* ಡೆಲ್ಲಿ ಕ್ಯಾಪಿಟಲ್ಸ್ ನಾಯಕನಿಗೆ ಮೋಸ ಮಾಡಿದ ಹರ್ಯಾಣ ಮೂಲದ ಕ್ರಿಕೆಟಿಗ* ಬರೋಬ್ಬರಿ 1.63 ಕೋಟಿ ರುಪಾಯಿ ಪಂಗನಾಮ ಹಾಕಿಸಿಕೊಂಡ ಪಂತ್* ಹರ್ಯಾಣ ಕ್ರಿಕೆಟಿಗ ಮೃಣಾಂಕ್‌ ಸಿಂಗ್‌ರ ಮಾತಿಗೆ ಮರುಳಾಗಿ ಮೋಸ ಹೋದ ಪಂತ್

ನವದೆಹಲಿ(ಮೇ.24): ಭಾರತೀಯ ಕ್ರಿಕೆಟಿಗ ರಿಷಭ್‌ ಪಂತ್‌ (Team India Cricketer Rishabh Pant), ಹರ್ಯಾಣ ಕ್ರಿಕೆಟಿಗ ಮೃಣಾಂಕ್‌ ಸಿಂಗ್‌ರ ಮಾತಿಗೆ ಮರುಳಾಗಿ ಮೋಸ ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 2021ರ ಫೆಬ್ರವರಿಯಲ್ಲಿ ಮೃಣಾಂಕ್‌ ತಾವು ದುಬಾರಿ ವಾಚ್‌, ಬ್ಯಾಗ್‌ಗಳನ್ನು ಮಾರಾಟ ಮತ್ತು ಖರೀದಿ ವ್ಯವಹಾರ ಆರಂಭಿಸಿದ್ದಾಗಿ ಪಂತ್‌ಗೆ ಹೇಳಿದ್ದರು ಎನ್ನಲಾಗಿದೆ. ಬಳಿಕ ತಮಗೆ 2 ದುಬಾರಿ ವಾಚ್‌ಗಳನ್ನು ಕೊಡಿಸುವಂತೆ ರಿಷಭ್ ಪಂತ್‌, ಮೃಣಾಂಕ್‌ಗೆ ಸುಮಾರು 1 ಕೋಟಿ ರು. ನೀಡಿದ್ದಾಗಿ ತಿಳಿದುಬಂದಿದೆ. 

ಜೊತೆಗೆ ತಮ್ಮಲ್ಲಿದ್ದ ಕೆಲ ವಾಚ್‌, ಆಭರಣಗಳನ್ನು 63 ಲಕ್ಷ ರುಪಾಯಿಗೆ ಮಾರಾಟ ಮಾಡಿಕೊಡುವಂತೆ ಕೊಟ್ಟಿದ್ದಾಗಿ ಗೊತ್ತಾಗಿದೆ. ಬೇರೊಂದು ಪ್ರಕರಣದಲ್ಲಿ ಮೃಣಾಂಕ್‌ ಸಿಕ್ಕಿಬಿದ್ದಾಗ ವಿಚಾರಣೆ ವೇಳೆ ರಿಷಭ್ ಪಂತ್‌ಗೂ ಮೋಸ ಮಾಡಿರುವ ಮಾಹಿತಿ ಹೊರಬಿದ್ದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದೀಗ ರಿಷಭ್ ಪಂತ್ ಹಾಗೂ ಅವರ ಮ್ಯಾನೇಜರ್ ಪುನೀತ್ ಸೋಲಂಕಿ, ಹರ್ಯಾಣ ಮೂಲದ ಕ್ರಿಕೆಟಿಗ ಮೃಣಾಂಕ್‌ ಸಿಂಗ್‌ ಸಿಂಗ್ ವಿರುದ್ದ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಮಹಿಳಾ ಟಿ20 ಚಾಲೆಂಜ್: ಸೂಪರ್‌ನೋವಾಸ್‌ಗೆ ಭರ್ಜರಿ ಜಯ

ಪುಣೆ: 4ನೇ ಆವೃತ್ತಿಯ ಮಹಿಳಾ ಟಿ20 ಚಾಲೆಂಜ್‌ ಟೂರ್ನಿಯಲ್ಲಿ (Women's T20 Challenge) ಸೂಪರ್‌ನೋವಾಸ್‌ ಭರ್ಜರಿ ಆರಂಭ ಪಡೆದಿದೆ. ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಟ್ರಯಲ್‌ಬ್ಲೇಜ​ರ್ಸ್‌ ವಿರುದ್ಧ 49 ರನ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಸೂಪರ್‌ನೋವಾಸ್‌ 20 ಓವರಲ್ಲಿ 163 ರನ್‌ಗೆ ಆಲೌಟ್‌ ಆಯಿತು. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ 37, ಹರ್ಲೀನ್‌ ಡಿಯೊಲ್‌ 35, ದಿಯೇಂದ್ರ ಡಾಟಿನ್‌ 32 ರನ್‌ ಗಳಿಸಿದರು. 

ಪರಿಶ್ರಮಕ್ಕೆ ಸಿಕ್ಕ ಬೆಲೆ: ಟೀಂ ಇಂಡಿಯಾಗೆ ಭರ್ಜರಿ ಕಮ್‌ಬ್ಯಾಕ್‌ ಮಾಡಿದ ದಿನೇಶ್ ಕಾರ್ತಿಕ್‌...!

ಕಠಿಣ ಗುರಿ ಬೆನ್ನತ್ತಿದ ಟ್ರಯಲ್‌ ಬ್ಲೇಜ​ರ್ಸ್‌ ಉತ್ತಮ ಆರಂಭ ಪಡೆಯಿತು. 7 ಓವರಲ್ಲಿ 1 ವಿಕೆಟ್‌ಗೆ 63 ರನ್‌ ಗಳಿಸಿದ್ದ ತಂಡ ನಾಯಕಿ ಸ್ಮೃತಿ ಮಂಧನಾ(34) ಔಟಾಗುತ್ತಿದ್ದಂತೆ ಕುಸಿಯಿತು. ತಂಡ 94 ರನ್‌ಗೆ 9 ವಿಕೆಟ್ ಪತನಗೊಂಡವು. ಅಂತಿಮವಾಗಿ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 114 ರನ್‌ ಗಳಿಸಲಷ್ಟೇ ಶಕ್ತವಾಯಿತು. ಪೂಜಾ ವಸ್ತ್ರಾಕರ್ ಕೇವಲ 12 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರು.

ಹುಬ್ಬಳ್ಳೀಲಿ ಅಂಡರ್‌-19 ಮಹಿಳೆಯರ ಕ್ರಿಕೆಟ್‌ ಶಿಬಿರ

ಹುಬ್ಬಳ್ಳಿ: 2023ರಲ್ಲಿ ನಡೆಯಲಿರುವ ಚೊಚ್ಚಲ ಆವೃತ್ತಿಯ ಅಂಡರ್‌-19 ಮಹಿಳೆಯರ ಟಿ20 ವಿಶ್ವಕಪ್‌ಗೆ ಭಾರತ ತಂಡ ಪೂರ್ವಭಾವಿ ತಯಾರಿ ಆರಂಭಿಸಿದೆ. ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ) ದೇಶದ 5 ಕಡೆಗಳಲ್ಲಿ ಶಿಬಿರ ಆಯೋಜಿಸುತ್ತಿದ್ದು, ಇದರ ಭಾಗವಾಗಿ ಇಲ್ಲಿನ ಕೆಎಸ್‌ಸಿಎ ಮೈದಾನದಲ್ಲೂ 25 ಆಟಗಾರ್ತಿಯರನ್ನು ಒಳಗೊಂಡ ಶಿಬಿರ ಆರಂಭಗೊಂಡಿದೆ.

ಮುಂಬರುವ ಅಂಡರ್‌-19 ಮಹಿಳೆಯರ ವಿಶ್ವಕಪ್‌ಗೆ ಪೂರಕವಾಗಿ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ದೇಶದ ಐದು ಕಡೆ ನಡೆಸುತ್ತಿರುವ ಕ್ಯಾಂಪ್‌ ಹುಬ್ಬಳ್ಳಿಯಲ್ಲೂ ಸಾಗಿದ್ದು, ಇಲ್ಲಿನ ಕೆಎಸ್‌ಸಿಎ ಮೈದಾನದಲ್ಲಿ ವಿವಿಧ ರಾಜ್ಯಗಳ 25 ಕ್ರಿಕೆಟ್‌ಪಟುಗಳಿಗೆ ತರಬೇತಿ ನಡೆಯುತ್ತಿದೆ. ಜೂ.9ರವರೆಗೆ ಶಿಬಿರ ನಡೆಯಲಿದೆ. ರಾಷ್ಟ್ರೀಯ ತಂಡದ ದೇವಿಕಾ ಪಾಲ್ಷೀಕರ ಮುಖ್ಯ ತರಬೇತುದಾರರಾಗಿದ್ದು, ಶೀಘ್ರ ಕ್ಯಾಂಪ್‌ಗೆ ಆಗಮಿಸಲಿದ್ದಾರೆ. 

40 ಕೋಟಿ ರು. ಮೌಲ್ಯದ ಮನೆ ಖರೀದಿಸಿದ ಗಂಗೂಲಿ!

ಕೋಲ್ಕತಾ: ಟೀಂ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರು ಕೋಲ್ಕತಾದಲ್ಲಿ 40 ಕೋಟಿ ರು. ಬೆಲೆ ಬಾಳುವ ಐಷಾರಾಮಿ ಮನೆ ಖರೀದಿಸಿದ್ದಾರೆ. ಬೆಹಾಲ ಎಂಬಲ್ಲಿ ಜನಿಸಿದ್ದ ಗಂಗೂಲಿ ಸುಮಾರು 48 ವರ್ಷಗಳಿಂದ ಅಲ್ಲೇ ತಮ್ಮ ಪೋಷಕರ ಜೊತೆ ವಾಸವಾಗಿದ್ದರು. ಅಲ್ಲಿಂದ ಕೇಂದ್ರ ಕೋಲ್ಕತಾಕ್ಕೆ ಸ್ಥಳಾಂತರಗೊಳ್ಳಲು ನಿರ್ಧರಿಸಿದ್ದ ಅವರು ಸಂಬಂಧಿಯೊಬ್ಬರಿಂದ ಸ್ಥಳ ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.