ಮುಂಬೈ ಟೆಸ್ಟ್ ಪಂದ್ಯಕ್ಕೂ ಮುನ್ನ ಕಿವೀಸ್ ತಂಡಕ್ಕೆ ಶಾಕ್; ಸ್ಟಾರ್ ಬ್ಯಾಟರ್ ಔಟ್!
ನವೆಂಬರ್ 01ರಿಂದ ಆರಂಭವಾಗಲಿರುವ ಭಾರತ ಎದುರಿನ ಕೊನೆಯ ಟೆಸ್ಟ್ ಪಂದ್ಯಕ್ಕೆ ನ್ಯೂಜಿಲೆಂಡ್‌ನ ಸ್ಟಾರ್ ಬ್ಯಾಟರ್ ಹೊರಬಿದ್ದಿದ್ದಾರೆ.
ಮುಂಬೈ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಕಿವೀಸ್ ಪಡೆ 2-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ. ಇದೀಗ ಉಭಯ ತಂಡಗಳು ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆಯಲಿರುವ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿವೆ. ಹೀಗಾಗಿರುವಾಗಲೇ ಪ್ರವಾಸಿ ನ್ಯೂಜಿಲೆಂಡ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಸ್ಟಾರ್ ಬ್ಯಾಟರ್ ಕೇನ್ ವಿಲಿಯಮ್ಸನ್ ಮೂರನೇ ಟೆಸ್ಟ್ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ.
ತವರಿನಲ್ಲಿ ಮುಂಬರುವ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಸಂಪೂರ್ಣ ಫಿಟ್ ಆಗಿರುವ ಉದ್ದೇಶದಿಂದ ಕೇನ್ ವಿಲಿಯಮ್ಸನ್ ಇದೀಗ ಭಾರತ ವಿರುದ್ದದ ಕೊನೆಯ ಟೆಸ್ಟ್ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಕೇನ್ ವಿಲಿಯಮ್ಸನ್ ಸದ್ಯ ತೊಡೆಸಂದು ನೋವಿನಿಂದ ಬಳಲುತ್ತಿದ್ದು, ಭಾರತ ಎದುರಿನ ಮೊದಲೆರಡು ಟೆಸ್ಟ್ ಪಂದ್ಯಗಳಿಂದಲೂ ಹೊರಗುಳಿದಿದ್ದರು. ಸ್ಟಾರ್ ಬ್ಯಾಟರ್ ಹೊರತಾಗಿಯೂ ಅದ್ಭುತ ಪ್ರದರ್ಶನ ತೋರಿದ ನ್ಯೂಜಿಲೆಂಡ್ ತಂಡವು, ಇದೇ ಮೊದಲ ಬಾರಿಗೆ ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಜಯಿಸುವಲ್ಲಿ ಯಶಸ್ವಿಯಾಗಿದೆ.
ಪ್ರಾಕ್ಟೀಸ್ ಆಯ್ಕೆಯಲ್ಲ, ಕಡ್ಡಾಯ: 2 ಸೋಲಿನ ಬಳಿಕ ಭಾರತ ಆಟಗಾರರಿಗೆ ಬಿಸಿಸಿಐ ಖಡಕ್ ಸೂಚನೆ
ಇನ್ನು ಕೇನ್ ವಿಲಿಯಮ್ಸನ್ ಅವರ ಕುರಿತಂತೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ಪ್ರಮುಖ ಅಪ್‌ಡೇಟ್ ನೀಡಿದ್ದು, "ಮುಂಬರುವ ಇಂಗ್ಲೆಂಡ್ ಎದುರು ತವರಿನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಸಂಪೂರ್ಣ ಫಿಟ್ ಆಗಿರುವ ಉದ್ದೇಶದಿಂದ, ಕೇನ್ ವಿಲಿಯಮ್ಸನ್, ಮೂರನೇ ಟೆಸ್ಟ್ ಪಂದ್ಯವನ್ನಾಡಲು ಮುಂಬೈಗೆ ತಂಡದ ಜತೆ ಪ್ರಯಾಣಿಸುತ್ತಿಲ್ಲ" ಎಂದು ತಿಳಿಸಿದೆ.
ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಮುಂಬರುವ ನವೆಂಬರ್ 28ರಿಂದ ಹೇಗ್ಲೆ ಓವೆಲ್ ಮೈದಾನದಲ್ಲಿ ಆರಂಭವಾಗಲಿದೆ.
ಈ ಮೊದಲೇ ನ್ಯೂಜಿಲೆಂಡ್ ಹೆಡ್ ಕೋಚ್ ಗ್ಯಾರಿ ಸ್ಟೆಡ್, "ಕೇನ್ ವಿಲಿಯಮ್ಸನ್ ಭಾರತ ಎದುರಿನ ಮೊದಲೆರಡು ಟೆಸ್ಟ್‌ಗೆ ಅಲಭ್ಯರಾಗಿದ್ದರು. ಅವರು ಉತ್ತಮ ರೀತಿಯಲ್ಲಿ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಅವರು ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಸಂಪೂರ್ಣ ಫಿಟ್ ಆಗಬೇಕಿರುವುದು ನಮ್ಮ ಮುಖ್ಯ ಉದ್ದೇಶವಾಗಿರುವುದರಿಂದಾಗಿ ನಾವು ಎಚ್ಚರಿಕೆ ತೀರ್ಮಾನವನ್ನು ತೆಗೆದುಕೊಳ್ಳಲಿದ್ದೇವೆ" ಎಂದಿದ್ದರು.
3 ವರ್ಷ, 4 ನಾಯಕರು, 28 ಆಯ್ಕೆಗಾರರು, 8 ಕೋಚ್! ಇದು ಪಾಕ್ ಕ್ರಿಕೆಟ್‌ನ ದುರಂತ ಕಥೆ!
ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು 8 ವಿಕೆಟ್ ಅಂತರದ ಜಯ ಸಾಧಿಸಿತ್ತು. ಇದಾದ ಬಳಿಕ ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ತಂಡವು 113 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಇದೀಗ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವು ನವೆಂಬರ್ 01ರಿಂದ ಮುಂಬೈನ ವಾಂಖೇಡೆ ಮೈದಾನದಲ್ಲಿ ಆರಂಭವಾಗಲಿದೆ.