16ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್ 31ರಿಂದ ಆರಂಭಐಪಿಎಲ್ ಟೂರ್ನಿಗೂ ಮುನ್ನ ಹಲವು ಕ್ರಿಕೆಟಿಗರಿಗೆ ಗಾಯದ ಸಮಸ್ಯೆಭಾರತದ ಯುವ ವೇಗಿಗಳಾದ ಮೊಯ್ಸಿನ್ ಖಾನ್, ಮುಕೇಶ್ ಚೌಧರಿ ಈ ಬಾರಿಯ ಐಪಿಎಲ್‌ಗೆ ಡೌಟ್
ನವದೆಹಲಿ(ಮಾ.24): ಭಾರತದ ಯುವ ಪ್ರತಿಭಾನ್ವಿತ ವೇಗಿಗಳಾದ ಮುಕೇಶ್ ಚೌಧರಿ ಹಾಗೂ ಮೊಯ್ಸಿನ್ ಖಾನ್, ಮುಂಬರುವ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎನಿಸಿದೆ. ಈ ಇಬ್ಬರು ವೇಗಿಗಳು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
2022ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಕೇಶ್ ಚೌಧರಿಯನ್ನು ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡವು ಮೊಯ್ಸಿನ್ ಖಾನ್ ಅವರನ್ನು ಮೂಲ ಬೆಲೆ 20 ಲಕ್ಷ ರುಪಾಯಿಗೆ ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದವು. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಈ ಇಬ್ಬರು ವೇಗಿಗಳು ಗಮನಾರ್ಹ ಪ್ರದರ್ಶನ ತೋರಿ ಮಿಂಚಿದ್ದರು. ತಾವಾಡಿದ ಚೊಚ್ಚಲ ಆವೃತ್ತಿಯ ಐಪಿಎಲ್‌ನಲ್ಲೇ ಮುಕೇಶ್ ಚೌಧರಿ 13 ಪಂದ್ಯಗಳನ್ನಾಡಿ 16 ವಿಕೆಟ್ ಕಬಳಿಸಿದರೆ, ಮೊಯ್ಸಿನ್ ಖಾನ್ ಕೇವಲ 9 ಪಂದ್ಯಗಳನ್ನಾಡಿ 14 ವಿಕೆಟ್ ಕಬಳಿಸಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಶಿ ವಿಶ್ವನಾಥನ್ ಪ್ರಕಾರ, ಮುಕೇಶ್ ಚೌಧರಿ, ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೂಡಿಕೊಳ್ಳುತ್ತಾರೆ ಎನ್ನುವುದರ ಬಗ್ಗೆ ಯಾವುದೇ ವಿಶ್ವಾಸವಿಲ್ಲವೆಂದು ಹೇಳಿದ್ದಾರೆ. 26 ವರ್ಷದ ಮುಕೇಶ್ ಚೌಧರಿ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ಪರ ಮೊನಚಾದ ದಾಳಿ ನಡೆಸಿ ತಂಡಕ್ಕೆ ಆಸರೆಯಾಗಿದ್ದರು.
"ನಾವು ಮುಕೇಶ್ ಚೌಧರಿ, ಕಮ್‌ಬ್ಯಾಕ್ ಮಾಡುವುದಕ್ಕಾಗಿಯೇ ಕಾಯುತ್ತಿದ್ದೇವೆ. ಆದರೆ ತೀರಾ ನಂಬಿಕೆಯಿಲ್ಲ. ಕಳೆದ ವರ್ಷ ಅವರು ನಮ್ಮ ತಂಡದ ಪ್ರಮುಖ ಬೌಲರ್ ಆಗಿ ಹೊರಹೊಮ್ಮಿದ್ದರು. ಒಂದು ವೇಳೆ ಈ ಆವೃತ್ತಿಯಿಂದ ಅವರು ಹೊರಬಿದ್ದರೆ, ನಿಜಕ್ಕೂ ದುರಾದೃಷ್ಟಕರ ಎಂದು ಕ್ರಿಕ್‌ಬಜ್ ವೆಬ್‌ಸೈಟ್ ಜತೆ ಮಾತನಾಡುವಾಗ ತಿಳಿಸಿದ್ದಾರೆ.
ಜಸ್ಪ್ರೀತ್ ಬುಮ್ರಾ ಬಳಿಕ ಮತ್ತೋರ್ವ ಮಾರಕ ವೇಗಿ IPL 2023 ನಿಂದ ಔಟ್; ಮುಂಬೈ ಇಂಡಿಯನ್ಸ್‌ಗೆ ಗಾಯದ ಮೇಲೆ ಬರೆ..!
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೀಳಕಾಯದ ವೇಗಿ ಕಳೆದ ಡಿಸೆಂಬರ್‌ನಲ್ಲಿ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಇದಾದ ಬಳಿ ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಅವರು ಕಳೆದ ಏಳು ವರ್ಷಗಳಿಂದ ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಆದರೆ ಮುಕೇಶ್ ಚೌಧರಿ ಇಲ್ಲಿಯವರೆಗೆ ಕೇವಲ 13 ಪ್ರಥಮ ದರ್ಜೆ ಪಂದ್ಯಗಳನ್ನಷ್ಟೇ ಆಡಿದ್ದಾರೆ.
ಇನ್ನು ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವು ಪ್ಲೇ ಆಫ್‌ಗೇರಲು ಪ್ರಮುಖ ಪಾತ್ರವಹಿಸಿದ್ದ ಮೊಯ್ಸಿನ್ ಖಾನ್ ಕೂಡಾ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದು, ಎನ್‌ಸಿಎನಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಮೊಯ್ಸಿನ್ ಖಾನ್ ಲಭ್ಯತೆಯ ಕುರಿತಂತೆ ಇದುವರೆಗೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 31ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ.
