17 ವರ್ಷಗಳಿಂದ ನಿಷ್ಠಾವಂತ ಬೆಂಬಲ ನೀಡಿದರೂ, ಆರ್‌ಸಿಬಿ ಫ್ರಾಂಚೈಸಿ ಈಗ ತನ್ನ ತವರು ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸ್ಥಳಾಂತರಿಸಲು ಚಿಂತಿಸುತ್ತಿದೆ. ಕಳೆದ ವರ್ಷದ ಕಾಲ್ತುಳಿತ ಪ್ರಕರಣವನ್ನು ನೆಪವಾಗಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿದ್ದು, ಅಭಿಮಾನಿಗಳಿಗೆ ಮಾಡುವ ದ್ರೋಹ.
- ಸುದರ್ಶನ್, ಏಷ್ಯಾನೆಟ್ ಸುವರ್ಣ ನ್ಯೂಸ್
ಅದೆಂಥಾ ಪ್ರೀತಿ.. ಅದೆಂಥಾ ಅಭಿಮಾನ..! ಅದೃಷ್ಟ ಮಾಡಿರಬೇಕು ಅಂಥಾ ಅಭಿಮಾನಿಗಳನ್ನು ಪಡೆಯಲು. ಅವರು ಸೋಲಿನಲ್ಲೂ ಕೈ ಬಿಡಲಿಲ್ಲ. ನಿಂದನೆಗಳಿಗೂ ಬಗ್ಗಲಿಲ್ಲ. ಈ ಜನ್ಮದಲ್ಲಿ ತಮ್ಮ ನಿಯತ್ತು ನಿನಗೆ ಎಂಬಂತೆ ಕಟಿಬದ್ಧರಾಗಿ ನಿಂತರು. 17 ವರ್ಷ ಕಪ್ ಗೆಲ್ಲದಿದ್ದಾಗ ನಿರಂತರ ನಿಂದನೆ, ನಿರಾಸೆ, ಹತಾಶೆ, ಅವಮಾನಗಳನ್ನು ಸಹಿಸಿಕೊಂಡು ತಮ್ಮ ತಂಡದ ಪರ ನಿಂತ ಗಟ್ಟಿಯಾಗಿ ನಿಂತ ಹುಚ್ಚು ಅಭಿಮಾನಿಗಳವರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ತಂಡ ರಣಜಿ ಪಂದ್ಯಗಳನ್ನಾಡುತ್ತಿದ್ದಾಗ ಅಲ್ಲಿಯೂ rcb.. rcb.. ಎಂದು ಕಿರುಚಾಡುತ್ತಿದ್ದದ್ದನ್ನು ನೋಡಿ ನಾನೇ ಸಾಕಷ್ಟು ಬಾರಿ ಮನಸ್ಸಲ್ಲೇ ಬೈದುಕೊಂಡದ್ದೂ ಇದೆ. ಅಷ್ಟರ ಮಟ್ಟಿಗಿನ ಹುಚ್ಚು ಅಭಿಮಾನ ಬಹುಶಃ ಬೇರೆ ಯಾವ ತಂಡಕ್ಕೂ ಸಿಕ್ಕಿಲ್ಲ. ‘’ನನ್ನ ದೇಹದ ಮೇಲೆ ಆರ್.ಸಿ.ಬಿ ಜರ್ಸಿ ಬಿಟ್ಟು ಮತ್ತೊಂದು ಫ್ರಾಂಚೈಸಿಯ ಬಟ್ಟೆಯನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ’’ ಎಂದಿದ್ದ ವಿರಾಟ್ ಕೊಹ್ಲಿ. ಆ ಮಟ್ಟಿಗೆ ಆರ್.ಸಿ.ಬಿ ಮೇಲೆ ಅಭಿಮಾನದ ಮಳೆ ಸುರಿದವರು ಆ ಜನ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇವತ್ತು ಏನೇ ಆಗಿದ್ದರೂ ಅದಕ್ಕೆ ಕಾರಣ ಆ ತಂಡದ ಅಭಿಮಾನಿ ಗಣ. ಅವರು ಆರ್.ಸಿ.ಬಿಯನ್ನು ಆರಾಧಿಸಿದ್ದಾರೆ. ತಲೆಯ ಮೇಲೆ ಹೊತ್ತು ಮೆರೆಸಿದ್ದಾರೆ. ಹುಚ್ಚು ಅಭಿಮಾನದ ಕಾರಣಕ್ಕೆ ತಲೆಗಳೂ ಉರುಳಿವೆ, ರಕ್ತವೂ ಹರಿದಿದೆ. ಯಾಕಾಗಿ? ರಾಯಲ್ ಚಾಲೆಂಜರ್ಸ್ ತಂಡಕ್ಕಾಗಿ. ತಂಡದ ಜೊತೆ ಅಂಟಿಕೊಂಡಿರುವ ಬೆಂಗಳೂರು ಎಂಬ ಹೆಸರಿಗಾಗಿ.
ತನ್ನ ಕರ್ಮ ಭೂಮಿ ಚಿನ್ನಸ್ವಾಮಿಯನ್ನು ಎಡಗಾಲಲ್ಲಿ ಒದ್ದು ಹೊರನಡೆಯಲು ರೆಡಿಯಾದ ಆರ್‌ಸಿಬಿ
ಆದರೆ ಈಗ ಅದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ಕರ್ಮಭೂಮಿಯನ್ನೇ ಎಡಗಾಲಿಂದ ಒದ್ದು ಹೊರ ನಡೆಯುವ ಹಾದಿಯಲ್ಲಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿ ಐಪಿಎಲ್ ಪಂದ್ಯಗಳನ್ನಾಡಲು ಆರ್.ಸಿ.ಬಿ ಫ್ರಾಂಚೈಸಿ ಹಿಂದೇಟು ಹಾಕುತ್ತಿದೆ. ತನ್ನ 7 ತವರು ಪಂದ್ಯಗಳನ್ನು ಮುಂಬೈ ಮತ್ತು ರಾಯ್ಪುರದಲ್ಲಿ ಆಡಲು ಸಿದ್ಧವಾಗಿದೆ. ಈಗಾಗಲೇ ಆರ್.ಸಿ.ಬಿ ಸಿಇಓ ಛತ್ತೀಸ್’ಗಢ ಮುಖ್ಯಮಂತ್ರಿಯನ್ನೂ ಭೇಟಿಯಾಗಿದ್ದಾನೆ. ‘ಆರ್.ಸಿ.ಬಿ ಎರಡು ಪಂದ್ಯಗಳನ್ನು ನಮ್ಮ ನೆಲದಲ್ಲಿ ಆಡಲಿದೆ’ ಎಂದು ಛತ್ತೀಸ್’ಗಢ ಮುಖ್ಯಮಂತ್ರಿ ಘೋಷಿಸಿದ್ದೂ ಆಗಿದೆ.
ಆರ್‌ಸಿಬಿಗೆ ಚಿನ್ನಸ್ವಾಮಿ ಸ್ಟೇಡಿಯಂ ಬೇಡವಾಯ್ತಾ?
ಹಾಗಾದರೆ ಆರ್.ಸಿ.ಬಿ ಫ್ರಾಂಚೈಸಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಬೇಡವಾಯಿತೇಕೆ? ಚಿನ್ನಸ್ವಾಮಿಗೆ ಮತ್ತೆ ಐಪಿಎಲ್ ಹಾಗೂ ಅಂತರಾಷ್ಟ್ರೀಯ ಪಂದ್ಯಗಳನ್ನು ತರಲು ರಾಜ್ಯ ಕ್ರಿಕೆಟ್ ಸಂಸ್ಥೆ ನಡೆಸಿದ ಪ್ರಾಮಾಣಿಕ ಪ್ರಯತ್ನಗಳಿಗೆ ಆರ್.ಸಿ.ಬಿ ಫ್ರಾಂಚೈಸಿ ಬೆಲೆ ನೀಡುತ್ತಿಲ್ಲವೇಕೆ? ಕಳೆದ ವರ್ಷ ಜೂನ್ 4ರಂದು ನಡೆದ ಕಾಲ್ತುಳಿತ ಪ್ರಕರಣದಲ್ಲಿ ಎಲ್ಲರೂ ಸೇರಿ ತನ್ನನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿದರೆಂಬ ಕೋಪ ಆರ್.ಸಿ.ಬಿ ಫ್ರಾಂಚೈಸಿಗಿದೆ. ತಪ್ಪು ಮಾಡಿದ್ದಕ್ಕೆ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲುವಂತಾಯಿತು. ಅದರಲ್ಲಿ ನಿಲ್ಲಿಸಿದರೆಂಬ ಪ್ರಶ್ನೆಯೇ ಬರುವುದಿಲ್ಲ.
‘ಜೂನ್ 4ಕ್ಕೆ (ಆರ್.ಸಿ.ಬಿ ಕಪ್ ಗೆದ್ದ ಮರುದಿನ) ಬೆಂಗಳೂರಿನಲ್ಲಿ ಆರ್.ಸಿ.ಬಿ ವಿಜಯೋತ್ಸವದ ಮೆರವಣಿಗೆ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ನಡೆಯಲಿದೆ’ ಎಂದು ಯಾರನ್ನು ಕೇಳಿ ಘೋಷಿಸಿದ್ದರು? ಈ ಘೋಷಣೆಗೂ ಮುನ್ನ ಆರ್.ಸಿ.ಬಿ ಫ್ರಾಂಚೈಸಿ ಪೊಲೀಸ್ ಇಲಾಖೆಯ ಅನುಮತಿ ಪಡೆದಿತ್ತೇ? ಇಲ್ಲ. ಅದು ತಪ್ಪಲ್ಲದೆ ಮತ್ತಿನ್ನೇನು?. ಆದರೆ ತನ್ನನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿದರು ಎಂಬುದನ್ನೇ ನೆಪವಾಗಿಟ್ಟುಕೊಂಡು ಆರ್.ಸಿ.ಬಿಯ ತವರು ಪಂದ್ಯಗಳನ್ನು ಚಿನ್ನಸ್ವಾಮಿಯಲ್ಲಿ ಆಡುವುದಿಲ್ಲ ಎನ್ನುವುದು ಆ ತಂಡದ ಅಭಿಮಾನಿಗಳಿಗೆ ಮಾಡುತ್ತಿರುವ ದ್ರೋಹ.
ಕಾಲ್ತುಳಿತ ದುರಂತದ ನಂತರ ಚಿನ್ನಸ್ವಾಮಿ ಅಕ್ಷರಶಃ ಕ್ರೀಡಾಂಗಣ ಸ್ಮಶಾನದಂತೆ ಕಾಣುತ್ತಿತ್ತು. ದೇಶೀಯ, ಅಂತರಾಷ್ಟ್ರೀಯ ಪಂದ್ಯಗಳನ್ನು ಆಡದಂತೆ ನಿರ್ಬಂಧಿಸಲಾಗಿತ್ತು. ಮಹಿಳಾ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಪಂದ್ಯಗಳು ಚಿನ್ನಸ್ವಾಮಿ ಕೈ ತಪ್ಪಿ ಹೋದವು. ಅದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಚುನಾವಣೆ ನಡೆದು ವೆಂಕಟೇಶ್ ಪ್ರಸಾದ್ & ಟೀಮ್ ಅಧಿಕಾರಕ್ಕೇರಿತು. ಚಿನ್ನಸ್ವಾಮಿಯ ಗತವೈಭವವನ್ನು ಮರಳಿ ತರುವ ಪ್ರತಿಜ್ಞೆ ಮಾಡಿ. ಈ ವರ್ಷದ ಐಪಿಎಲ್ ಪಂದ್ಯಗಳನ್ನು ಚಿನ್ನಸ್ವಾಮಿಯಲ್ಲು ಆಡಿಸಿಯೇ ಸಿದ್ಧ ಎಂದು ಪಣ ತೊಟ್ಟು ಕಳೆದ 45 ದಿನಗಳಲ್ಲಿ KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮತ್ತವರ ತಂಡ ಹಗಲೂ ರಾತ್ರಿ ಕೆಲಸ ಮಾಡಿದೆ.
ಪ್ರಸಾದ್ & ಟೀಮ್’ನ ಚುನಾವಣಾ ಗೆಲುವಿನ ಮಾಸ್ಟರ್ ಮೈಂಡ್, ರಾಜ್ಯ ಕ್ರಿಕೆಟ್ ಸಂಸ್ಥೆಯ ವಕ್ತಾರ ವಿನಯ್ ಮೃತ್ಯುಂಜಯ ಇಲ್ಲೂ ಮಹತ್ವದ ಪಾತ್ರ ನಿಭಾಯಿಸಿದ್ದಾರೆ. ಇವರ ನಿರಂತರ ಪ್ರಯತ್ನದ ಫಲವಾಗಿ ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ ಹಾಗೂ ಅಂತರಾಷ್ಟ್ರೀಯ ಪಂದ್ಯಗಳನ್ನು ನಡೆಸಲು ಸರ್ಕಾರ ಅನುಮತಿ ಕೊಟ್ಟಿದೆ. ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿ ‘ಚಿನ್ನಸ್ವಾಮಿಯಲ್ಲಿ ಆಡುವುದಿಲ್ಲ’ ಎನ್ನುತ್ತಿದೆ ಆರ್.ಸಿ.ಬಿ ಫ್ರಾಂಚೈಸಿ.
ಒಂದು ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ತವರು ಪಂದ್ಯಗಳನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರಿಸಿದರೆ ಚಿನ್ನಸ್ವಾಮಿಯನ್ನು ಈ ಬಾರಿ ತನ್ನ ಮನೆಯಂಗಳವನ್ನಾಗಿ ಮಾಡಿಕೊಳ್ಳಲು ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಸಿದ್ಧವಾಗಿ ನಿಂತಿವೆ.
ಒಂದು ವೇಳೆ ಈಗ ಆರ್.ಸಿ.ಬಿಯ ಹಠವೇ ಗೆದ್ದರೆ ಅದು ಮುಂದಿನ ದಿನಗಳಲ್ಲಿ ಆ ಫ್ರಾಂಚೈಸಿಯ ಅಧಃಪತನಕ್ಕೆ ಮುನ್ನುಡಿ. ಆರ್.ಸಿ.ಬಿ ಫ್ರಾಂಚೈಸಿಯ ಬಲಕ್ಕೆ ಬುನಾದಿ ಹಾಕಿದ್ದೇ ಚಿನ್ನಸ್ವಾಮಿ ಕ್ರೀಡಾಂಗಣ. ಆ ತಂಡದ ಆನೆಬಲವೇ ಇಲ್ಲಿನ ಅಭಿಮಾನಿಗಳು. ಅವರೇ ಬೇಡವೆಂದು ಹೊರ ನಡೆದರೆ?


