ಸೂರ್ಯಕುಮಾರ್ ಯಾದವ್ ಮತ್ತು ರಿಯಾನ್ ರಿಕೆಲ್ಟನ್ ಅರ್ಧಶತಕಗಳ ನೆರವಿನಿಂದ ಮುಂಬೈ ಇಂಡಿಯನ್ಸ್ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 54 ರನ್‌ಗಳ ಜಯ ಸಾಧಿಸಿದೆ. ಜಸ್ಪ್ರೀತ್ ಬುಮ್ರಾ 4 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಮುಂಬೈ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ.
ಮುಂಬೈ: ಸೂರ್ಯಕುಮಾರ್ ಯಾದವ್, ರಿಯಾನ್ ರಿಕೆಲ್ಟನ್ ಆಕರ್ಷಕ ಅರ್ಧಶತಕ ಹಾಗೂ ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ಲಖನೌ ಸೂಪರ್ ಜೈಂಟ್ಸ್ ತಂಡವು 54 ರನ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಇನ್ನು ಟೂರ್ನಿಯಲ್ಲಿ ಸತತ 5ನೇ ಗೆಲುವು ಸಾಧಿಸಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದು, ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ಸುಗಮ ಮಾಡಿಕೊಂಡಿದೆ. ಈ ಪಂದ್ಯಕ್ಕೂ ಮುನ್ನ ಮುಂಬೈ ತಂಡವು ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿತ್ತು. ಇದೀಗ ಪಂಜಾಬ್ ಹಾಗೂ ಆರ್‌ಸಿಬಿ ತಂಡವನ್ನು ಹಿಂದಿಕ್ಕಿ ಟಾಪ್-2 ಗೆ ಎಂಟ್ರಿಕೊಟ್ಟಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲಿಳಿದ ಮುಂಬೈ ಇಂಡಿಯನ್ಸ್ ತಂಡವು ಸ್ಪೋಟಕ ಆರಂಭ ಪಡೆಯಿತಾದರೂ, ಮಾಜಿ ನಾಯಕ ರೋಹಿತ್ ಶರ್ಮಾ(12) ಅವರನ್ನು ಮಯಾಂಕ್ ಯಾದವ್ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಮತ್ತೋರ್ವ ಆರಂಭಿಕ ಬ್ಯಾಟರ್ ರಿಯಾನ್ ರಿಕೆಲ್ಟನ್ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಲಖನೌ ಬೌಲರ್‌ಗಳನ್ನು ಕಾಡಿದರು. ರಿಕೆಲ್ಟನ್ ಕೇವಲ 32 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 58 ರನ್ ಗಳಿಸಿ ದಿಗ್ವೇಶ್ ರಾಠಿಗೆ ವಿಕೆಟ್ ಒಪ್ಪಿಸಿದರು.
ಇನ್ನು ಮತ್ತೊಂದು ತುದಿಯಲ್ಲಿ ವಿಲ್ ಜ್ಯಾಕ್ಸ್ 29 ರನ್ ಗಳಿಸಿ ಪ್ರಿನ್ಸ್ ಯಾದವ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರನಡೆದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಮತ್ತೊಮ್ಮೆ ಆಕರ್ಷಕ ಇನ್ನಿಂಗ್ಸ್ ಆಡಿದ ಸೂರ್ಯಕುಮಾರ್ ಯಾದವ್ ಸ್ಪೋಟಕ ಅರ್ಧಶತಕ ಸಿಡಿಸಿ ತವರಿನ ಅಭಿಮಾನಿಗಳನ್ನು ರಂಜಿಸಿದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 215 ರನ್ ಕಲೆಹಾಕಿತು.
ಇನ್ನು ಕಠಿಣ ಗುರಿ ಬೆನ್ನತ್ತಿದ ಲಖನೌ ಸೂಪರ್ ಜೈಂಟ್ಸ್ ತಂಡ ಕೂಡಾ ಆರಂಭದಲ್ಲೇ ಏಯ್ಡನ್ ಮಾರ್ಕ್‌ರಮ್ ವಿಕೆಟ್ ಕಳೆದುಕೊಂಡಿತು. ಇನ್ನು ಇನ್‌ಫಾರ್ಮ್ ಬ್ಯಾಟರ್ ನಿಕೋಲಸ್ ಪೂರನ್ 15 ಎಸೆತಗಳಲ್ಲಿ 27 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಐಪಿಎಲ್‌ನ ದುಬಾರಿ ಆಟಗಾರ, ಲಖನೌ ನಾಯಕ ರಿಷಭ್ ಪಂತ್ ಕೇವಲ 4 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಇನ್ನು ಮಿಚೆಲ್ ಮಾರ್ಷ್ 34 ಹಾಗೂ ಆಯುಷ್ ಬದೋನಿ 35 ರನ್ ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಡೇವಿಡ್ ಮಿಲ್ಲರ್ 24 ರನ್ ಸಿಡಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು.
ಇನ್ನು ಮುಂಬೈ ಇಂಡಿಯನ್ಸ್ ಪರ ಶಿಸ್ತುಬದ್ಧ ಬೌಲಿಂಗ್ ದಾಳಿ ನಡೆಸಿದ ವೇಗಿ ಜಸ್ಪ್ರೀತ್ ಬುಮ್ರಾ 4 ಓವರ್‌ನಲ್ಲಿ ಕೇವಲ 22 ರನ್ ನೀಡಿ 4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇನ್ನು ವಿಲ್ ಜ್ಯಾಕ್ಸ್ 18 ರನ್ ನೀಡಿ 2 ಪ್ರಮುಖ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇನ್ನು ಎಡಗೈ ವೇಗಿ ಟ್ರೆಂಟ್ ಬೌಲ್ಟ್ 3 ಹಾಗೂ ಮುಂಬೈ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಕಾರ್ಬಿನ್ ಬಾಷ್ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾದರು.
ಮುಂಬೈ ಇಂಡಿಯನ್ಸ್ ತಂಡವು ಟೂರ್ನಿಯ ಲೀಗ್ ಹಂತದಲ್ಲಿ ಇನ್ನು 4 ಪಂದ್ಯಗಳನ್ನಾಡುವುದು ಬಾಕಿ ಉಳಿದಿದ್ದು, ಈ ಪೈಕಿ ಕೇವಲ ಎರಡು ಗೆಲುವು ಸಾಧಿಸಿದರೆ ಅಧಿಕೃತವಾಗಿ ಪ್ಲೇ ಆಫ್‌ಗೆ ಎಂಟ್ರಿ ಕೊಡಲಿದೆ.
