ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್, ಮಿನಿ ಹರಾಜಿಗೂ ಮುನ್ನ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಫ್ರಾಂಚೈಸಿಯು ಪ್ರಮುಖ ಆಟಗಾರರನ್ನು ಉಳಿಸಿಕೊಂಡು, 9 ಆಟಗಾರರನ್ನು ಬಿಡು-ಗಡೆ ಮಾಡಿದೆ ಹಾಗೂ ಮೂವರು ಹೊಸ ಆಟಗಾರರನ್ನು ಟ್ರೇಡ್ ಮೂಲಕ ತಂಡಕ್ಕೆ ಸೇರಿಸಿಕೊಂಡಿದೆ.

ಬೆಂಗಳೂರು: 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್‌ ಪ್ರವೇಶಿಸಿತ್ತಾದರೂ, ಫೈನಲ್ ಪ್ರವೇಶಿಸಲು ವಿಫಲವಾಗಿತ್ತು. ಇದೀಗ ಹಳೆಯ ತಪ್ಪನ್ನು ತಿದ್ದಿಕೊಂಡು ಮೈದಾನಕ್ಕಿಳಿಯಲು ಮುಂಬೈ ಫ್ರಾಂಚೈಸಿ ಸಜ್ಜಾಗಿದೆ. ಇದರ ಭಾಗವಾಗಿ ಹಾರ್ದಿಕ್ ಪಾಂಡ್ಯ ಪಡೆ ಮಿನಿ ಹರಾಜಿಗೂ ಮುನ್ನ 17 ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದು, ಮೂವರು ಆಟಗಾರರನ್ನು ಟ್ರೇಡ್‌ ಮೂಲಕ ಖರೀದಿಸಿದೆ.

9 ಆಟಗಾರರಿಗೆ ಗೇಟ್‌ಪಾಸ್ ನೀಡಿದ ಮುಂಬೈ ಇಂಡಿಯನ್ಸ್:

ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದು ಎನಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಮಿನಿ ಹರಾಜಿಗೂ ಮೊದಲು 8 ಆಟಗಾರರನ್ನು ತಂಡದಿಂದ ರಿಲೀಸ್ ಮಾಡಿದ್ದು, ಓರ್ವ ಆಟಗಾರನನ್ನು ಟ್ರೇಡ್ ಮಾಡಿದೆ. ಅರ್ಜುನ್ ತೆಂಡುಲ್ಕರ್ ಅವರನ್ನು ಮುಂಬೈ ಫ್ರಾಂಚೈಸಿಯು 30 ಲಕ್ಷ ರುಪಾಯಿಗೆ ಲಖನೌ ಸೂಪರ್ ಜೈಂಟ್ಸ್‌ ತಂಡಕ್ಕೆ ಮಾರಾಟ ಮಾಡಿತ್ತು. ಅರ್ಜುನ್ ತೆಂಡೂಲ್ಕರ್ ಇದೇ ಮೊದಲ ಬಾರಿಗೆ ಮುಂಬೈ ಫ್ರಾಂಚೈಸಿ ಬಿಟ್ಟು ಇನ್ನೊಂದು ಫ್ರಾಂಚೈಸಿ ಪರ ಕಣಕ್ಕಿಳಿಯಲಿದ್ದಾರೆ. ಇನ್ನುಳಿದಂತೆ ಸ್ಪಿನ್ನರ್ ವಿಘ್ನೇಶ್ ಪುತೂರ್, ಬೆವನ್ ಜೆಕೊಬ್ಸ್, ಕೆ ಶ್ರೀಜಿತ್, ಕರ್ಣ್ ಶರ್ಮಾ, ಲೀಜ್ ವಿಲಿಯಮ್ಸ್, ಸತ್ಯನಾರಾಯಣ ರಾಜು, ಮುಜೀಬ್‌ ಉರ್ ರೆಹಮಾನ್, ರೀಸ್ ಟಾಪ್ಲಿ ಅವರನ್ನು ರಿಲೀಸ್ ಮಾಡಿದೆ.

ಸ್ಟಾರ್ ಆಟಗಾರರನ್ನು ಉಳಿಸಿಕೊಂಡ ಮುಂಬೈ ಇಂಡಿಯನ್ಸ್:

ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ನಾಯಕ ಹಾರ್ದಿಕ್ ಪಾಂಡ್ಯ, ಟಿ20 ಸ್ಪೆಷಲಿಸ್ಟ್ ಆಟಗಾರರಾದ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ವಿಲ್ ಜ್ಯಾಕ್ಸ್, ರಿಯಾನ್ ರಿಕಲ್ಟನ್ ಅವರನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಮೂವರು ಆಟಗಾರರನ್ನು ಟ್ರೇಡ್ ಮಾಡಿಕೊಂಡ ಮುಂಬೈ ಇಂಡಿಯನ್ಸ್:

ಇನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಅರ್ಜುನ್ ತೆಂಡೂಲ್ಕರ್ ಅವರನ್ನು ಲಖನೌಗೆ ಟ್ರೇಡ್ ಮಾಡಿತ್ತು. ಇದಾದ ನಂತರ ಗುಜರಾತ್ ಟೈಟಾನ್ಸ್‌ನಿಂದ ಶೆರ್ಫಾನೆ ರುದರ್‌ಫೋರ್ಡ್, ಅನುಭವಿ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಹಾಗೂ ಮಯಾಂಕ್ ಮಾರ್ಕಂಡೆಯನ್ನು ಟ್ರೇಡ್ ಮೂಲಕ ಖರೀದಿಸುವಲ್ಲಿ ಮುಂಬೈ ಇಂಡಿಯನ್ಸ್ ಯಶಸ್ವಿಯಾಗಿದೆ.

Scroll to load tweet…

ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು 20 ಆಟಗಾರರನ್ನು ಹೊಂದಿದ್ದು, ಹರಾಜಿಗೆ ಪರ್ಸ್‌ನಲ್ಲಿ ಕೇವಲ 2.75 ಕೋಟಿ ರುಪಾಯಿ ಉಳಿಸಿಕೊಂಡಿದೆ. ಹರಾಜಿನಲ್ಲಿ ಮುಂಬೈ ಫ್ರಾಂಚೈಸಿ ಓರ್ವ ವಿದೇಶಿ ಆಟಗಾರ ಸೇರಿದಂತೆ ಗರಿಷ್ಠ ಐದು ಆಟಗಾರರನ್ನು ಖರೀದಿಸಲು ಅವಕಾಶವಿದೆ.

ಮುಂಬೈ ಇಂಡಿಯನ್ಸ್ ರೀಟೈನ್ ಮಾಡಿಕೊಂಡ ಆಟಗಾರರ ವಿವರ ಹೀಗಿದೆ ನೋಡಿ:

ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ರಾಬಿನ್ ಮಿನ್ಜ್, ರಿಯಾನ್ ರಿಕಲ್ಟನ್, ಹಾರ್ದಿಕ್ ಪಾಂಡ್ಯ(ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ವಿಲ್ ಜ್ಯಾಕ್ಸ್, ಕಾರ್ಬಿನ್ ಬಾಷ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ದೀಪಕ್ ಚಹರ್, ಅಶ್ವಿನಿ ಕುಮಾರ್, ರಘು ಶರ್ಮಾ, ಅಲ್ಲಾ ಘಜನ್‌ಫರ್.