್ ಟೇಲರ್ ಆಸರೆಯಾದರು. 4ನೇ ವಿಕೆಟ್‌ಗೆ ಈ ಜೋಡಿ 99 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. 30 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 50 ರನ್ ಬಾರಿಸಿದ್ದ ಸೈಫರ್ಟ್, ಸೈನಿ ಬೌಲಿಂಗ್‌ನಲ್ಲಿ ಸಂಜು ಸ್ಯಾಮ್ಸನ್‌ಗೆ ಸುಲಭ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು ನೂರನೇ ಟಿ20 ಪಂದ್ಯವನ್ನಾಡಿದ ರಾಸ್ ಟೇಲರ್ 47 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 53 ರನ್ ಬಾರಿಸಿ ಸೈನಿಗೆ ಎರಡನೇ ಬಲಿಯಾದರು.

ರೋಹಿತ್ ಫಿಫ್ಟಿ: ಕಿವೀಸ್‌ಗೆ ಸವಾಲಿನ ಗುರಿ ನೀಡಿದ ಟೀಂ ಇಂಡಿಯಾ

ನಾಟಕೀಯ ಕುಸಿತ: ಒಂದು ಹಂತದಲ್ಲಿ 12 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 113 ರನ್ ಬಾರಿಸಿದ್ದ ಕಿವೀಸ್, ಸೈಫರ್ಟ್ ವಿಕೆಟ್ ಪತನದ ಬಳಿಕ ನಾಟಕೀಯ ಕುಸಿತ ಕಂಡಿತು. ಕೊನೆಯ 8 ಓವರ್‌ಗಳಲ್ಲಿ ನ್ಯೂಜಿಲೆಂಡ್ ಗೆಲ್ಲಲು ಕೇವಲ 51 ರನ್‌ಗಳ ಅವಶ್ಯಕತೆಯಿತ್ತು. ಸುಲಭ ಗೆಲುವಿನ ಕನವರಿಕೆಯಲ್ಲಿದ್ದ ಕಿವೀಸ್‌ಗೆ ಸೈನಿ ಶಾಕ್ ನೀಡಿದರು. ಸೈಫರ್ಟ್ ವಿಕೆಟ್ ಪತನದ ಬಳಿಕ ಕೇವಲ 25 ರನ್‌ಗಳ ಅಂತರಲ್ಲಿ 5 ವಿಕೆಟ್ ಕಳೆದುಕೊಂಡಿತು.  
ಮಿಚೆಲ್ ಸ್ಯಾಂಟ್ನರ್, ಡೇರಲ್ ಮಿಚೆಲ್ ಸೇರಿದಂತೆ ಕೆಳಕ್ರಮಾಂಕದ ಯಾವೊಬ್ಬ ಬ್ಯಾಟ್ಸ್‌ಮನ್ ಸಹಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಕೊನೆಯಲ್ಲಿ ಇಶ್ ಸೋಧಿ ಎರಡು ಸಿಕ್ಸರ್ ಸಿಡಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. 

ಭಾರತ ಪರ ಶಿಸ್ತಿನ ದಾಳಿ ನಡೆಸಿದ ಬುಮ್ರಾ ಕೇವಲ 11 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಸೈನಿ ಹಾಗೂ ಶಾರ್ದೂಲ್ ಠಾಕೂರ್ 2 ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ರೋಹಿತ್ ಶರ್ಮಾ (60) ಆಕರ್ಷಕ ಅರ್ಧಶತಕ ಹಾಗೂ ಕೆ.ಎಲ್. ರಾಹುಲ್ 45 ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 163 ರನ್ ಗಳಿಸಿತ್ತು.


ಫೆಬ್ರವರಿ 2ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ವಿಕ್ ಮಾಡಿ