2019ರ ವಿಶ್ವಕಪ್‌ ವೇಳೆ ಟೀಮ್‌ ಇಂಡಿಯಾ ಆಟಗಾರರ ಚಿತ್ರವನ್ನು ಹಾರ್ದಿಕ್‌ ಪಾಂಡ್ಯ ಹಂಚಿಕೊಂಡಿದ್ದರು. ಈ ಚಿತ್ರದಲ್ಲಿ ರಿಷಭ್‌ ಪಂತ್‌ ಹೆಗಲ ಮೇಲೆ ಇದ್ದ ಕೈ ಯಾರದ್ದು ಎನ್ನುವ ವಿಚಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ.

ಬೆಂಗಳೂರು (ಸೆ.28): ಈ ಚಿತ್ರದಲ್ಲಿ ರಿಷಬ್‌ ಪಂತ್‌ ಅವರ ಹೆಗಲ ಮೇಲೆ ಇರುವ ಕೈ ಯಾರದ್ದು ಎನ್ನುವ ಬಗ್ಗೆ ಎಷ್ಟು ದೊಡ್ಡ ಮಟ್ಟದ ಚರ್ಚೆ ಆಗಿತ್ತು ಎಂದರೆ, ಇನ್ನೇನು ಕೆಲ ದಿನಗಳ ಹೋಗಿದ್ದರೆ, ವೈಜ್ಞಾನಿಕ ಪರೀಕ್ಷೆಗಳೇ ನಡೆಯುತ್ತಿದ್ದವು. 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ ವೇಳೆ ಟೀಮ್‌ ಇಂಡಿಯಾ ಕ್ರಿಕೆಟಿಗರು ಲಂಡನ್‌ನಲ್ಲಿ ತೆಗೆದುಕೊಂಡ ಚಿತ್ರ ಅದಾಗಿತ್ತು. ಹಾರ್ದಿಕ್‌ ಪಾಂಡ್ಯ ಈ ಸೆಲ್ಫಿ ತೆಗೆದುಕೊಂಡಿದ್ದರೆ, ರಿಷಬ್‌ ಪಂತ್‌, ಮಹೇಂದ್ರ ಸಿಂಗ್‌ ಧೋನಿ, ಜಸ್‌ಪ್ರೀತ್‌ ಬುಮ್ರಾ ಹಾಗೂ ಮಯಾಂಕ್‌ ಅಗರ್ವಾಲ್‌ ಈ ಚಿತ್ರದಲ್ಲಿದ್ದರು. ಚಿತ್ರವನ್ನು ತೆಗೆದು ಪೋಸ್ಟ್‌ ಮಾಡಿದ ಬಳಿಕ ಚಿತ್ರದಲ್ಲಿದ್ದ ಯಾರಿಗೂ ಇದೊಂದು ಮಿಸ್ಟರಿ ಚಿತ್ರವಾಗುತ್ತದೆ ಎಂದು ಅನಿಸರಲೇ ಇಲ್ಲ. ಪೋಸ್ಟ್‌ ಮಾಡಿದ ಕೆಲವೇ ಹೊತ್ತಲ್ಲಿ ಈ ಚಿತ್ರ ಇಂಟರ್ನೆಟ್‌ ಸೆನ್ಸೇಷನ್‌ ಆಗಿದ್ದು ಮಾತ್ರವಲ್ಲದೆ, ಸಾಕಷ್ಟು ಮೀಮ್ಸ್‌ಗಳು ಹಾಗೂ ಗೊಂದಲಗಳಿಗೂ ಕಾರಣವಾಗಿತ್ತು. ಬಾಯ್ಸ್‌ ಡೇ ಔಟ್‌ ಎಂದು ಹಾರ್ದಿಕ್‌ ಪಾಂಡ್ಯ ಪೋಸ್ಟ್‌ ಮಾಡಿದ್ದ ಈ ಚಿತ್ರವನ್ನು ನೋಡಿದವರೆಲ್ಲರೂ ತಲೆಕೆರೆದುಕೊಂಡಿದ್ದರು. ಹಾಗಂತ ಚಿತ್ರದ ಬಗ್ಗೆ ಯಾವುದೇ ಅನುಮಾನಗಳು ಇದ್ದಿರಲಿಲ್ಲ. ಚಿತ್ರದಲ್ಲಿ ಪಂತ್‌ ಹೆಗಲ ಮೇಲೆ ಇದ್ದ ಕೈ ಯಾರದ್ದು ಎನ್ನುವುದೇ ದೊಡ್ಡ ಪ್ರಶ್ನೆ ಎದ್ದಿತ್ತು. 

ಈ ಪ್ರಶ್ನೆ ಎಷ್ಟು ಬೃಹದಾಕಾರವಾಗಿ ಬೆಳೆಯಿತು ಎಂದರೆ, ಚಿತ್ರ ನೋಡಿದವರೆಲ್ಲರೂ ಒಂದೊಂದು ರೀತಿಯ ಉತ್ತರ ನೀಡುತ್ತಿದ್ದರು. ಇಡೀ ಚಿತ್ರದಲ್ಲಿ ಹಾಗೇನಾದರೂ ಅನುಮಾನ ಬರುವಂಥ ವ್ಯಕ್ತಿ ಇದ್ದರೆ, ಅದು ಮಯಾಂಕ್‌ ಅಗರ್ವಾಲ್‌ ಮಾತ್ರವೇ ಆಗಿತ್ತು. ಆದರೆ, ಮಯಾಂಕ್‌ ಅಗರ್ವಾಲ್‌ ಕೈಗಳು ಅಷ್ಟು ಉದ್ದವೇ ಎನ್ನುವ ಪ್ರಶ್ನೆ ಕೂಡ ಉದ್ಭವವಾಗಿತ್ತು. ಇನ್ನೂ ಕೆಲವರು, ರಿಷಬ್‌ ಪಂತ್‌ ಹಿಂದೆ ಯಾರೋ ಅಡಗಿಕೊಂಡಿರಬಹುದು. ಇದು ರಿಷಭ್‌ನ ಗರ್ಲ್‌ಫ್ರೆಂಡ್‌ ಕೈ ಆಗಿರಬಹದು ಎನ್ನುವ ಅನುಮಾನವನ್ನೂ ವ್ಯಕ್ತಪಡಿಸಿದ್ದರು. ಆದರೆ, ಅದಕ್ಕೆ ಸಾಕ್ಷಿ ಸಿಕ್ಕಿರಲಿಲ್ಲ.
ಇತ್ತೀಚೆಗೆ ಟ್ವಿಟರ್‌ನಲ್ಲಿ ಒಬ್ಬ ವ್ಯಕ್ತಿ ಮತ್ತೊಮ್ಮೆ ಈ ಚಿತ್ರವನ್ನು ನೆನಪಿಸಿದ್ದರು. 'ಈಗ ನಾಲ್ಕು ವರ್ಷಕ್ಕಿಂತ ಹೆಚ್ಚಿನ ಸಮಯ ಈ ಚಿತ್ರಕ್ಕಾಗಿದೆ. ಆದರೆ, ರಿಷಬ್‌ ಪಂತ್‌ ಅವರ ಹೆಗಲ ಮೇಲೆ ಇದ್ದ ಕೈ ಯಾರದ್ದು ಎನ್ನುವುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ' ಎಂದು ಅದೇ ಚಿತ್ರವನ್ನು ಪೋಸ್ಟ್‌ ಮಾಡಿದ್ದರು. ಇದರ ಬೆನ್ನಲ್ಲಿಯೇ ಈ ಚಿತ್ರದ ಸತ್ಯಾಂಶ ಬಹಿರಂಗವಾಗಿದೆ.

ಇದು ನನ್ನ ಕೈಗಳು ಎಂದ ಮಯಾಂಕ್‌ ಅಗರ್ವಾಲ್‌: 'ವರ್ಷಗಳ ವ್ಯಾಪಕ ಸಂಶೋಧನೆ, ಚರ್ಚೆಗಳು ಮತ್ತು ಲೆಕ್ಕವಿಲ್ಲದಷ್ಟು ಸಿದ್ಧಾಂತಗಳ ನಂತರ, ರಾಷ್ಟ್ರಕ್ಕೆ ಅಂತಿಮವಾಗಿ ತಿಳಿಸೋದು ಏನೆಂದರೆ, ಅಂದು ರಿಷಭ್‌ ಪಂತ್‌ನ ಹೆಗಲ ಮೇಲೆ ಇದ್ದಿದ್ದು ನನ್ನ ಕೈಗಳು' ಎಂದು ಮಯಾಂಕ್‌ ಅಗರ್ವಾಲ್‌ ಎಕ್ಸ್‌ನಲ್ಲಿ ಬರೆದುಕೊಳ್ಳುವ ಮೂಲಕ ಈ ಚಿತ್ರದ ಬಗ್ಗೆ ಇದ್ದ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರ.ೆ ಅದರೊಂದಿಗೆ ಈ ಚಿತ್ರದ ಬಗ್ಗೆ ಇನ್ನು ಯಾರಾದರೂ ಬೇರೆ ರೀತಿಯ ಮಾಹಿತಿ ನೀಡಿದರೆ ಅದು ನಿಜವಲ್ಲ ಎಂದೂ ಅವರು ಬರೆದಿದ್ದಾರೆ.
ಇನ್ನು ಮಯಾಂಕ್‌ ಅಗರ್ವಾಲ್‌ ಗುರುವಾರ ಈ ಚಿತ್ರದ ಗೊಂದಲವನ್ನು ಪರಿಹರಿಸಿದ ಬೆನ್ನಲ್ಲಿಯೇ ಟ್ವಿಟರ್‌ನಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. 'ಕಾನೂನಿಗಿಂತ ನಿಮ್ಮ ಕೈಗಳೇ ಉದ್ದವಾಗಿವೆ' ಎಂದು ಅಭಿಮಾನಿಯೊಬ್ಬ ಬರೆದಿದ್ದರೆ, ಹೆಚ್ಚಿನವರು ಈ ಚಿತ್ರದ ಗೊಂದಲ ಕೊನೆಗೂ ಪರಿಹಾರ ಮಾಡಿದ್ದಕ್ಕೆ ಥ್ಯಾಂಕ್ಸ್‌ ಎಂದಿದ್ದಾರೆ.

ENGvsIND : ಟೀಕೆಗಳಿಗೆ ಸೆಂಚುರಿ ಮೂಲಕ ಉತ್ತರ ಕೊಟ್ಟ ರಿಷಭ್, ಸಾಥ್‌ ನೀಡಿದ ಜಡೇಜಾ!

ಇನ್ನೂ ಕೆಲವರು ನಿಮ್ಮ ಕೈಗಳೂ ಅಷ್ಟು ಉದ್ದ ಇರೋಕೆ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದರೆ, ನಿಮ್ಮ ಹೆಸರನ್ನು ಇನ್ನು ಮುಂದೆ ಲಾಂಗ್‌ಹ್ಯಾಂಡ್ಸ್‌ ಎಂದು ಬದಲಿಸಿಕೊಳ್ಳಿ ಎಂದೂ ಮಯಾಂಕ್‌ಗೆ ಸಲಹೆ ನೀಡಿದ್ದಾರೆ. ಕೊನೆಗೂ ಈ ಚಿತ್ರದ ಬಗ್ಗೆ ಇದ್ದ ಒಂದು ಕಲ್ಪನೆ ಕೊನೆಯಾಗಿದೆ. 'ಈ ಚಿತ್ರ ಪೋಸ್ಟ್‌ ಮಾಡಿದಾಗಲೇ ನೀವೊಬ್ಬ ಏಲಿಯನ್‌ ಎನ್ನುವುದು ಗೊತ್ತಿತ್ತು' ಎಂದು ಇನ್ನೊಬ್ಬರು ಬರೆದಿದ್ದಾರೆ.

ರಿಷಭ್‌ ಪಂತ್‌ಗೆ 1.63 ಕೋಟಿ ರುಪಾಯಿ ವಂಚಿಸಿದ ಹರ್ಯಾಣ ಕ್ರಿಕೆಟಿಗ!

Scroll to load tweet…