Nagpur Test: ಅಶ್ವಿನ್ ಸ್ಪಿನ್ ಬಿರುಗಾಳಿಗೆ ಆಸೀಸ್ ಧೂಳೀಪಟ, ಮೊದಲ ಟೆಸ್ಟ್ ಭಾರತದ ಪಾಲು
ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಇನಿಂಗ್ಸ್ ಹಾಗೂ 132 ರನ್ ಅಂತರದ ಜಯ
31ನೇ ಬಾರಿಗೆ 5+ ವಿಕೆಟ್ ಕಬಳಿಸಿ ಬೀಗಿದ ರವಿಚಂದ್ರನ್ ಅಶ್ವಿನ್
ಕೇವಲ 91 ರನ್‌ಗಳಿಗೆ ಸರ್ವಪತನ ಕಂಡ ಆಸ್ಟ್ರೇಲಿಯಾ
ನಾಗ್ಪುರ(ಫೆ.11): ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮಾರಕ ದಾಳಿಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಅಕ್ಷರಶಃ ತತ್ತರಿಸಿ ಹೋಗಿದೆ. 223 ರನ್‌ಗಳ ಇನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಪ್ರವಾಸಿ ಆಸ್ಟ್ರೇಲಿಯಾ ತಂಡವು, ಮೂರನೇ ದಿನದಾಟದ ಚಹಾ ವಿರಾಮಕ್ಕೂ ಮೊದಲೇ ಕೇವಲ 91 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಭಾರತ, ನಾಗ್ಪುರ ಟೆಸ್ಟ್ ಪಂದ್ಯವನ್ನು 132 ರನ್ ಅಂತರದ ಗೆಲುವು ಸಾಧಿಸಿದೆ. ಇದರೊಂದಿಗೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ.
ಹೌದು, ಇಲ್ಲಿನ ವಿದರ್ಭ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರೀ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು, ಆರಂಭದಲ್ಲೇ ಉಸ್ಮಾನ್ ಖವಾಜ ವಿಕೆಟ್ ಕಳೆದುಕೊಂಡು ಆತಂಕಕ್ಕೆ ಸಿಲುಕಿತು. ಇನಿಂಗ್ಸ್‌ನ ಎರಡನೇ ಓವರ್‌ನಲ್ಲೇ ರವಿಚಂದ್ರನ್ ಅಶ್ವಿನ್, ಖವಾಜಗೆ ಪೆವಿಲಿಯನ್ ಹಾದಿ ತೋರಿಸಿದರು. 5 ರನ್ ಗಳಿಸಿ ಖವಾಜ, ವಿರಾಟ್ ಕೊಹ್ಲಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ಇನ್ನು ಮೊದಲ ಇನಿಂಗ್ಸ್‌ನಲ್ಲಿ 49 ರನ್ ಬಾರಿಸಿದ್ದ ಮಾರ್ನಸ್ ಲಬುಶೇನ್, ಎರಡನೇ ಇನಿಂಗ್ಸ್‌ನಲ್ಲಿ 17 ರನ್ ಬಾರಿಸಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಇನ್ನು ಸತತ ಎರಡು ಬೌಂಡರಿ ಬಾರಿಸಿ, ಆತ್ಮವಿಶ್ವಾಸಕ್ಕೆ ಮರಳುವ ಸೂಚನೆ ನೀಡಿದ್ದ ಡೇವಿಡ್ ವಾರ್ನರ್(10) ಅವರನ್ನು ಎಲ್‌ಬಿ ಬಲೆಗೆ ಕೆಡಹುವಲ್ಲಿ ರವಿಚಂದ್ರನ್ ಅಶ್ವಿನ್ ಯಶಸ್ವಿಯಾದರು. ಇನ್ನು ಮ್ಯಾಟ್ ರೆನ್‌ಶೋ(2) ಹಾಗೂ ಪೀಟರ್ ಹ್ಯಾಂಡ್ಸ್‌ಕಂಬ್(6) ಹೆಚ್ಚುಹೊತ್ತು ಕ್ರೀಸ್‌ನಲ್ಲಿರಲು ರವಿಚಂದ್ರನ್ ಅಶ್ವಿನ್ ಅವಕಾಶ ನೀಡಲಿಲ್ಲ. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ(10), ಅಶ್ವಿನ್‌ಗೆ 5ನೇ ಬಲಿಯಾದರು. ಇದರ ಬೆನ್ನಲ್ಲೇ ನಾಯಕ ಪ್ಯಾಟ್ ಕಮಿನ್ಸ್ ಕೇವಲ 1 ರನ್ ಬಾರಿಸಿ ರವೀಂದ್ರ ಜಡೇಜಾಗೆ ಎರಡನೇ ಬಲಿಯಾದರು. ಅಕ್ಷರ್ ಪಟೇಲ್, ಟೋಡ್ ಮರ್ಫಿಗೆ ಪೆವಿಲಿಯನ್ ಹಾದಿ ತೋರಿಸಿದರು. ಕೊನೆಯ ಎರಡು ವಿಕೆಟ್ ಕಬಳಿಸುವಲ್ಲಿ ಅನುಭವಿ ವೇಗಿ ಮೊಹಮ್ಮದ್ ಶಮಿ ಯಶಸ್ವಿಯಾದರು.
Nagpur Test: ಅಕ್ಷರ್ ಪಟೇಲ್ ದಿಟ್ಟ ಬ್ಯಾಟಿಂಗ್, ಭಾರತಕ್ಕೆ 223 ರನ್ ಮುನ್ನಡೆ
31ನೇ ಬಾರಿಗೆ 5 ವಿಕೆಟ್ ಗೊಂಚಲು ಪಡೆದ ಅಶ್ವಿನ್: ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್ ಕಬಳಿಸಿ ಮಿಂಚಿದ್ದ ರವಿಚಂದ್ರನ್ ಅಶ್ವಿನ್, ಎರಡನೇ ಇನಿಂಗ್ಸ್‌ನಲ್ಲಿ ತಮ್ಮ ಸ್ಪಿನ್ ಕೈಚಳಕ ತೋರಿಸುವಲ್ಲಿ ಯಶಸ್ವಿಯಾದರು. ತಮ್ಮ ಮೊದಲ ಓವರ್‌ನಿಂದಲೇ ಮಾರಕ ದಾಳಿ ನಡೆಸಿದ ಅಶ್ವಿನ್ ಕೇವಲ 37 ರನ್ ನೀಡಿ 5 ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಂದಹಾಗೆ ಇದು ಟೆಸ್ಟ್ ಕ್ರಿಕೆಟ್‌ನ ಇನಿಂಗ್ಸ್‌ವೊಂದರಲ್ಲಿ 31ನೇ ಬಾರಿಗೆ 5+ ವಿಕೆಟ್ ಕಬಳಿಸಿದ ಕೀರ್ತಿಗೆ ರವಿಚಂದ್ರನ್ ಅಶ್ವಿನ್ ಪಾತ್ರರಾದರು.