ತಿರುಪತಿಗೆ ತಿರುಮಲನಿಗೆ ಮುಡಿ ಕೊಟ್ಟ ಕೆಎಸ್‌ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಭಾರಿ ಬದಲಾವಣೆ ಭರವಸೆಯೊಂದಿಗೆ ಅಧಿಕಾರಕ್ಕೇರಿದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಇದೀಗ ಐಪಿಎಲ್ ಮರಳಿ ತರಲು ಪ್ರಯತ್ನದಲ್ಲಿ ಆರಂಭಿಕ ಯಶಸ್ಸು ಕಂಡಿದ್ದಾರೆ. 

ತಿರುಪತಿ (ಡಿ.26) ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆ ದೇಶಾದ್ಯಂತ ಸದ್ದು ಮಾಡಿತ್ತು. ಹಲವು ಬಾರಿ ಕೋರ್ಟ್ ಮೆಟ್ಟಿಲು ಹತ್ತಿತ್ತು. ವಿವಾದ, ಜಿದ್ದಾಜಿದ್ದಿ ನಡುವೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ತಂಡ ಅಭೂತಪೂರ್ವ ಗೆಲುವು ದಾಖಲಿಸಿತ್ತು. ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಬೆಂಬಲಿತ ವೆಂಕಟೇಶ್ ಪ್ರಸಾದ್ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿನ ಮಹತ್ತರ ಬದಲಾವಣೆ ಭರವಸೆಯೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿ ಕೆಲಸ ಆರಂಭಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಐಪಿಎಲ್ ಸೇರಿ ಕ್ರಿಕೆಟ್ ಮರಳಿ ತರುವ ಪ್ರಯತ್ನ ಆರಂಭಿಸಿದ್ದಾರೆ. ಇದರ ನಡುವೆ ವೆಂಕಟೇಶ್ ಪ್ರಸಾದ್ ಹಾಗೂ ಪದಾಧಿಕಾರಿಗಳ ತಂಡ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಇದೇ ವೇಳೆ ತಿರುಪತಿಗೆ ಮುಡಿ ನೀಡಿದ್ದಾರೆ.

ತಿರುಪತಿಯಲ್ಲಿ ಸಂಪೂರ್ಣ ಶರಣಾಗತಿ

ತಿರುಪತಿಗೆ ಭೇಟಿ ನೀಡಿ ಸಂಪೂರ್ಣ ಶರಣಾಗಿದ್ದೇನೆ. ಅತ್ಯಂತ ವಿನಯ ಹಾಗೂ ಭಕ್ತಿಯಿಂದ ಭಗವಾನ್ ವೆಂಕಟೇಶ್ವರನಿಗೆ ಕೃತಜ್ಞತೆಯೊಂದಿಗೆ ಮುಡಿ ಅರ್ಪಿಸುತ್ತಿದ್ದೇನೆ ಎಂದು ವೆಂಕಟೇಶ್ ಪ್ರಸಾದ್ ಹೇಳಿಕೊಂಡಿದ್ದಾರೆ. ಈ ಮೂಲಕ ತಮ್ಮ ಅಭೂತಪೂರ್ವ ಗೆಲುವಿಗೆ ಪ್ರೇರಣೆ ಹಾಗೂ ಶಕ್ತಿ ನೀಡಿದ ತಿರುಮಲನಿಗೆ ಮುಡಿ ಅರ್ಪಿಸಿರುವುದಾಗಿ ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.

ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮಾತ್ರವಲ್ಲ ಇಡೀ ಕೆಎಸ್‌ಸಿಎ ಪದಾಧಿಕಾರಿಗ ತಂಡ ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಮುಡಿ ನೀಡಿದೆ. ಜೊತೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಭಿವೃದ್ಧಿ ಹಾಗೂ ಮತ್ತೆ ರಾಜ್ಯದಲ್ಲಿ ಕ್ರಿಕೆಟ್ ನಳನಳಿಸುವಂತೆ ಮಾಡಲು ದೇವರ ಬಳಿ ಇಡೀ ತಂಡ ಆಶೀರ್ವಾದ ಬೇಡಿದೆ.

ವಿಜಯ್ ಹಜಾರೆ ಪಂದ್ಯಕ್ಕೆ ಶತಪ್ರಯತ್ನ ನಡೆಸಿದ ವೆಂಕಟೇಶ್ ಪ್ರಸಾದ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮದಲ್ಲಿ ನಡೆದ ಕಾಲ್ತುಳಿತ ಘಟನೆಯಿಂದ ದುರಂತವೇ ನಡೆದು ಹೋಗಿತ್ತು. ಹೀಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಎಲ್ಲಾ ಪಂದ್ಯಗಳು ರದ್ದಾಗಿತ್ತು. ಕ್ರಿಕೆಟ್ ಮರಳಿ ತರುವುದಾಗಿ ಹೇಳಿದ್ದ ವೆಂಕಟೇಶ್ ಪ್ರಸಾದ್ ವಿಜಯ್ ಹಜಾರೆ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲು ವೆಂಕಟೇಶ್ ಪ್ರಸಾದ್ ತಂಡ ಭಾರಿ ಪ್ರಯತ್ನ ನಡೆಸಿತ್ತು. ಆದರೆ ಪೊಲೀಸರಿಂದ ಅನುಮತಿ ಸಿಗದೆ ಹಿನ್ನಲೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಂದ್ಯವನ್ನು ದೇವನಹಳ್ಳಿಯ ಎನ್‌ಸಿಎ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇದೇ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ಸರಿಪಡಿಸಿ ಪಂದ್ಯಗಳನ್ನು ಮರಳಿ ತರುವುದಾಗಿ ಭರವಸೆ ನೀಡಿದ್ದಾರೆ.

View post on Instagram