ಸಾಗರದ ಕ್ರಿಕೆಟ್ ಕ್ಲಬ್‌ನ ಶ್ರೀ ನಾಗೇಂದ್ರ ಕೆ ಪಂಡಿತ್ ಅವರನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಶಿವಮೊಗ್ಗ ವಲಯದ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ. ಸುಮಾರು 50 ವರ್ಷಗಳ ಕ್ರಿಕೆಟ್ ಅನುಭವ ಹೊಂದಿರುವ ಅವರು ಕ್ರಿಕೆಟ್ ಅಕಾಡೆಮಿ ಮೂಲಕ ಯುವ ಪ್ರತಿಭೆಗಳನ್ನು ಪೋಷಿಸುತ್ತಿದ್ದಾರೆ.
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಶಿವಮೊಗ್ಗ ವಲಯದ ಅಧ್ಯಕ್ಷರನ್ನಾಗಿ ಸಾಗರದ ಕ್ರಿಕೆಟ್ ಕ್ಲಬ್‌ನ ಶ್ರೀ ನಾಗೇಂದ್ರ ಕೆ ಪಂಡಿತ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ಶ್ರೀ ನಾಗೇಂದ್ರ ಪಂಡಿತ್ ಅವರು ಸುಮಾರು 50 ವರ್ಷಗಳ ಕ್ರಿಕೆಟ್ ಅನುಭವ ಹೊಂದಿರುವ ಅತ್ಯಂತ ಉತ್ಸಾಹಿ ಕ್ರಿಕೆಟಿಗ ಹಾಗೂ ಅನುಭವಿ ಕ್ರಿಕೆಟ್ ನಿರ್ವಹಣಾಧಿಕಾರಿ ಆಗಿದ್ದಾರೆ. ಅವರು ಕ್ರಿಕೆಟಿಗರಾಗಿಯೂ ಹಾಗೂ ಆಡಳಿತಗಾರರಾಗಿಯೂ ಸೇವೆ ಸಲ್ಲಿಸಿದ್ದು, ಕೆನರಾ ಬ್ಯಾಂಕ್‌ನ ಮಾಜಿ ನೌಕರರಾಗಿದ್ದಾರೆ. ಕೆನರಾ ಬ್ಯಾಂಕ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದು, ತಂಡದ ನಾಯಕನಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಸಾಗರದಲ್ಲಿರುವ ನಾಗೇಂದ್ರ ಪಂಡಿತ್ ಕ್ರಿಕೆಟ್ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿದ್ದು, ಯುವ ಪ್ರತಿಭೆಗಳ ಪೋಷಣೆ ಹಾಗೂ ಮೂಲ ಮಟ್ಟದ ಕ್ರಿಕೆಟ್ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿರುವ ಪ್ರಸಿದ್ಧ ಸಂಸ್ಥೆಯಾಗಿದೆ.
ಯಾರು ಈ ನಾಗೇಂದ್ರ ಪಂಡಿತ್?
ನಾಗೇಂದ್ರ ಕೆ ಪಂಡಿತ್ ತಮ್ಮ 15ನೇ ವಯಸ್ಸಿನಿಂದಲೇ ಕೆಎಸ್‌ಸಿಎ ಶಿವಮೊಗ್ಗ ಝೋನ್ ಪ್ರತಿನಿಧಿಸಲು ಆರಂಭಿಸಿದರು. ಇದಾದ ಬಳಿಕ ಸತತ ಏಳು ವರ್ಷಗಳ ಕಾಲ ಶಿವಮೊಗ್ಗ ಝೋನ್ ಪ್ರತಿನಿಧಿಸಿದ ಹಿರಿಮೆ ನಾಗೇಂದ್ರ ಪಂಡಿತ್ ಅವರಿಗಿದೆ. ಇದರ ಜತೆಗೆ ನಾಯಕನಾಗಿಯೂ ನಾಗೇಂದ್ರ ಪಂಡಿತ್ ಸೈ ಎನಿಸಿಕೊಂಡಿದ್ದರು. ಇನ್ನು ರಾಜ್ಯ ಕಂಬೈಂಡ್ ಮೊಫಿಷಿಯಲ್ ಟೀಮ್, ಮೈಸೂರು ಯೂನಿವರ್ಸಿಟಿ, ಹಾಗೂ ದಕ್ಷಿಣ ವಲಯ ತಂಡವನ್ನು ನಾಗೇಂದ್ರ ಪಂಡಿತ್ ಪ್ರತಿನಿಧಿಸಿದ್ದರು. ಇದಾದ ನಂತರ ಕ್ರೀಡಾ ಕೋಟಾದಲ್ಲಿ ಕೆನರಾ ಬ್ಯಾಂಕ್ ಉದ್ಯೋಗಿಯಾಗಿ ನೇಮಕವಾದರು. ಕೆನರಾ ಬ್ಯಾಂಕ್ ಉದ್ಯೋಗಿಯಾದ ಬಳಿಕವೂ ಕ್ರಿಕೆಟ್ ಮೇಲಿನ ಒಲವು ಕಡಿಮೆಯಾಗಲಿಲ್ಲ.
ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಕ್ರಿಕೆಟ್‌ನಿಂದ ತಮಗೆ ಸಾಕಷ್ಟು ಸಿಕ್ಕಿದೆ. ಈ ಕ್ರೀಡೆಗೆ ತನ್ನಿಂದ ಏನಾದರೂ ವಾಪಾಸ್ ನೀಡಬೇಕು ಎನ್ನುವ ಗುರಿಯೊಂದಿಗೆ ಸಾಗರದಲ್ಲಿ ಅತ್ಯುತ್ತಮ ಗುಣಮಟ್ಟದ ನಾಗೇಂದ್ರ ಪಂಡಿತ್ ಕ್ರಿಕೆಟ್ ಅಕಾಡೆಮಿ(NPCA) ಒಳಾಂಗಣ ಅಕಾಡೆಮಿ ತೆರೆದು ಗ್ರಾಮೀಣ ಹಾಗೂ ಅರೆನಗರವಾಸಿ ಯುವ ಪ್ರತಿಭಾನ್ವಿತ ಕ್ರಿಕೆಟಿಗರಿಗೆ ತರಬೇತಿ ನೀಡುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಜೀವನದಲ್ಲಿ ಗಳಿಸಿ ಉಳಿಸಿದ ಪ್ರತಿಯೊಂದು ರುಪಾಯಿಯನ್ನು ಕ್ರಿಕೆಟ್ ಅಭಿವೃದ್ದಿಗೆ ಬಳಸಲು ತೀರ್ಮಾನಿಸಿ ಈ ಇಂಡೋರ್ ಅಕಾಡೆಮಿ ತೆರೆದಿದ್ದಾರೆ. ಈ ಅಕಾಡೆಮಿಯಲ್ಲಿ ವಿವಿಧ ವಯೋಮಾನದ 35-40 ಯುವ ಕ್ರಿಕೆಟಿಗರು ತರಬೇತಿ ಹಾಗೂ ಅಭ್ಯಾಸ ನಡೆಸುತ್ತಿದ್ದಾರೆ. ಈ ಅಕಾಡೆಮಿಯಲ್ಲಿ ಕಲಿತ ಕ್ರೀಡಾಪಟುಗಳು ಭರವಸೆಯ ಆಟಗಾರರಾಗಿ ಬೆಳಕಿಗೆ ಬರುತ್ತಿದ್ದಾರೆ.

ಯಾವ ಝೋನ್‌ಗೆ ಯಾರು ಚೇರ್‌ಮನ್?
ಇನ್ನು ಶಿವಮೊಗ್ಗ ಮಾತ್ರವಲ್ಲದೇ ಆರು ಝೋನ್‌ಗಳಿಗೂ ಚೇರ್‌ಮನ್‌ಗಳನ್ನು ಘೋಷಿಸಲಾಗಿದೆ. ಅದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
1. ಪ್ರಕಾಶ್ ಎಲ್ ಎಂ: ತುಮಕೂರು ಝೋನ್
2. ರವೀಂದ್ರ ಟಿ: ಮೈಸೂರು ಝೋನ್
3. ನಾಗೇಂದ್ರ ಕೆ ಪಂಡಿತ್: ಶಿವಮೊಗ್ಗ ಝೋನ್
4. ಅಲ್ತಾಫ್ ನವಾಜ್ ಎಂ ಕಿತ್ತೂರು: ಧಾರವಾಡ ಝೋನ್
5. ಡಾ| ಶ್ರೀಕಾಂತ್ ರೈ: ಮಂಗಳೂರು ಝೋನ್
6. ಚಂದ್ರಶೇಖರ್ ಮೈಲಾರ್: ರಾಯಚೂರು ಝೋನ್


