* ಪಿಎಸ್‌ಎಲ್ ಟೂರ್ನಿಯಲ್ಲಿ ಪ್ಲೇ ಆಫ್‌ಗೆ ಲಗ್ಗೆಯಿಟ್ಟ ಕರಾಚಿ ಕಿಂಗ್ಸ್* ಲಾಹೋರ್ ಖಲಂದರ್ಸ್‌ ಪ್ಲೇ ಆಫ್‌ ಕನಸನ್ನು ಭಗ್ನ ಮಾಡಿದ ಕರಾಚಿ* ಇಸ್ಲಮಾಬಾದ್ ಯುನೈಟೆಡ್ ಹಾಗೂ ಮುಲ್ತಾನ್ ಸುಲ್ತಾನ್ ಮೊದಲ ಕ್ವಾಲಿಫೈಯರ್‌ನಲ್ಲಿ ಮುಖಾಮುಖಿ

ಅಬುಧಾಬಿ(ಜೂ.21): ಲೀಗ್ ಹಂತದ ಕೊನೆಯ ಹಾಗೂ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಹಾಲಿ ಚಾಂಪಿಯನ್‌ ಕರಾಚಿ ಕಿಂಗ್ಸ್‌ ತಂಡವು ಕ್ವೆಟ್ಟಾ ಗ್ಲಾಡಿಯೇಟರ್ಸ್‌ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ನಾಲ್ಕನೇ ತಂಡವಾಗಿ ಪ್ಲೇ ಆಫ್‌ಗೆ ಪ್ರವೇಶ ಪಡೆದಿದೆ.

ಕರಾಚಿ ಕಿಂಗ್ಸ್ ಹಾಗೂ ಲಾಹೋರ್ ಖಲಂದರ್ಸ್‌ ತಂಡಗಳೆರಡು ತಲಾ 10 ಅಂಕಗಳನ್ನು ಪಡೆದರೂ, ನೆಟ್‌ ರನ್‌ರೇಟ್ ಆಧಾರದಲ್ಲಿ ಲಾಹೋರ್ ತಂಡವನ್ನು ಹಿಂದಿಕ್ಕಿ ಕರಾಚಿ ಕಿಂಗ್ಸ್‌ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿದೆ. ಇನ್ನು ಕ್ವೆಟ್ಟಾ ಗ್ಲಾಡಿಯೇಟರ್ಸ್‌ ತಂಡವು ಲೀಗ್ ಹಂತದಲ್ಲಿ 10 ಪಂದ್ಯಗಳನ್ನಾಡಿ ಕೇವಲ 2 ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದೊಂದಿಗೆ ತನ್ನ ಹೋರಾಟ ಅಂತ್ಯಗೊಳಿಸಿತು.

ಡ್ಯಾನಿಶ್ ಅಜೀಜ್ ಕೇವಲ 13 ಎಸೆತಗಳಲ್ಲಿ 45 ರನ್ ಚಚ್ಚುವ ಮೂಲಕ ಕರಾಚಿ ತಂಡವು 7 ವಿಕೆಟ್ ಕಳೆದುಕೊಂಡು 176 ರನ್‌ ಬಾರಿಸಲು ನೆರವಾದರು. ಇನ್ನು ಸವಾಲಿನ ಗುರಿ ಬೆನ್ನತ್ತಿದ ಗ್ಲಾಡಿಯೇಟರ್ಸ್‌ ತಂಡವು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ 5 ಬದಲಾವಣೆ ಮಾಡಿಕೊಂಡು ಕಣಕ್ಕಿಳಿದರೂ ಸೋಲಿನ ಸುಳಿಯಿಂದ ಪಾರಾಗಲು ಸಾಧ್ಯವಾಗಲಿಲ್ಲ. ಸರ್ಫರಾಜ್ ಅಹಮ್ಮದ್ 33 ಎಸೆತಗಳಲ್ಲಿ ಅಜೇಯ 51 ರನ್ ಬಾರಿಸಿದರಾದರೂ ಅಂತಿಮವಾಗಿ ಗ್ಲಾಡಿಯೇಟರ್ಸ್‌ ತಂಡವು 7 ವಿಕೆಟ್ ಕಳೆದುಕೊಂಡು 162 ರನ್‌ ಗಳಿಸಲಷ್ಟೇ ಶಕ್ತವಾಯಿತು. 

ಪಿಎಸ್‌ಎಲ್ 2021: ಬೆನ್‌ ಡಂಕ್‌ಗೆ ಭೀಕರ ಗಾಯ, 7 ಹೊಲಿಗೆ ಹಾಕಿಸಿಕೊಂಡ ವಿಕೆಟ್‌ ಕೀಪರ್

Scroll to load tweet…

ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿರುವ ಇಸ್ಲಮಾಬಾದ್ ಯುನೈಟೆಡ್ ಹಾಗೂ ಮುಲ್ತಾನ್ ಸುಲ್ತಾನ್ ತಂಡಗಳಿಂದು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕಾದಾಡಲಿವೆ. ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಪೇಶಾವರ್ ಜಲ್ಮಿ ಹಾಗೂ ಕರಾಚಿ ಕಿಂಗ್ಸ್‌ ತಂಡಗಳಿಂದ ಸೆಣಸಾಟ ನಡೆಸಲಿವೆ. ಈ ಎರಡೂ ಪಂದ್ಯಗಳು ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ನಡೆಯಲಿವೆ.