Asianet Suvarna News Asianet Suvarna News

Eng vs NZ: ವಿಚಿತ್ರ ರೀತಿಯಲ್ಲಿ ಔಟಾದ ಹೆನ್ರಿ ನಿಕೋಲ್ಸ್‌..! ಎಂಸಿಸಿ ನಿಯಮವೇನಿದೆ ಗೊತ್ತಾ..?

* ಇಂಗ್ಲೆಂಡ್ ಎದುರು ವಿಚಿತ್ರ ರೀತಿಯಲ್ಲಿ ವಿಕೆಟ್ ಒಪ್ಪಿಸಿದ ಹೆನ್ರಿ ನಿಕೋಲ್ಸ್
* ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್‌ಗೆ ಲೀಡ್ಸ್‌ ಆತಿಥ್ಯ
* ಹೆನ್ರಿ ನಿಕೋಲ್ಸ್‌ ಔಟಾದ ರೀತಿಯ ಬಗ್ಗೆ ಸ್ಪಷ್ಟನೆ ನೀಡಿದ ಎಂಸಿಸಿ

New Zealand Batter Henry Nicholls gets dismissed in bizarre manner MCC clarifies the law kvn
Author
Bengaluru, First Published Jun 24, 2022, 12:47 PM IST

ಲೀಡ್ಸ್‌(ಜೂ.24): ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ಹಾಗೂ ಆತಿಥೇಯ ಇಂಗ್ಲೆಂಡ್ (New Zealand vs England) ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೆ ಲೀಡ್ಸ್‌ನ (Leeds Test) ಹೆಡಿಂಗ್ಲೇ ಮೈದಾನ ಆತಿಥ್ಯವನ್ನು ವಹಿಸಿದೆ. ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನವೇ ನ್ಯೂಜಿಲೆಂಡ್‌ನ ಬ್ಯಾಟರ್ ಹೆನ್ರಿ ನಿಕೋಲ್ಸ್‌ (Henry Nicholls gets dismissed in bizarre manner) ವಿಚಿತ್ರ ರೀತಿಯಲ್ಲಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ನಿಕೋಲ್ಸ್‌ ವಿಕೆಟ್ ಒಪ್ಪಿಸಿದ ರೀತಿ ಕಂಡು ಬೌಲರ್ ಸ್ವತಃ ಜಾಕ್ ಲೀಚ್ ಕೂಡಾ ಒಂದು ಕ್ಷಣ ತಬ್ಬಿಬ್ಬಾಗಿ ಹೋದರು.

ಹೌದು, ಲೀಡ್ಸ್ ಟೆಸ್ಟ್ ಪಂದ್ಯದ ವೇಳೆ ಜಾಕ್ ಲೀಚ್ ಎಸೆದ ಚೆಂಡನ್ನು ನ್ಯೂಜಿಲೆಂಡ್‌ನ ಎಡಗೈ ಬ್ಯಾಟರ್ ಹೆನ್ರಿ ನಿಕೋಲ್ಸ್‌ (Henry Nicholls) ನೇರವಾಗಿ ಬಾರಿಸಿದರು. ಆದರೆ ನಾನ್‌ಸ್ಟ್ರೈಕರ್‌ನಲ್ಲಿದ್ದ ಡೇರೆಲ್ ಮಿಚೆಲ್ ಬ್ಯಾಟ್‌ಗೆ ತಗುಲಿದ ಚೆಂಡು ಮಿಡ್ ಅಫ್‌ನಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಅಲೆಕ್ಸ್‌ ಲೀಸ್ ಕೈ ಸೇರಿದೆ. ಈ ಮೂಲಕ ವಿಚಿತ್ರವಾಗಿ ನಿಕೋಲ್ಸ್ ತಮ್ಮದಲ್ಲದ ತಪ್ಪಿಗೆ ವಿಕೆಟ್ ಒಪ್ಪಿಸಿದ್ದಾರೆ.

ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನ 56ನೇ ಓವರ್‌ನಲ್ಲಿ ಈ ರೀತಿಯ ಅಚ್ಚರಿಯ ಘಟನೆ ಸಂಭವಿಸಿದೆ. ಆಫ್‌ಸ್ಪಿನ್ನರ್ ಜಾಕ್ ಲೀಚ್ (Jack Leach) ಎಸೆದ ಚೆಂಡನ್ನು ನಿಕೋಲ್ಸ್‌ ನೇರವಾಗಿ ಬಿರುಸಾಗಿ ಬಾರಿಸಿದ್ದಾರೆ. ನಾನ್‌ಸ್ಟ್ರೈಕರ್‌ನಲ್ಲಿದ್ದ ಬ್ಯಾಟರ್‌ ಡೇರಲ್ ಮಿಚೆಲ್ ಬಾಲ್‌ ತಗುಲಿಸಿಕೊಳ್ಳದಂತೆ ಎಚ್ಚರವಹಿಸಿದರಾದರೂ ಯಶಸ್ವಿಯಾಗಲಿಲ್ಲ. ಹೆನ್ರಿ ನಿಕೋಲ್ಸ್‌ 19 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ನ್ಯೂಜಿಲೆಂಡ್ ತಂಡವು 123 ರನ್ ಗಳಿಸುವಷ್ಟರಲ್ಲಿ 5ನೇ ವಿಕೆಟ್ ಕಳೆದುಕೊಂಡಿತು. ಹೆನ್ರಿ ನಿಕೋಲ್ಸ್ ಔಟಾದ ರೀತಿಗೆ ವೀಕ್ಷಕ ವಿವರಣೆ ನೀಡುತ್ತಿದ್ದ ಮಾಜಿ ಕ್ರಿಕೆಟಿಗ ನಾಸಿರ್ ಹುಸೈನ್ ಕೂಡಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. 

ಇನ್ನು ಕ್ರಿಕೆಟ್ ಕುರಿತಾಗಿ ನೀತಿ ನಿಯಮ ರೂಪಿಸುವ ಮೆರಿಲ್ಬೋನ್ ಕ್ರಿಕೆಟ್ ಕ್ಲಬ್(ಎಂಸಿಸಿ) ಈ ರೀತಿಯ ಘಟನೆ ನಡೆದರೇ ನಿಯಮ ಏನು ಹೇಳುತ್ತದೆ ಎನ್ನುವುದನ್ನು ವಿಸ್ತ್ರತವಾಗಿ ವಿವರಿಸಿದೆ. ಇದೊಂದು ದುರಾದೃಷ್ಟಕರ ಔಟಾ? ಆದರೆ ಇದು ನಿಯಮದಲ್ಲಿಯೇ ಇದೆ.  ಎಂಸಿಸಿ ನಿಯಮದ 33.2.2.3ರ ಪ್ರಕಾರ ಇದು ಔಟ್. ಬ್ಯಾಟ್‌ನಿಂದ ನೆಲಕ್ಕೆ ತಾಗದೇ ಚೆಂಡು ಅಂಪೈರ್, ಮತ್ತೋರ್ವ ಫೀಲ್ಡರ್, ರನ್ನರ್ ಅಥವಾ ಮತ್ತೋರ್ವ ಬ್ಯಾಟರ್‌ಗೆ ತಾಗಿ ನೇರವಾಗಿ ಚೆಂಡನ್ನು ಕ್ಯಾಚ್ ಹಿಡಿದರೇ ಅದನ್ನು ಔಟ್ ಎಂದೇ ತೀರ್ಮಾನಿಸಲಾಗುತ್ತದೆ ಎಂದು ತಿಳಿಸಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಮ್ಮೆಯೂ ಸೊನ್ನೆಗೆ ಔಟಾಗಿಲ್ಲ ಟೀಂ ಇಂಡಿಯಾದ ಈ ಕ್ರಿಕೆಟಿಗ..!

ಇನ್ನು ಲೀಡ್ಸ್‌ ಟೆಸ್ಟ್ ಪಂದ್ಯದ ವಿಚಾರವನ್ನು ಹೇಳುವುದಾದರೇ, ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ನ್ಯೂಜಿಲೆಂಡ್ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟರ್ ಟಾಮ್ ಲೇಥಮ್ ಖಾತೆ ತೆರೆಯುವ ಮುನ್ನವೇ ಮೊದಲ ಓವರ್‌ನಲ್ಲೇ ಸ್ಟುವರ್ಟ್‌ ಬ್ರಾಡ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ವಿಲ್ ಯಂಗ್ ಬ್ಯಾಟಿಂಗ್ 20 ರನ್‌ಗಳಿಗೆ ಸೀಮಿತವಾಯಿತು. ಇನ್ನು ಕೋವಿಡ್‌ನಿಂದ ಚೇತರಿಸಿಕೊಂಡು ಕಣಕ್ಕಿಳಿದ ಕೇನ್ ವಿಲಿಯಮ್ಸನ್ 31 ರನ್ ಬಾರಿಸಿ ಸ್ಟುವರ್ಟ್ ಬ್ರಾಡ್‌ಗೆ ಎರಡನೇ ಬಲಿಯಾದರು. ಡೆವೊನ್ ಕಾನ್‌ವೇ(26) ಹಾಗೂ ಹೆನ್ರಿ ನಿಕೋಲ್ಸ್‌(19) ಕೂಡಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲಿಲ್ಲ. ನ್ಯೂಜಿಲೆಂಡ್ ತಂಡವು 123 ರನ್ ಗಳಿಸುವಷ್ಟರಲ್ಲಿ 5ನೇ ವಿಕೆಟ್ ಕಳೆದುಕೊಂಡಿತು. ಈ ವೇಳೆ 6ನೇ ವಿಕೆಟ್‌ಗೆ ಜತೆಯಾದ ಡೇರೆಲ್ ಮಿಚೆಲ್ ಹಾಗೂ ಟಾಮ್ ಬ್ಲಂಡೆಲ್ ಜೋಡಿ ಮುರಿಯದ 102 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 200ರ ಗಡಿದಾಟಿಸಿದೆ. ಮೊದಲ ದಿನದಾಟದಂತ್ಯದ ವೇಳೆಗೆ ನ್ಯೂಜಿಲೆಂಡ್ 5 ವಿಕೆಟ್ ಕಳೆದುಕೊಂಡು 225 ರನ್ ಬಾರಿಸಿದ್ದು, ಡೇರೆಲ್ ಮಿಚೆಲ್(78) ಹಾಗೂ ಟಾಮ್ ಬ್ಲಂಡೆಲ್(45) ರನ್ ಬಾರಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

Follow Us:
Download App:
  • android
  • ios