* ಪಿಎಸ್‌ಎಲ್ ಟೂರ್ನಿಯಲ್ಲಿ ಮೊದಲ ಬಾರಿಗೆ ಫೈನಲ್‌ಗೇರಿದ ಮುಲ್ತಾನ್ ಸುಲ್ತಾನ್ಸ್‌* ಇಸ್ಲಾಮಾಬಾದ್‌ ತಂಡವನ್ನು ಮಣಿಸಿ ಫೈನಲ್‌ಗೇರಿದ ಮುಲ್ತಾನ್‌* ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಇಸ್ಲಾಮಾಬಾದ್‌-ಪೇಶಾವರ್ ಮುಖಾಮುಖಿ

ಅಬುಧಾಬಿ(ಜೂ.22): ಎರಡು ಬಾರಿಯ ಚಾಂಪಿಯನ್‌ ಇಸ್ಲಾಮಾಬಾದ್‌ ಯುನೈಟೆಡ್‌ ತಂಡವನ್ನು 31 ರನ್‌ಗಳ ಅಂತರದಲ್ಲಿ ಮಣಿಸಿದ ಮುಲ್ತಾನ್ ಸುಲ್ತಾನ್ಸ್‌ ತಂಡವು ಮೊದಲ ಬಾರಿಗೆ ಪಾಕಿಸ್ತಾನ ಸೂಪರ್‌ ಲೀಗ್‌ನಲ್ಲಿ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದೆ.

ಇನ್ನು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಗ್ಗರಿಸಿರುವ ಇಸ್ಲಾಮಾಬಾದ್‌ ಯುನೈಟೆಡ್‌ ತಂಡವು ಇಂದು(ಜೂ.22) ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಪೇಶಾವರ್ ಜಲ್ಮಿ ತಂಡವನ್ನು ಎದುರಿಸಲಿದೆ. ಎಲಿಮಿನೇಟರ್‌ ಪಂದ್ಯದಲ್ಲಿ ಕರಾಚಿ ಕಿಂಗ್ಸ್‌ ಎದುರು ಕೇವಲ ಒಂದು ಎಸೆತ ಬಾಕಿ ಇರುವಂತೆಯೇ ಪೇಶಾವರ್ ತಂಡವು ರೋಚಕ ಗೆಲುವು ದಾಖಲಿಸಿದೆ.

ಸೋಹಿಬ್ ಮಕ್ಸೂದ್‌ ಹಾಗೂ ಕುಶ್‌ದಿಲ್‌ ಶಾ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಮುಲ್ತಾನ್ ಸುಲ್ತಾನ್ಸ್‌ ತಂಡವು 5 ವಿಕೆಟ್ ಕಳೆದುಕೊಂಡು 180 ರನ್‌ ಕಲೆಹಾಕಿತ್ತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಇಸ್ಲಾಮಾಬಾದ್ ತಂಡವು ವೇಗಿ ಸೋಹಿಲ್ ತನ್ವೀರ್(17/3) ಹಾಗೂ ಮುಜರಬನಿ(31/3) ಮಾರಕ ದಾಳಿಗೆ ತತ್ತರಿಸಿ ಕೇವಲ 149 ರನ್‌ಗಳಿಗೆ ಸರ್ವಪತನ ಕಂಡಿತು.

Scroll to load tweet…

ಪಿಎಸ್‌ಎಲ್‌: ಪ್ಲೇ ಆಫ್‌ಗೆ ಲಗ್ಗೆಯಿಟ್ಟ ಕರಾಚಿ ಕಿಂಗ್ಸ್‌

ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರಾಚಿ ಕಿಂಗ್ಸ್, ಬಾಬರ್ ಅಜಂ ಬಾರಿಸಿದ ಸಮಯೋಚಿತ ಅರ್ಧಶತಕ(53)ದ ನೆರವಿನಿಂದ 7 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಪೇಶಾವರ್ ಜಲ್ಮಿ ತಂಡವು ಹಜರತ್ತುಲಾ ಝಜೈ(77 ರನ್, 38 ಎಸೆತ) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ರೋಚಕ ಗೆಲುವು ಸಾಧಿಸಿತು.

Scroll to load tweet…

ಎರಡನೇ ಕ್ವಾಲಿಫೈಯರ್‌ನಲ್ಲಿ ವಿಜೇತವಾದ ತಂಡವು ಜೂನ್‌ 24ರಂದು ನಡೆಯಲಿರುವ ಪಿಎಸ್‌ಎಲ್‌ ಫೈನಲ್‌ ಪಂದ್ಯದಲ್ಲಿ ಪ್ರಶಸ್ತಿಗಾಗಿ ಮುಲ್ತಾನ್ ಸುಲ್ತಾನ್ಸ್ ಎದುರು ಸೆಣಸಾಡಲಿದೆ.