ಮಹಾರಾಜ ಟ್ರೋಫಿಯಲ್ಲಿ ಕೊನೆಗೂ ಕನ್ನಡಕ್ಕೆ ಮನ್ನಣೆ!
ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದ ಮಹಾರಾಜ ಟ್ರೋಫಿ ಕನ್ನಡ ಕಡೆಗಣನೆ
ಇದೀಗ ಮೈಸೂರು ವಾರಿಯರ್ಸ್ ಫ್ರಾಂಚೈಸಿ ವತಿಯಿಂದ ಮಾದರಿ ನಡೆ
ಕಾರ್ಯಕ್ರಮದಲ್ಲಿ ನಿರೂಪಕರು, ಆಟಗಾರರು, ಮಾಲಿಕರು, ಕೋಚ್‌ಗಳು ಸೇರಿ ಬಹುತೇಕರು ಕನ್ನಡದಲ್ಲೇ ಮಾತನಾಡಿದರು
ಬೆಂಗಳೂರು(ಆ.12): ಅಭಿಮಾನಿಗಳ ಆಕ್ರೋಶಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುತ್ತಿರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ತಂಡವೊಂದು ಮಣಿದಿದೆ. ಕ್ರಿಕೆಟಿಗರು, ಕೋಚ್‌ಗಳ ಕಿರು ಸಂದರ್ಶನಗಳನ್ನು ಇಂಗ್ಲಿಷ್‌ನಲ್ಲಿ ನಡೆಸಿ ತನ್ನ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದ್ದ ಫ್ರಾಂಚೈಸಿಯು ಶುಕ್ರವಾರ ಖಾಸಗಿ ಹೋಟೆಲ್‌ನಲ್ಲಿ ತಂಡದ ಪರಿಚಯ ಹಾಗೂ ನಾಯಕನ ಘೋಷಣೆ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಕಾರ್ಯಕ್ರಮದಲ್ಲಿ ನಿರೂಪಕರು, ಆಟಗಾರರು, ಮಾಲಿಕರು, ಕೋಚ್‌ಗಳು ಸೇರಿ ಬಹುತೇಕರು ಕನ್ನಡದಲ್ಲೇ ಮಾತನಾಡಿದರು.
ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಟ್ರೋಫಿ ಅನಾವರಣ ಕಾರ್ಯಕ್ರಮದುದ್ದಕ್ಕೂ ಕೆಎಸ್‌ಸಿಎ ಅಧಿಕಾರಿಗಳು ಇಂಗ್ಲಿಷ್‌ನಲ್ಲೇ ಮಾತನಾಡಿದ್ದರು. ಟ್ರೋಫಿ ಮೇಲೂ ಇಂಗ್ಲಿಷ್‌ನಲ್ಲೇ ಮಹಾರಾಜ ಟಿ20 ಟ್ರೋಫಿ ಎಂದು ಬರೆಯಲಾಗಿದ್ದು, ವೇದಿಕೆಯ ಹಿಂದಿನ ಪರದೆಯಲ್ಲೂ ಕನ್ನಡ ಇರಲಿಲ್ಲ. ಇದನ್ನು ಪ್ರಶ್ನಿಸಿದ್ದ ಸುದ್ದಿಗಾರರಿಗೆ ಕೆಎಸ್‌ಸಿಎ ಉಪಾಧ್ಯಕ್ಷ, ಮಹಾರಾಜ ಟ್ರೋಫಿಯ ಮುಖ್ಯಸ್ಥ ಬಿ.ಕೆ.ಸಂಪತ್ ಕುಮಾರ್ ಹಾರಿಕೆ ಉತ್ತರ ನೀಡಿ ಕೈತೊಳೆದುಕೊಂಡಿದ್ದರು. ‘ಕನ್ನಡಪ್ರಭ’, ಕೆಎಸ್‌ಸಿಎಯ ಕನ್ನಡ ಧೋರಣೆಯ ಬಗ್ಗೆ ಶುಕ್ರವಾರ ವರದಿ ಪ್ರಕಟಿಸಿತ್ತು. ಈ ವರದಿಗೆ ಸಾಮಾಜಿಕ ತಾಣಗಳಲ್ಲಿ ಕನ್ನಡಾಭಿಮಾನಿಗಳಿಂದ ವ್ಯಾಪಕ ಪ್ರತಿಕ್ರಿಯೆ ದೊರೆತಿದ್ದು, ಕೆಎಸ್‌ಸಿಎಗೆ ಛಾಟಿ ಬೀಸಿದ್ದಾರೆ.
ಭಾರತ ತಂಡಕ್ಕೆ ಮರಳಲು ಪ್ರಸಿದ್ಧ್ ಉತ್ಸುಕ!
ಬೆಂಗಳೂರು: ಬೆನ್ನು ನೋವಿನಿಂದಾಗಿ ಕಳೆದೊಂದು ವರ್ಷದಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಭಾರತದ ವೇಗಿ, ಕರ್ನಾಟಕದ ಪ್ರಸಿದ್ಧ್ ಕೃಷ್ಣ ಟೀಂ ಇಂಡಿಯಾಕ್ಕೆ ಮರಳಲು ಉತ್ಸುಕರಾಗಿರುವುದಾಗಿ ಸಂತಸದಿಂದ ತಿಳಿಸಿದ್ದಾರೆ.
2022ರ ಆಗಸ್ಟ್‌ನಲ್ಲಿ ಕೊನೆ ಬಾರಿ ಕಣಕ್ಕಿಳಿದಿದ್ದ ಪ್ರಸಿದ್ಧ್ ಆ.18ರಿಂದ ಆರಂಭಗೊಳ್ಳಲಿರುವ ಐರ್ಲೆಂಡ್ ಟಿ20 ಸರಣಿಗೆ ಆಯ್ಕೆಯಾಗಿದ್ದು, ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಭಾನುವಾರದಿಂದ ಆರಂಭಗೊಳ್ಳಲಿರುವ ಮಹಾರಾಜ ಟ್ರೋಫಿಯಲ್ಲಿ ಮೈಸೂರು ತಂಡದ ಪರ ಒಂದೆರಡು ಪಂದ್ಯ ಆಡುವ ಸಾಧ್ಯತೆ ಇದೆ. ಶುಕ್ರವಾರ ತಂಡದ ಪರಿಚಯ ಕಾರ್ಯಕ್ರಮದ ವೇಳೆ ‘ಕನ್ನಡಪ್ರಭ’ದೊಂದಿಗೆ ಕ್ರಿಕೆಟ್‌ಗೆ ತಮ್ಮ ಕಮ್‌ಬ್ಯಾಕ್ ಬಗ್ಗೆ ಪ್ರಸಿದ್ಧ್ ಮುಕ್ತವಾಗಿ ಮಾತನಾಡಿದರು. ‘ಗಾಯದಿಂದಾಗಿ 1 ವರ್ಷ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಯಿತು. ಆದರೆ ಈಗ ಸಂಪೂರ್ಣವಾಗಿ ಫಿಟ್ ಆಗಿದ್ದೇನೆ. ತುಂಬಾ ಸಮಯ ಹೊರಗಿದ್ದಿದ್ದರಿಂದ ತಂಡಕ್ಕೆ ಮರಳಲು ಕಠಿಣ ಅಭ್ಯಾಸ ನಡೆಸಬೇಕಾಯಿತು. ಮೈಸೂರು ತಂಡದ ಶಿಬಿರದಲ್ಲಿ ಪಾಲ್ಗೊಂಡಿದ್ದು ಸಹ ನೆರವಾಗಿದೆ’ ಎಂದರು.
ಇಂದು ಇಂಡೋ-ವಿಂಡೀಸ್ 4ನೇ ಟಿ20 ಫೈಟ್; ಗೆದ್ದರಷ್ಟೇ ಭಾರತದ ಸರಣಿ ಕೈವಶ ಕನಸು ಜೀವಂತ..!
ಇತ್ತೀಚೆಗಷ್ಟೇ ಕೆಎಸ್‌ಸಿಎ ಆಯೋಜಿಸಿದ್ದ ಜಿ.ಕಸ್ತೂರಿ ರಂಗನ್ ಟಿ20 ಟೂರ್ನಿಯಲ್ಲಿ ತಮ್ಮ ಕ್ಲಬ್ ಪರ ಕಣಕ್ಕಿಳಿಯುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದ ಪ್ರಸಿದ್ಧ್, ವಿಶ್ವಕಪ್‌ಗೂ ಆಯ್ಕೆಯಾಗಲಿದ್ದಾರೆ ಎನ್ನುವ ಚರ್ಚೆ ಭಾರತೀಯ ಕ್ರಿಕೆಟ್ ವಲಯದಲ್ಲಿ ನಡೆಯುತ್ತಿದೆ. ಈ ಬಗ್ಗೆ ಪ್ರಶ್ನಿಸಿದಾಗ ಪ್ರಸಿದ್ಧ್, ‘ಏನಾಗುತ್ತೋ ಗೊತ್ತಿಲ್ಲ. ನೋಡೋಣ’ ಎಂದು ನಗುತ್ತಲೇ ಪ್ರತಿಕ್ರಿಯಿಸಿದರು.
ಮಹಾರಾಜ ಟಿ20: ಮೈಸೂರಿಗೆ ಕರುಣ್ ನಾಯಕ
ಭಾನುವಾರ(ಆ.13)ದಿಂದ ಆರಂಭಗೊಳ್ಳಲಿರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಮೈಸೂರು ವಾರಿಯರ್ಸ್ ತಂಡವನ್ನು ಶುಕ್ರವಾರ ಫ್ರಾಂಚೈಸಿಯು ಪರಿಚಯಿಸಿತು. ತಂಡವನ್ನು ಕರುಣ್ ನಾಯರ್ ಮುನ್ನಡೆಸಲಿದ್ದಾರೆ.
ಕರುಣ್ ನಾಯರ್ ವಿದರ್ಭಕ್ಕೆ ವಲಸೆ
ನವದೆಹಲಿ: ಕರ್ನಾಟಕ ಕ್ರಿಕೆಟಿಗ ಕರುಣ್ ನಾಯರ್ ಬೇರೆ ರಾಜ್ಯಕ್ಕೆ ವಲಸೆ ಹೋಗುವುದು ಖಚಿತವಾಗಿದ್ದು, ಮುಂದಿನ ಋತುವಿನಲ್ಲಿ ವಿದರ್ಭ ಪರ ಆಡಲಿದ್ದಾರೆ ಎಂದು ವಿದರ್ಭ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 2012ರಿಂದಲೂ ಕರ್ನಾಟಕ ಪರ ಆಡುತ್ತಿದ್ದ ಕರುಣ್ ಲಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದರು. ಇತ್ತೀಚೆಗೆ ವಲಸೆ ಬಗ್ಗೆ ‘ಕನ್ನಡಪ್ರಭ’ ಸ್ಪಷ್ಟನೆ ಕೇಳಿದ್ದಾಗ ಕರುಣ್ ‘ಅದು ವದಂತಿಯಷ್ಟೇ’ ಎಂದಿದ್ದರು.