ಪಾಕಿಸ್ತಾನ ಕ್ರಿಕೆಟ್ ಪರಿಸ್ಥಿತಿ ದಿನದಿಂದ ದಿನಕ್ಕೆ ಅಧೋಗತಿಗೆ ತಲುಪುತ್ತಿದೆ. ಕಳೆದ 3 ವರ್ಷದಲ್ಲಿ 4 ನಾಯಕರು ಬದಲಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಲಾಹೋರ್‌: ಪಾಕಿಸ್ತಾನ ಕ್ರಿಕೆಟ್‌ನ ದುರವಸ್ಥೆ ದಿನಗಳೆದಂತೆ ಹೆಚ್ಚಾಗುತ್ತಲೇ ಇದ್ದು, ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಂಡುಬರುತ್ತಿಲ್ಲ. ಆಯ್ಕೆ ಸಮಿತಿ, ಆಡಳಿತ ಸಮಿತಿ, ನಾಯಕರ ಬದಲಾವಣೆ ಗದ್ದಲಗಳ ನಡುವೆಯೇ ಪಾಕ್‌ ಕ್ರಿಕೆಟ್‌ನ ದುರಂತ ಕಥೆಯ ಮತ್ತೊಂದು ಅಧ್ಯಾಯ ಎಂಬಂತೆ ಸೋಮವಾರ ಮುಖ್ಯ ಕೋಚ್‌ ಗ್ಯಾರಿ ಕರ್ಸ್ಟನ್‌ ಅವಧಿಗೂ ಮುನ್ನವೇ ತಮ್ಮ ಹುದ್ದೆ ತೊರೆದಿದ್ದಾರೆ.

2021ರ ಆಗಸ್ಟ್‌ನಲ್ಲಿ ಪಾಕ್‌ ಕ್ರಿಕೆಟ್‌ ಮಂಡಳಿ(ಪಿಸಿಬಿ) ಮುಖ್ಯಸ್ಥ ಸ್ಥಾನದಿಂದ ಎಹ್ಸಾನ್‌ ಮಾಣಿ ಕೆಳಗಿಳಿದ ಬಳಿಕ ಅಲ್ಲಿನ ಕ್ರಿಕೆಟ್‌ ವ್ಯವಸ್ಥೆಯೂ ಕುಸಿಯುತ್ತಿದೆ. ಕಳೆದ 3 ವರ್ಷಗಳಲ್ಲಿ ಪಿಸಿಬಿ 4 ಮುಖ್ಯಸ್ಥರನ್ನು ಕಂಡಿದೆ. ರಮೀಜ್‌ ರಾಜಾ, ನಜಂ ಸೇಠಿ, ಜಾಕಾ ಆಶ್ರಫ್‌ ಬಳಿಕ ಈಗ ಮೊಹ್ಸಿನ್‌ ನಖ್ವಿ ಅಧ್ಯಕ್ಷ ಸ್ಥಾನದಲ್ಲಿದ್ದಾರೆ. ದೀರ್ಘ ಕಾಲದ ನಾಯಕ ಬಾಬರ್ ಆಜಂ ಬಳಿಕ ಶಾಹೀನ್‌ ಅಫ್ರಿದಿ, ಶಾನ್‌ ಮಸೂದ್‌, ಮೊಹಮದ್‌ ರಿಜ್ವಾನ್‌ ನಾಯಕತ್ವ ಸ್ವೀಕರಿಸಿದ್ದಾರೆ.

ಪಾಕ್ ಕ್ರಿಕೆಟ್ ಕೋಚ್ ಹುದ್ದೆಗೆ ಸೇರಿ 6 ತಿಂಗಳೂಳಗಾಗಿ ತಮ್ಮ ಸ್ಥಾನಕ್ಕೆ ಗ್ಯಾರಿ ಕರ್ಸ್ಟನ್ ಗುಡ್‌ ಬೈ!

ಇನ್ನು, ಆಯ್ಕೆ ಸಮಿತಿ ಕಥೆಯಂತೂ ಘೋರ. ಕೇವಲ ಮೂರೇ ವರ್ಷದಲ್ಲಿ ಆಯ್ಕೆ ಸಮಿತಿಗೆ ಮೂವರು ಮುಖ್ಯಸ್ಥರು ಹಾಗೂ ಬರೋಬ್ಬರಿ 28 ಮಂದಿ ಆಯ್ಕೆಯಾಗಿದ್ದಾರೆ. ವಿದೇಶದಲ್ಲಿ ಲೀಗ್‌ ಆಡುತ್ತಿರುವಾಗಲೇ ಆಯ್ಕೆ ಸಮಿತಿಗೆ ಆಯ್ಕೆಯಾಗುವುದು, ನಿವೃತ್ತಿ ಘೋಷಿಸಿ ಕೆಲ ತಿಂಗಳಲ್ಲೇ ಮುಖ್ಯಸ್ಥರಾಗಿ ನೇಮಕಗೊಳ್ಳುವುದೆಲ್ಲಾ ಸದ್ಯ ಪಾಕ್‌ ಕ್ರಿಕೆಟ್‌ನಲ್ಲಿ ಮಾತ್ರ ಕಾಣಲು ಸಾಧ್ಯ.

ಕೋಚ್‌ಗಳು ಕೂಡಾ ಪದೇ ಪದೇ ಬದಲಾಗುತ್ತಿದ್ದು, ಪಿಸಿಬಿ ಜೊತೆಗಿನ ಕಿತ್ತಾಟದಿಂದಾಗಿ ಅವಧಿ ಪೂರ್ಣಗೊಳ್ಳುವ ಮೊದಲೇ ಹುದ್ದೆ ತೊರೆಯುತ್ತಿದ್ದಾರೆ. 2021ರಲ್ಲಿ ಮಿಸ್ಬಾಹುಲ್‌ ಹಕ್‌ ಕೋಚ್‌ ಆಗಿದ್ದರೆ, ಬಳಿಕ ಈ ವರೆಗೂ ಏಳು ಮಂದಿ ಹುದ್ದೆಗೇರಿದ್ದಾರೆ. ಈಗ ಪಿಸಿಬಿ ಮತ್ತೋರ್ವ ಕೋಚ್‌ನ ಹುಡುಕಾಟದಲ್ಲಿದೆ.

ಆರೇ ತಿಂಗಳಿಗೆ ಕರ್ಸ್ಟನ್‌ ಕೋಚ್‌ ಸ್ಥಾನಕ್ಕೆ ಗುಡ್‌ಬೈ!

ಪಾಕಿಸ್ತಾನದ ಸೀಮಿತ ಓವರ್‌ ತಂಡದ ಕೋಚ್, ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್‌ ಕೇವಲ ಆರು ತಿಂಗಳಲ್ಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 2011ರಲ್ಲಿ ಭಾರತ ಏಕದಿನ ವಿಶ್ವಕಪ್‌ ಗೆದ್ದಾಗ ತಂಡಕ್ಕೆ ಕೋಚ್‌ ಆಗಿದ್ದ ಕರ್ಸ್ಟನ್‌ ಕಳೆದ ಏಪ್ರಿಲ್‌ನಲ್ಲಿ ಪಾಕ್‌ ತಂಡದ ಕೋಚ್‌ ಹುದ್ದೆಗೇರಿದ್ದರು. ಕೋಚ್‌ ಅವಧಿ ಎರಡು ವರ್ಷ ಇರಲಿದೆ ಎಂದು ಪಾಕ್‌ ಕ್ರಿಕೆಟ್‌ ಮಂಡಳಿ(ಪಿಸಿಬಿ) ಪ್ರಕಟಿಸಿತ್ತು. ಆದರೆ ಪಿಸಿಬಿ ಜೊತೆಗಿನ ಮನಸ್ತಾಪದ ಕಾರಣಕ್ಕೆ ಅವರು ಅವಧಿಗೂ ಮುನ್ನವೇ ಹುದ್ದೆ ತೊರೆದಿದ್ದಾರೆ. ಹುದ್ದೆ ಬಿಡಲು ಕಾರಣ ಬಹಿರಂಗಗೊಳ್ಳದಿದ್ದರೂ, ಆಸ್ಟ್ರೇಲಿಯಾ ಹಾಗೂ ಜಿಂಬಾಬ್ವೆ ವಿರುದ್ಧ ಸರಣಿಗಳಿಗೆ ತಂಡ ಪ್ರಕಟಿಸುವಾಗ ತಮ್ಮನ್ನು ಕಡೆಗಣಿಸಿದ್ದಕ್ಕೆ ಕರ್ಸ್ಟನ್‌ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಫಾರ್ಮ್ ಕಂಡುಕೊಳ್ಳಲು ವಿರಾಟ್ ಕೊಹ್ಲಿ ಮೊದಲು ದೇಶಿ ಕ್ರಿಕೆಟ್ ಆಡಲಿ: ಆರ್‌ಸಿಬಿ ಮಾಜಿ ಕ್ರಿಕೆಟಿಗನ ಆಗ್ರಹ

ಟೆಸ್ಟ್‌ಗೆ ಮಾತ್ರ ಕೋಚ್‌, ಏಕದಿನಕ್ಕೆ ಆಗಲ್ಲ: ಗಿಲೆಪ್ಸಿ

ಗ್ಯಾರಿ ಕರ್ಸ್ಟನ್‌ ರಾಜೀನಾಮೆ ಬೆನ್ನಲ್ಲೇ, ಟೆಸ್ಟ್‌ ತಂಡದ ಹಾಲಿ ಕೋಚ್‌ ಆಗಿರುವ ಜೇಸನ್‌ ಗಿಲೆಸ್ಪಿಯನ್ನು ಪಾಕಿಸ್ತಾನದ ಸೀಮಿತ ಓವರ್‌ ತಂಡದ ಹೊಸ ಕೋಚ್‌ ಎಂದು ಪಿಸಿಬಿ ಘೋಷಿಸಿದೆ. ಆದರೆ ನಾನು ಕೇವಲ ಟೆಸ್ಟ್‌ ತಂಡದ ಕೋಚ್‌ ಆಗಿ ಇರುತ್ತೇನೆ. ಏಕದಿನ, ಟಿ20ಗೆ ಕೋಚಿಂಗ್‌ ಮಾಡಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಗಿಲೆಪ್ಸಿ ಹೇಳಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಪಿಸಿಬಿಗೆ ಭಾರಿ ಮುಜುಗರ ಎದುರಾಗಿದೆ. ಈ ನಡುವೆ ಪಿಸಿಬಿ, ಏಕದಿನ ಹಾಗೂ ಟಿ20ಗೆ ಹೊಸ ಕೋಚ್‌ನ ಹುಡುಕಾಟದಲ್ಲಿದ್ದು, ಮಾಜಿ ಆಟಗಾರರಾದ ಆಖಿಬ್‌ ಜಾವೆದ್‌, ಸಕಲೈನ್‌ ಮುಷ್ತಾಕ್‌ ರೇಸ್‌ನಲ್ಲಿದ್ದಾರೆ.