ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಫೈನಲ್ ಪ್ರವೇಶಿದ ಮುಂಬೈ ಇಂಡಿಯನ್ಸ್ಎಲಿನೇಟರ್ ಪಂದ್ಯದಲ್ಲಿ ಯುಪಿ ವಾರಿಯರ್ಸ್‌ ಎದುರು ಮುಂಬೈ ಭರ್ಜರಿ ಜಯಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಹೊಸ ಇತಿಹಾಸ ನಿರ್ಮಿಸಿದ ಮುಂಬೈನ ಇಸ್ಸೆ ವಾಂಗ್

ಮುಂಬೈ(ಮಾ.25): ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡವು, ಯುಪಿ ವಾರಿಯರ್ಸ್‌ ತಂಡವನ್ನು ಬಗ್ಗುಬಡಿದು ಫೈನಲ್‌ಗೆ ಲಗ್ಗೆಯಿಟ್ಟಿದೆ. ಇಲ್ಲಿನ ಡಿವೈ ಪಾಟೀಲ್‌ ಮೈದಾನದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ವೇಗದ ಬೌಲರ್‌ ಇಸ್ಸೆ ವಾಂಗ್‌, ಹ್ಯಾಟ್ರಿಕ್‌ ವಿಕೆಟ್‌ ಕಬಳಿಸುವ ಮೂಲಕ ವುಮೆನ್ಸ್‌ ಪ್ರೀಮಿಯರ್ ಲೀಗ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್‌ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.

20 ವರ್ಷದ ಯುವ ವೇಗದ ಬೌಲರ್‌ ಇಸ್ಸೆ ವಾಂಗ್‌, ಯುಪಿ ವಾರಿಯರ್ಸ್‌ ತಂಡದ ಕಿರಣ್ ನ್ಯಾವ್ಗಿರೆ, ಸಿಮ್ರಾನ್ ಶೇಖ್ ಹಾಗೂ ಸೋಫಿ ಡಿವೈನ್ ಅವರನ್ನು ಬಲಿಪಡೆಯುವ ಮೂಲಕ ಹ್ಯಾಟ್ರಿಕ್‌ ವಿಕೆಟ್‌ ಕಬಳಿಸಿದ ಸಾಧನೆ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್‌ ತಂಡವು ನೀಡಿದ್ದ 183 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್‌ ತಂಡಕ್ಕೆ ಕಿರಣ್ ನ್ಯಾವ್ಗಿರೆ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗಲು ಪ್ರಯತ್ನಿಸಿದರು. ಕೇವಲ 27 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 43 ರನ್ ಗಳಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ನ್ಯಾವ್ಗಿರೆ ಅವರನ್ನು 13ನೇ ಓವರ್‌ನ ಎರಡನೇ ಎಸೆತದಲ್ಲೇ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಸಿಮ್ರಾನ್ ಶೇಖ್‌ ಹಾಗೂ ಸೋಫಿ ಎಕ್ಲೆಸ್ಟೋನ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡುವ ಮೂಲಕ ಹ್ಯಾಟ್ರಿಕ್‌ ವಿಕೆಟ್‌ ಸಾಧನೆ ಮಾಡಿದರು. ವಾಂಗ್‌, 4 ಓವರ್‌ ಬೌಲಿಂಗ್‌ ಮಾಡಿ 15 ರನ್‌ ನೀಡಿ 4 ವಿಕೆಟ್‌ ಕಬಳಿಸಿ ಮಿಂಚಿದರು.

ಹೀಗಿತ್ತು ನೋಡಿ ವಾಂಗ್ ಕಬಳಿಸಿದ ಹ್ಯಾಟ್ರಿಕ್ ವಿಕೆಟ್:

Scroll to load tweet…

ಟಿ20 ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಸೋಲುಣಿಸಿದ ಆಫ್ಘಾನಿಸ್ತಾನ..!

ಹೇಗಿತ್ತು ಎಲಿಮಿನೇಟರ್‌ ಪಂದ್ಯ..?:

ಎಲಿಮಿನೇಟರ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 4 ವಿಕೆಟ್ ಕಳೆದುಕೊಂಡು 182 ರನ್‌ ಕಲೆಹಾಕಿತು. ಆರಂಭಿಕ ಬ್ಯಾಟರ್‌ಗಳಾದ ಯಾಶ್ತಿಕಾ ಭಾಟಿಯಾ(21) ಹಾಗೂ ಹೀಲೆ ಮ್ಯಾಥ್ಯೂಸ್(26) ಉತ್ತಮ ಆರಂಭ ಒದಗಿಸಿಕೊಟ್ಟರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಥಾಲಿ ಶೀವರ್ ಬ್ರಂಟ್‌ ಕೇವಲ 38 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 72 ರನ್ ಸಿಡಿಸಿದರೆ, ಮೆಲ್ಲಿ ಕೆರ್ರ್‌ 29 ರನ್‌ ಸಿಡಿಸಿದರು. ಇನ್ನು ಕೊನೆಯಲ್ಲಿ ಪೂಜಾ ವಸ್ತ್ರಾಕರ್ ಕೇವಲ 4 ಎಸೆತಗಳಲ್ಲಿ 4 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 11 ರನ್ ಸಿಡಿಸಿ ತಂಡದ ಮೊತ್ತವನ್ನು 180ರ ಗಡಿ ದಾಟಿಸಿದರು.

ಇನ್ನು ಕಠಿಣ ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್‌ ತಂಡವು ಕೇವಲ 110 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಎಲಿಮಿನೇಟರ್‌ ಪಂದ್ಯದಲ್ಲೇ ತನ್ನ ಅಭಿಯಾನ ಮುಗಿಸಿತು. ಯುಪಿ ವಾರಿಯರ್ಸ್‌ ಪರ ನಾಯಕಿ ಅಲಿಸಾ ಹೀಲಿ(11), ನ್ಯಾವ್ಗಿರೆ(43), ಗ್ರೇಸ್ ಹ್ಯಾರಿಸ್(14) ಹಾಗೂ ದೀಪ್ತಿ ಶರ್ಮಾ(16) ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಲಿಲ್ಲ. ಪರಿಣಾಮ ಮುಂಬೈ ಇಂಡಿಯನ್ಸ್ ಎದುರು ಯುಪಿ ವಾರಿಯರ್ಸ್‌ ತಂಡವು 72 ರನ್‌ಗಳ ಹೀನಾಯ ಸೋಲು ಅನುಭವಿಸಿತು.

ಇನ್ನು ಮಾರ್ಚ್‌ 26ರಂದು ನಡೆಯಲಿರುವ ವುಮೆನ್ಸ್‌ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ.