ನಾಗ್ಪುರ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿದ ಟೀಂ ಇಂಡಿಯಾಆಲ್ರೌಂಡ್ ಪ್ರದರ್ಶನದ ಮೂಲಕ ಮಿಂಚಿದ ರವೀಂದ್ರ ಜಡೇಜಾ70 ರನ್ 7 ವಿಕೆಟ್ ಕಬಳಿಸಿದ ಜಡೇಜಾಗೆ ಒಲಿದ ಪಂದ್ಯಶ್ರೇಷ್ಠ ಪ್ರಶಸ್ತಿ
ನಾಗ್ಪುರ(ಫೆ.11): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇನಿಂಗ್ಸ್ ಹಾಗೂ 132 ರನ್‌ಗಳ ಅಂತರದ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯ ಭಾರತ ತಂಡವು 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ತಾರಾ ಆಲ್ರೌಂಡರ್ ರವೀಂದ್ರ ಜಡೇಜಾ, ತಮ್ಮ ಕಮ್‌ಬ್ಯಾಕ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾದರು.
ಫಿಟ್ನೆಸ್ ಸಮಸ್ಯೆಯಿಂದಾಗಿ ಬರೋಬ್ಬರಿ 5 ತಿಂಗಳಿನಿಂದ ಭಾರತ ಕ್ರಿಕೆಟ್ ತಂಡದಿಂದ ಹೊರಗುಳಿದಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ, ನಾಗ್ಪುರ ಟೆಸ್ಟ್ ಮೂಲಕ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ್ದರು. ತಮ್ಮ ಕಮ್‌ಬ್ಯಾಕ್ ಪಂದ್ಯದಲ್ಲಿ ಜಡೇಜಾ ಆಕರ್ಷಕ ಅರ್ಧಶತಕ ಸಿಡಿಸುವುದರ ಜತೆಗೆ 7 ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಜಡೇಜಾ, ನನ್ನ ಪ್ರದರ್ಶನದ ಬಗ್ಗೆ ತುಂಬಾ ಖುಷಿ ಎನಿಸುತ್ತಿದೆ. ಅದರಲ್ಲೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ 5 ತಿಂಗಳುಗಳ ಕಾಲ ದೂರವಿದ್ದು, ಬಳಿಕ ಆಡಿದ ಮೊದಲ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿದ್ದಕ್ಕೆ ಖುಷಿ ಎನಿಸುತ್ತಿದೆ ಎಂದು ಜಡ್ಡು ಹೇಳಿದ್ದಾರೆ.
"ನಿಜಕ್ಕೂ ಅದ್ಭುತ ಎನಿಸುತ್ತಿದೆ. 5 ತಿಂಗಳುಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿದ್ದು, ಆಡಿದ ಮೊದಲ ಪಂದ್ಯದಲ್ಲೇ ಒಳ್ಳೆಯ ರನ್‌ಗಳಿಸಿದ್ದು ಹಾಗೂ ವಿಕೆಟ್ ಕಬಳಿಸುವ ಮೂಲಕ 100% ಪ್ರದರ್ಶನ ತೋರಿದ್ದಕ್ಕೆ ನಿಜಕ್ಕೂ ಖುಷಿ ಎನಿಸುತ್ತಿದೆ. ಇದಕ್ಕಾಗಿ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಸಾಕಷ್ಟು ಕಠಿಣ ಪರಿಶ್ರಮ ಹಾಕಿದ್ದೇನೆ. ಈ ಸಂದರ್ಭದಲ್ಲಿ ನಾನು ಎನ್‌ಸಿಎನ ಎಲ್ಲಾ ಸಿಬ್ಬಂದಿಗಳಿಗೆ ಹಾಗೂ ಫಿಸಿಯೋಗಳಿಗೆ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ. ಅವರು ಕೂಡಾ ಭಾನುವಾರ ಎನ್ನುವುದನ್ನು ಲೆಕ್ಕಿಸದೇ, ನನ್ನ ಜತೆ ಕೆಲಸ ನಿರ್ವಹಿಸಿ ಸಹಕರಿಸಿದ್ದಾರೆ" ಎಂದು ರವೀಂದ್ರ ಜಡೇಜಾ ಹೇಳಿದ್ದಾರೆ.
Nagpur Test: ಅಶ್ವಿನ್ ಸ್ಪಿನ್ ಬಿರುಗಾಳಿಗೆ ಆಸೀಸ್ ಧೂಳೀಪಟ, ಮೊದಲ ಟೆಸ್ಟ್ ಭಾರತದ ಪಾಲು
"ನಾನು ಸರಿಯಾದ ಏರಿಯಾದಲ್ಲಿ ಬೌಲಿಂಗ್ ಮಾಡುತ್ತೇನೆ. ಚೆಂಡು ತಿರುವು ಪಡೆದುಕೊಳ್ಳುತ್ತಿತ್ತು. ಒಮ್ಮೆ ನೇರವಾಗಿ ಹೋಗುತ್ತಿತ್ತು. ಕೆಲವೊಮ್ಮೆ ಕಡಿಮೆ ಪುಟಿತ ಕಾಣುತ್ತಿತ್ತು. ಹೀಗಾಗಿ ವಿಕೆಟ್ ಟು ವಿಕೆಟ್ ಬೌಲಿಂಗ್ ಮಾಡಬೇಕು ಎಂದು ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ. ಒಂದು ವೇಳೆ ಅವರು ತಪ್ಪು ಮಾಡಿದರೆ, ಅದರ ಲಾಭ ನನಗಾಗುತ್ತದೆ ಎಂದು ಗೊತ್ತಿತ್ತು. ಹೀಗಾಗಿ ನಾನು ಸಿಂಪಲ್ ಆಗಿ ನನ್ನ ಪ್ಲಾನ್‌ಗೆ ತಕ್ಕಂತೆಯೇ ಬೌಲಿಂಗ್ ಮಾಡಿದೆ. ಇನ್ನು ಬ್ಯಾಟಿಂಗ್‌ನಲ್ಲಿಯೂ ನಾನು ಹೆಚ್ಚಿನ ಪ್ರಯೋಗ ಮಾಡಲು ಮುಂದಾಗಲಿಲ್ಲ" ಎಂದು ಜಡೇಜಾ ಹೇಳಿದರು.
ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾಗೆ ರವೀಂದ್ರ ಜಡೇಜಾ ಮಾರಕ ದಾಳಿ ನಡೆಸುವ ಮೂಲಕ ಕಾಂಗರೂ ಬ್ಯಾಟರ್‌ಗಳನ್ನು ಕಾಡಿದ್ದರು. ಜಡ್ಡು ಮೊದಲ ಇನಿಂಗ್ಸ್‌ನಲ್ಲಿ ಕೇವಲ 47 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ಇನ್ನು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದ ಜಡೇಜಾ 185 ಎಸೆತಗಳನ್ನು ಎದುರಿಸಿ 70 ರನ್ ಸಿಡಿಸಿದ್ದರು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಜಡೇಜಾ 2 ವಿಕೆಟ್ ಕಬಳಿಸಿ ಮಿಂಚಿದರು.
