9 ವರ್ಷಗಳ ಬಳಿಕ ತಾಯಿಯನ್ನು ಭೇಟಿ ಮಾಡಿದ ಮುಂಬೈ ಇಂಡಿಯನ್ಸ್ ವೇಗಿ..!
* 9 ವರ್ಷಗಳ ಬಳಿಕ ತನ್ನ ಕುಟುಂಬವನ್ನು ಭೇಟಿಯಾದ ಕುಮಾರ್ ಕಾರ್ತಿಕೇಯ
* ಕುಮಾರ್ ಕಾರ್ತಿಕೇಯ ಹಂಚಿಕೊಂಡ ಫೋಟೋವೀಗ ವೈರಲ್
* ಕಳೆದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ಕುಮಾರ್ ಕಾರ್ತಿಕೇಯ
ಮುಂಬೈ(ಆ.04): ಕ್ರಿಕೆಟ್ ವೇಳಾಪಟ್ಟಿಗಳು ದಿನದಿಂದ ದಿನಕ್ಕೆ ಆಟಗಾರರ ಪಾಲಿಗೆ ವಿಪರೀತ ಎನ್ನುವಷ್ಟರ ಮಟ್ಟಿಗೆ ಹೆಚ್ಚಾಗುತ್ತಿವೆ. ಹೀಗಾಗಿ ಕ್ರಿಕೆಟ್ ಆಟಗಾರರು ತಮ್ಮ ಕುಟುಂಬದಿಂದ ಬಹುತೇಕ ದೂರವೇ ಉಳಿದಿರುತ್ತಾರೆ. ಅದರಲ್ಲೂ ಕೋವಿಡ್ 19 ಹೆಮ್ಮಾರಿ ವಕ್ಕರಿಸಿದ ಮೇಲಂತೂ, ಆಟಗಾರರು ಬಯೋಬಬಲ್ ನರಕ ಅನುಭವಿಸುತ್ತಿದ್ದಾರೆ. ಇದೀಗ ಮುಂಬೈ ಇಂಡಿಯನ್ಸ್ ಆಲ್ರೌಂಡರ್ ಕುಮಾರ್ ಕಾರ್ತಿಕೇಯ ತಮ್ಮ ಮನೆಗೆ ವಾಪಾಸ್ಸಾಗಿರುವ ಫೋಟೋವೊಂದನ್ನು ಹಂಚಿಕೊಂಡಿದ್ದು, ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ. ಈ ಫೋಟೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
9 ವರ್ಷ 3 ತಿಂಗಳ ಬಳಿಕ ನಾನು ನನ್ನ ಕುಟುಂಬ ಹಾಗೂ ನನ್ನ ತಾಯಿಯನ್ನು ಭೇಟಿ ಮಾಡಿದೆ. ನನ್ನ ಭಾವನೆಗಳನ್ನು ವರ್ಣಿಸಲು ಸಾಧ್ಯವಾಗುತ್ತಿಲ್ಲ ಎಂದು ಕುಮಾರ್ ಕಾರ್ತಿಕೇಯ ಟ್ವೀಟ್ ಮಾಡಿದ್ದಾರೆ. ಈ ಫೋಟೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 18 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.
ಟೀಂ ಇಂಡಿಯಾದಲ್ಲಿ ಮತ್ತೆ ಶುರುವಾಗಿದೆ ಮುಂಬೈ ಲಾಬಿ..?
ಕುಮಾರ್ ಕಾರ್ತಿಕೇಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು, ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಕೂಡಾ ಈ ಫೋಟೋವನ್ನು ಹಂಚಿಕೊಂಡಿದ್ದು, ಇದನ್ನೇ ಅಲ್ವಾ ಪರಿಪೂರ್ಣವಾಗಿ ಮನೆಗೆ ಬರುವುದು ಎಂದರೇ ಎಂದು ಟ್ವೀಟ್ ಮಾಡಿದೆ
2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕುಮಾರ್ ಕಾರ್ತಿಕೇಯ ಮುಂಬೈ ಇಂಡಿಯನ್ಸ್ ಪರ 4 ಪಂದ್ಯಗಳನ್ನಾಡಿ 5 ವಿಕೆಟ್ ಹಾಗೂ 3 ರನ್ ಗಳಿಸಿದ್ದಾರೆ. ಕುಮಾರ್ ಕಾರ್ತಿಕೇಯ ಇತ್ತೀಚೆಗಷ್ಟೇ ಮುಕ್ತಾಯವಾದ ರಣಜಿ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಮಧ್ಯ ಪ್ರದೇಶ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಎನಿಸಿದ್ದರು. 2022ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಕುಮಾರ್ ಕಾರ್ತಿಕೇಯ 11 ಇನಿಂಗ್ಸ್‌ಗಳಿಂದ 32 ವಿಕೆಟ್ ಕಬಳಿಸುವ ಮೂಲಕ ಮಧ್ಯಪ್ರದೇಶ ಕ್ರಿಕೆಟ್ ತಂಡದ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದರು.
ಕ್ರಿಕೆಟ್ನಲ್ಲಿ ಏನನ್ನಾದರೂ ಸಾಧಿಸಲೇಬೇಕು ಅನ್ನುವ ಛಲದಿಂದ 2014ರಲ್ಲೇ ಕುಮಾರ್ ಕಾರ್ತಿಕೇಯ ಮನೆ ತೊರೆದಿದ್ದರು. 9 ವರ್ಷದಿಂದ ಆಡಿ ಬೆಳೆದ ಮನೆಗೆ ಈವರೆಗೆ ಕಾಲಿಟ್ಟಿರಲಿಲ್ಲ. ಕುಟುಂಬದವರು ಮನೆಗೆ ಬಾ ಎಂದ್ರೂ ಆ ಕಡೆಗೆ ಒಮ್ಮೆಯೂ ತಿರುಗಿ ನೋಡಿರಲಿಲ್ಲ. ಈ ಸತ್ಯವನ್ನು ವೇಗಿ ಕುಮಾರ್ ಕಾರ್ತಿಕೇಯ ಕೆಲ ದಿನಗಳ ಹಿಂದಷ್ಟೇ ಹಂಚಿಕೊಂಡಿದ್ದರು. 'ನಾನು ಕಳೆದ ಒಂಬತ್ತು ವರ್ಷದಿಂದ ಮನೆಗೆ ಹೋಗಿಲ್ಲ. ಜೀವನದಲ್ಲಿ ಏನನ್ನಾದರೂ ಸಾಧಿಸಿದ ಬಳಿಕವೇ ಹೋಗಲು ನಿರ್ಧರಿಸಿದ್ದೇ. ತಂದೆ-ತಾಯಿ ಆಗಾಗ ಪೋನ್ ಮಾಡಿ ಕರೆಯುತ್ತಿದ್ದರು. ಆದರೂ ಹೋಗಲಿಲ್ಲ. ಕೊನೆಗೆ ಐಪಿಎಲ್‌ನಲ್ಲಿ ಆಡಿದ ಬಳಿಕ ಮನೆಗೆ ಮರಳಿ ಹೋಗಲು ನಿರ್ಧರಿಸಿದ್ದೇನೆ.’ಎಂದು ಮುಂಬೈ ಇಂಡಿಯನ್ಸ್ (Mumbai Indians) ತಂಡದ ಎಡಗೈ ಸ್ಪಿನ್ನರ್ ಕುಮಾರ್ ಕಾರ್ತಿಕೇಯ ಕಳೆದ ಮೇ ತಿಂಗಳಿನಲ್ಲಿ ಹೇಳಿದ್ದರು.