ಐಪಿಎಲ್ ಮಿನಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಹತ್ವದ ಬದಲಾವಣೆ ಮಾಡಿದೆ. ತಂಡವು ಇಬ್ಬರು ಕನ್ನಡಿಗರಾದ ಮಯಾಂಕ್ ಅಗರ್‌ವಾಲ್ ಮತ್ತು ಮನೋಜ್ ಭಾಂಡಗೆ ಸೇರಿದಂತೆ ಒಟ್ಟು 8 ಆಟಗಾರರನ್ನು ಕೈಬಿಟ್ಟಿದೆ.
ಬೆಂಗಳೂರು: ಬಹುನಿರೀಕ್ಷಿತ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಭರದ ಸಿದ್ದತೆಗಳು ನಡೆಯುತ್ತಿವೆ. ಹೀಗಿರುವಾಗಲೇ ಆಟಗಾರರ ರೀಟೈನ್ ಹಾಗೂ ರಿಲೀಸ್‌ಗೆ ಇಂದು ಕೊನೆಯ ದಿನವಾಗಿತ್ತು. ಇದೀಗ ಎಲ್ಲಾ ತಂಡಗಳು ಮಿನಿ ಹರಾಜಿಗೂ ಮುನ್ನ ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಂಡು, ಬೇಡವಾದ ಆಟಗಾರರನ್ನು ತಂಡದಿಂದ ರಿಲೀಸ್ ಮಾಡಿದೆ. ಹೀಗಿರುವಾಗಲೇ ಹಾಲಿ ಚಾಂಪಿಯನ್ ಯಾರನ್ನೆಲ್ಲಾ ಉಳಿಸಿಕೊಳ್ಳಲಿದೆ ಹಾಗೂ ಯಾರಿಗೆ ಗೇಟ್‌ಪಾಸ್ ನೀಡಲಿದೆ ಎನ್ನುವ ಕುತೂಹಲ ಜೋರಾಗಿತ್ತು. ಅದರಲ್ಲೂ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದ್ದ ಆರ್‌ಸಿಬಿ, ಇದೀಗ ಐಪಿಎಲ್ ಮಿನಿ ಹರಾಜಿಗೂ ಮುನ್ನ ಬರೋಬ್ಬರಿ ಎಂಟು ಆಟಗಾರರಿಗೆ ಗೇಟ್‌ಪಾಸ್ ನೀಡಿದೆ.
ಇಬ್ಬರು ಕನ್ನಡಿಗರನ್ನು ಕೈಬಿಟ್ಟ ಆರ್‌ಸಿಬಿ
ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕನ್ನಡಿಗರಾದ ಮಯಾಂಕ್ ಅಗರ್‌ವಾಲ್ ಹಾಗೂ ಮನೋಜ್ ಭಾಂಡಗೆ ಅವರನ್ನು ತಂಡದಿಂದ ರಿಲೀಸ್ ಮಾಡಿದೆ. ದೇವದತ್ ಪಡಿಕ್ಕಲ್ ಗಾಯಗೊಂಡಿದ್ದರಿಂದ ಅವರ ಸ್ಥಾನ ತುಂಬಿದ್ದ ಮಯಾಂಕ್ ಅಗರ್‌ವಾಲ್ ಇಂಪ್ಯಾಕ್ಟ್ ಆಟಗಾರನಾಗಿ ಗಮನ ಸೆಳೆದಿದ್ದರು. ಹೀಗಿದ್ದೂ ಅಗರ್‌ವಾಲ್ ಅವರನ್ನು ರಿಲೀಸ್ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ. ಇನ್ನು ಮನೋಜ್ ಭಾಂಡಗೆ ಅವರಿಗೆ ಇಂಪ್ಯಾಕ್ಟ ಆಟಗಾರನಾಗಿ ಒಂದು ಪಂದ್ಯದಲ್ಲಿ ಅವಕಾಶ ಸಿಕ್ಕಿತ್ತಾದರೂ, ಜಾದೂ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮನೋಜ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಇನ್ನು ಸ್ವಸ್ತಿಕ್ ಚಿಕಾರ ಹಾಗೂ ನ್ಯೂಜಿಲೆಂಡ್ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಟಿಮ್ ಸೈಫರ್ಟ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇದಷ್ಟೇ ಅಲ್ಲದೇ ಇಂಗ್ಲೆಂಡ್ ಮೂಲದ ಸ್ಟಾರ್ ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ತಂಡದಿಂದ ರಿಲೀಸ್ ಮಾಡಲಾಗಿದೆ. ಇದರ ಜತೆಗೆ ದಕ್ಷಿಣ ಆಫ್ರಿಕಾ ಮೂಲದ ಲುಂಗಿ ಎಂಗಿಡಿ ಹಾಗೂ ಜಿಂಬಾಬ್ವೆಯ ನೀಳಕಾಯದ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಹಾಗೂ ಸ್ಪಿನ್ನರ್ ಮೋಹಿತ್ ರಾಥೆ ಅವರನ್ನು ತಂಡದಿಂದ ರಿಲೀಸ್ ಮಾಡಲಾಗಿದೆ.
ಆರ್‌ಸಿಬಿ ರೀಟೈನ್ ಮಾಡಿಕೊಂಡ ಆಟಗಾರರ ಡೀಟೈಲ್ಸ್ ಹೀಗಿದೆ ನೋಡಿ:
ರಜತ್ ಪಾಟೀದಾರ್(ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮ್ಯಾರಿಯೋ ಶೆಫರ್ಡ್, ಜೆಕೊಬ್ ಬೆಥೆಲ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಸಿಕ್ ಧಾರ್, ಅಭಿನಂದನ್ ಸಿಂಗ್, ಸುಯಾಶ್ ಶರ್ಮಾ.
ಮಿನಿ ಹರಾಜಿಗೆ ಆರ್‌ಸಿಬಿ ಪರ್ಸ್‌ನಲ್ಲಿ 16.40 ಕೋಟಿ
ಇನ್ನು ಆರ್‌ಸಿಬಿ ತಂಡವು ಎಂಟು ಆಟಗಾರರನ್ನು ರಿಲೀಸ್ ಮಾಡಿದ ಬಳಿಕ ತನ್ನ ಪರ್ಸ್‌ನಲ್ಲಿ ಬರೋಬ್ಬರಿ 16.4 ಕೋಟಿ ರುಪಾಯಿ ಉಳಿಸಿಕೊಂಡಿದೆ. ಮಿನಿ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿ ಯಾವ ಆಟಗಾರರನ್ನು ಖರೀದಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.


