ಕೆಕೆಆರ್ ವಿರುದ್ಧ ಸಿಕ್ಸರ್‌ಗಳ ಸುರಿಮಳೆಗೈದು ಲಖನೌಗೆ ಗೆಲುವು ತಂದುಕೊಟ್ಟ 21 ವರ್ಷದ ಮುಕುಲ್ ಚೌಧರಿ ರಾತ್ರೋರಾತ್ರಿ ಸ್ಟಾರ್ ಆಗಿದ್ದಾರೆ. ಎಂ.ಎಸ್. ಧೋನಿಯಿಂದ ಸ್ಫೂರ್ತಿ ಪಡೆದ ಇವರ ಯಶಸ್ಸಿನ ಹಿಂದೆ, ಮಗನ ಕ್ರಿಕೆಟ್ ಭವಿಷ್ಯಕ್ಕಾಗಿ ಮನೆ ಮಾರಿ, ಸಾಲ ಮಾಡಿ ಜೈಲಿಗೂ ಹೋಗಿ ಬಂದ ತಂದೆಯ ಅಪಾರ ತ್ಯಾಗದ ಕಥೆಯಿದೆ.
ಕೋಲ್ಕತಾ: ಗುರುವಾರ ಕೆಕೆಆರ್ ವಿರುದ್ಧ ಲಖನೌ ಗೆಲ್ಲಬೇಕಿದ್ದರೆ ಕೊನೆ 22 ಎಸೆತಕ್ಕೆ ಬೇಕಿದ್ದದ್ದು 54 ರನ್. ಪ್ರಮುಖ ಬ್ಯಾಟರ್ಸ್ ಪೆವಿಲಿಯನ್ ಸೇರಿದ್ದರು. ಎದುರಿಸಿದ 8 ಎಸೆತಕ್ಕೆ ಕೇವಲ 2 ರನ್ ಗಳಿಸಿದ್ದ 21 ವರ್ಷದ ಮುಕುಲ್ ಚೌಧರಿ ಕ್ರೀಸ್‌ನಲ್ಲಿದ್ದರು. ಹೀಗಾಗಿಯೇ ಬಹುತೇಕರು ಕೆಕೆಆರ್ ಗೆಲುವು ನಿಶ್ಚಿತ ಎಂದುಕೊಂಡಿದ್ದರು. ಆದರೆ ಮುಂದಿನ ಎಸೆತದಲ್ಲಿ ಧೋನಿ ಶೈಲಿಯ ಹೆಲಿಕಾಪ್ಟರ್ ಶಾಟ್ ಮೂಲಕ ಬಾರಿಸಿದ ಸಿಕ್ಸರ್, ಮುಕುಲ್ ಮಾತ್ರವಲ್ಲ ಪಂದ್ಯ ನೋಡುತ್ತಿದ್ದವರಲ್ಲೂ ಹೊಸ ನಿರೀಕ್ಷೆ ಹುಟ್ಟುಹಾಕಿತ್ತು.
ಆ ಬಳಿಕ ಕ್ರೀಡಾಂಗಣದಲ್ಲಿ ಸಿಕ್ಸರ್ ಸುರಿಮಳೆ. 21 ವರ್ಷದ ಮುಕುಲ್ 7 ಸಿಕ್ಸರ್, 2 ಬೌಂಡರಿ ಬಾರಿಸಿ ಲಖನೌಗೆ ಗೆಲುವು ತಂದುಕೊಟ್ಟಿದ್ದರು. ರಾತ್ರೋರಾತ್ರಿ ಎಲ್ಲರ ಬಾಯಲ್ಲೂ ಮುಕುಲ್ ಹೆಸರು. ಹಾಗಂತ, ಮುಕುಲ್‌ಗೆ ಇದು ಒಂದು ದಿನದ ಆಟ ಮಾತ್ರವಾಗಿರಲಿಲ್ಲ. ಅದು ಛಲ ಬಿಡದೆ ತಾನು ಮಾಡಿದ ಪ್ರಾಕ್ಟೀಸ್‌ನ ಫಲ. ‘ಕಳೆದ 5-6 ತಿಂಗಳಿನಿಂದ ನಾನು ಪ್ರತಿದಿನ ಅಭ್ಯಾಸ ನಡೆಸುತ್ತಿದ್ದೇನೆ. ಪ್ರತಿದಿನವೂ 100-150 ಸಿಕ್ಸರ್ ಬಾರಿಸುತ್ತಿದ್ದೆ. ನನ್ನ ಹೊಡೆತದಲ್ಲಿ ಆ ಶಕ್ತಿ ಇದೆ. ಎಂ.ಎಸ್. ಧೋನಿ ಪಂದ್ಯವನ್ನು ಮುಗಿಸುವುದನ್ನೇ ನೋಡಿ ಬೆಳೆದವ ನಾನು. ಅವರಂತೆ ಹೆಲಿಕಾಪ್ಟರ್ ಶಾಟ್ ಪ್ರಾಕ್ಟೀಸ್ ಮಾಡುತ್ತಿದ್ದೆ’ ಎನ್ನುತ್ತಾರೆ ರಾಜಸ್ಥಾನದ ಮುಕುಲ್.
ಕಳೆದ ಡಿಸೆಂಬರ್‌ನಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟಿ20ಯಲ್ಲಿ ಡೆಲ್ಲಿ ವಿರುದ್ಧ ಕೊನೆ ಓವರ್‌ಗೆ 25 ರನ್ ಬೇಕಿದ್ದಾಗ ರಾಜಸ್ಥಾನಕ್ಕೆ ಮುಕುಲ್ ಪಂದ್ಯ ಗೆಲ್ಲಿಸಿಕೊಟ್ಟಿದ್ದರು. ಆ ಇನ್ನಿಂಗ್ಸ್ ಮೂಲಕವೇ ಐಪಿಎಲ್ ಫ್ರಾಂಚೈಸಿಗಳ ಗಮನಸೆಳೆದಿದ್ದ ಮುಕುಲ್, ಹರಾಜಿನಲ್ಲಿ ಲಖನೌಗೆ ₹2.60 ಕೋಟಿಗೆ ಮಾರಾಟವಾಗಿದ್ದರು.
ಹುಟ್ಟೋ ಮಗನ ಕ್ರಿಕೆಟರ್ ಮಾಡ್ತೀನಿ ಎಂದಿದ್ದ ಅಪ್ಪ!
ಲಖನೌಗೆ ಗೆಲುವು ತಂದುಕೊಟ್ಟ ಮುಕುಲ್ ಬಗ್ಗೆ ಅವರ ತಂದೆ, ದಲಿಪ್ ಚೌಧರಿ ರಾಷ್ಟ್ರೀಯ ಮಾಧ್ಯಮ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ. ‘ನಾನು 2003ರಲ್ಲಿ ಪದವಿ ಮುಗಿಸಿದೆ. ಅದೇ ವರ್ಷ ನನಗೆ ಮದುವೆಯಾಯಿತು. ನನಗೆ ಮಗ ಹುಟ್ಟಿದರೆ ಅವನನ್ನು ಕ್ರಿಕೆಟರ್ ಮಾಡಬೇಕೆಂಬ ಕನಸಿತ್ತು. ಚಿಕ್ಕವನಿದ್ದಾಗಲೇ ಅವನನ್ನು ಕ್ರಿಕೆಟರ್ ಮಾಡಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೆ. ಅದರಲ್ಲಿ ಯಶಸ್ವಿಯೂ ಆದೆ’ ಎಂದು ದಲಿಪ್ ನೆನಪಿಸಿಕೊಂಡಿದ್ದಾರೆ.
ಮುಕುಲ್‌ಗಾಗಿ ಮನೆ ಮಾರಾಟ, ಹೆಚ್ಚಾದ ಸಾಲ, ಜೈಲು ಪಾಲು!
ಮಗನಿಗಾಗಿ ಏನು ಬೇಕಾದರೂ ಮಾಡಬಲ್ಲೆ ಎಂದು ನಿರ್ಧರಿಸಿದ್ದ ತಂದೆ ದಲಿಪ್, ಆತನನ್ನು ಚಿಕ್ಕ ವಯಸ್ಸಿನಲ್ಲೇ ಜೈಪುರದಲ್ಲಿ ಅಕಾಡೆಮಿಯೊಂದಕ್ಕೆ ಸೇರಿಸಿದ್ದರು. ಆರಂಭದಲ್ಲಿ ಮುಕುಲ್ ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದರು. ಅಲ್ಲಿ ವಿಕೆಟ್ ಕೀಪರ್‌ಗಳು ಯಾರೂ ಇಲ್ಲದ್ದಕ್ಕೆ ವಿಕೆಟ್ ಕೀಪರ್ ಆಗಲು ನಿರ್ಧರಿಸಿದ್ದರು. ಬಳಿಕ ಕೋಚ್‌ಗಳಿಂದಾಗಿ ಬ್ಯಾಟಿಂಗ್‌ನತ್ತ ಗಮನ ಹರಿಸಿದರು. 2016ರಲ್ಲಿ ತಮ್ಮ ಮನೆಯಿಂದ 70 ಕಿ.ಮಿ. ದೂರದ ಸಿಕಾರ್ ಎಂಬಲ್ಲಿ ಬೇರೊಂದು ಅಕಾಡೆಮಿಯೊಂದಕ್ಕೆ ಸೇರಿಸಿದರು. ಈ ನಡುವೆ ತಂದೆ ದಲಿಪ್‌ಗೆ ಆರ್ಥಿಕ ಸಮಸ್ಯೆ ಎದುರಾಗಿತ್ತು. ನಿಗದಿತ ಆದಾಯ ಇರಲಿಲ್ಲ. ಆದರೆ ಮಗನ ಕ್ರಿಕೆಟ್ ಬದುಕು ರೂಪಿಸಲು ತಮ್ಮ ಮನೆಯನ್ನೇ ಮಾರಲು ನಿರ್ಧರಿಸಿದರು. ‘ಆದಾಯ ಇರಲಿಲ್ಲ ಎಂದು ನನ್ನ ಮನೆಯನ್ನೇ ಮಾರಿದೆ. ₹21 ಲಕ್ಷ ಸಿಕ್ಕಿತು. ಮುಂದಿನ ವರ್ಷ ಹೋಟೆಲ್ ಆರಂಭಿಸಲು ಸಾಲ ಪಡೆದೆ. ಅದನ್ನು ತೀರಿಸಲಾಗದೆ ಜೈಲಿಗೂ ಹೋಗಿದ್ದೆ, ಆದರೆ ನಾನು ಎಂದಿಗೂ ವಂಚನೆ ಮಾಡಿಲ್ಲ’ ಎಂದು ದಲಿಪ್ ತಮ್ಮ ಬದುಕಿನ ವೃತ್ತಾಂತವನ್ನು ತೆರೆದಿಟ್ಟಿದ್ದಾರೆ.


