ಅಭಿಷೇಕ್ ಶರ್ಮಾ (135) ಅವರ ಸ್ಫೋಟಕ ಶತಕದ ನೆರವಿನಿಂದ ಭಾರತ ಇಂಗ್ಲೆಂಡ್ ವಿರುದ್ಧ ಐದನೇ ಟಿ20 ಪಂದ್ಯದಲ್ಲಿ 150 ರನ್‌ಗಳ ಭರ್ಜರಿ ಜಯ ಸಾಧಿಸಿತು. ಭಾರತ 247 ರನ್ ಗಳಿಸಿ, ಇಂಗ್ಲೆಂಡ್‌ನ್ನು 97 ರನ್‌ಗಳಿಗೆ ಆಲೌಟ್ ಮಾಡಿತು. ಐದು ಪಂದ್ಯಗಳ ಸರಣಿಯನ್ನು 4-1 ಅಂತರದಲ್ಲಿ ಗೆದ್ದುಕೊಂಡಿತು. ಅಭಿಷೇಕ್ ಅವರ ಆಟಕ್ಕೆ ಮುಕೇಶ್ ಅಂಬಾನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂಬೈ: ಅಭಿಷೇಕ್ ಶರ್ಮಾ ರೌದ್ರಾವತಾರಕ್ಕೆ ಇಂಗ್ಲೆಂಡ್ ಅಕ್ಷರಶಃ ನಲುಗಿ ಹೋಯಿತು. ವಾಂಖೇಡೆ ಕ್ರೀಡಾಂಗಣದಲ್ಲಿ ಭಾನುವಾರ ರನ್ ಹೊಳೆ ಹರಿಸಿದ ಭಾರತ 247 ರನ್ ಚಚ್ಚಿ, ಆ ಬಳಿಕ ಪ್ರವಾಸಿಗರನ್ನು 97 ರನ್‌ಗೆ ಆಲೌಟ್ ಮಾಡುವ ಮೂಲಕ 150 ರನ್‌ಗಳ ಜಯಭೇರಿ ಬಾರಿಸಿತು. 5 ಪಂದ್ಯಗಳ ಸರಣಿಯು 4-1ರಲ್ಲಿ ಭಾರತದ ಪಾಲಾಯಿತು.
ವಾಂಖೇಡೆ ಮೈದಾನದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಹಾಗೂ ಕೊನೆಯ ಟಿ20 ಪಂದ್ಯಕ್ಕೆ ಇಲ್ಲಿನ ಐತಿಹಾಸಿಕ ವಾಂಖೇಡೆ ಮೈದಾನ ಆತಿಥ್ಯ ವಹಿಸಿತ್ತು. ಈ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್ ಮಾತ್ರವಲ್ಲದೇ, ದೇಶದ ಶ್ರಿಮಂತ ಉದ್ಯಮಿ ಆಗಿ ಗುರುತಿಸಿಕೊಂಡಿರುವ ಮುಕೇಶ್ ಅಂಬಾನಿ ಕೂಡಾ ಮೈದಾನಕ್ಕೆ ಬಂದು ಟೀಂ ಇಂಡಿಯಾವನ್ನು ಹುರಿದುಂಬಿಸಿದರು.
ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ₹5 ಕೋಟಿ ಬಹುಮಾನ!
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಲೀಕರಾದ ಮುಕೇಶ್ ಅಂಬಾನಿ, ತಮ್ಮ ಕಾರ್ಯಭಾರದ ಒತ್ತಡದ ನಡುವೆಯೂ ಸ್ಟೇಡಿಯಂಗೆ ಬಂದು ಈ ಪಂದ್ಯವನ್ನು ಕಣ್ತುಂಬಿಕೊಂಡರು. ಬಲಾಢ್ಯ ಇಂಗ್ಲೆಂಡ್ ಬೌಲಿಂಗ್ ಪಡೆಯ ಎದುರು ಮಿಂಚಿನಂತೆ ಬ್ಯಾಟಿಂಗ್ ನಡೆಸಿದ ಅಭಿಷೇಕ್ ಶರ್ಮಾ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇಷ್ಟಕ್ಕೆ ಸುಮ್ಮನಾಗದ ಆರೆಂಜ್ ಆರ್ಮಿ ಪಡೆಯ ಆರಂಭಿಕ ಬ್ಯಾಟರ್ ಶರ್ಮಾ ಕೇವಲ 37 ಎಸೆತಗಳನ್ನು ಎದುರಿಸಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು. ಚೆಂಡನ್ನು ವಾಂಖೇಡೆ ಮೈದಾನದ ಮೂಲೆಮೂಲೆಗಟ್ಟಿದ ರೀತಿಗೆ ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮನಸೋತರು. ಸ್ವತಃ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾಗಿರುವ ಮುಕೇಶ್ ಅಂಬಾನಿ, ಅಭಿಷೇಕ್ ಶರ್ಮಾ ಅರ್ಧ ಶತಕ ಸಿಡಿಸುತ್ತಿದ್ದಂತೆಯೇ ಎದ್ದುನಿಂತು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಹೀಗಿತ್ತು ನೋಡಿ ಆ ಕ್ಷಣ:
ಇನ್ನು ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟಿ20 ಪಂದ್ಯದ ಬಗ್ಗೆ ಹೇಳುವುದಾದರೇ, ಮೊದಲು ಬ್ಯಾಟ್ ಮಾಡಲು ಇಳಿದ ಭಾರತಕ್ಕೆ ಸಂಜು ಸ್ಯಾಮ್ಸನ್ ಸ್ಫೋಟಕ ಆರಂಭ ನೀಡಿದರು. ಮೊದಲ ಓವರಲ್ಲೇ 16 ರನ್ ಚಚ್ಚಿದ ಸಂಜು, 2ನೇ ಓವರ್‌ನ ಮೊದಲ ಎಸೆತದಲ್ಲಿ ಔಟಾದರು. ಆನಂತರ ಶುರುವಾಗಿದ್ದು, ಅಭಿಷೇಕ್ ಆರ್ಭಟ. ಮೊದಲಿಗೆ 17 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಎಡಗೈ ಬ್ಯಾಟರ್, 37 ಎಸೆತಗಳಲ್ಲಿ ಶತಕ ಪೂರೈಸಿದರು. ಪವರ್-ಪ್ಲೇನಲ್ಲೇ 95 ರನ್ ಪೇರಿಸಿದ ಭಾರತ, 10 ಓವರ್ ಮುಕ್ತಾಯಕ್ಕೆ 2 ವಿಕೆಟ್‌ಗೆ 143 ರನ್ ಕಲೆಹಾಕಿತು.
2ನೇ ವಿಕೆಟ್‌ಗೆ ತಿಲಕ್ ವರ್ಮಾ (24) ಜೊತೆ 7.1 ಓವರಲ್ಲಿ 115 ರನ್ ಸಿಡಿಸಿದ ಅಭಿಷೇಕ್, ಇಂಗ್ಲೆಂಡ್ ಬೌಲರ್‌ಗಳಿಗೆ ನೀರಿಳಿಸಿದರು. ಈ ನಡುವೆ ಶಿವಂ ದುಬೆ 13 ಎಸೆತದಲ್ಲಿ 30 ರನ್ ಸಿಡಿಸಿ, ಇಂಗ್ಲೆಂಡ್ ಗಾಯದ ಮೇಲೆ ಬರೆ ಎಳೆದರು.
97 ರನ್‌ಗೆ ಇಂಗ್ಲೆಂಡ್ ಆಲೌಟ್, 150 ರನ್ ದಾಖಲೆ ಗೆಲುವಿನೊಂದಿಗೆ 4-1 ಅಂತರದಲ್ಲಿ ಸರಣಿ ವಶ
54 ಎಸೆತದಲ್ಲಿ 7 ಬೌಂಡರಿ, 13 ಸಿಕ್ಸರ್‌ಗಳೊಂದಿಗೆ 135 ರನ್ ಚಚ್ಚಿ, ಅಭಿಷೇಕ್ ಔಟಾದರು. ಕೊನೆ 10 ಓವರಲ್ಲಿ 104 ರನ್ ಗಳಿಸಿದ ಭಾರತ 9 ವಿಕೆಟ್‌ಗೆ 247 ರನ್ ಕಲೆಹಾಕಿತು.
ಇಂಗ್ಲೆಂಡ್ ಸುಸ್ತು: ಬೃಹತ್ ಗುರಿಯನ್ನು ನೋಡಿಯೇ ದಂಗಾದ ಇಂಗ್ಲೆಂಡ್, ಪೆವಿಲಿಯನ್ ಪರೇಡ್ ನಡೆಸಿತು. ಓವರ್‌ನ ಮೊದಲ ಎಸೆತಗಳಲ್ಲಿ ಇಂಗ್ಲೆಂಡ್‌ನ 6 ವಿಕೆಟ್‌ಗಳು ಬಿದ್ದಿದ್ದು, ಆಟಗಾರರ ಮೇಲೆ ಒತ್ತಡ ಎಷ್ಟಿತ್ತು ಎನ್ನುವುದನ್ನು ತೋರಿಸಿತು. 2.1, 4.1, 6.1, 7.1, 8.1, 9.1 ಓವರ್‌ಗಳಲ್ಲಿ ಇಂಗ್ಲೆಂಡ್‌ನ ವಿಕೆಟ್‌ಗಳು ಉರುಳಿದವು. ಏಕಾಂಗಿ ಹೋರಾಟ ನಡೆಸಿದ ಫಿಲ್ ಸಾಲ್ಟ್ 23 ಎಸೆತದಲ್ಲಿ 55 ರನ್ ಚಚ್ಚಿದರೆ, ಜೇಕಬ್ ಬೆಥ್‌ಹೆಲ್ 10 ರನ್ ಗಳಿಸಿದರು. ಇನ್ಯಾರೂ ಎರಡಂಕಿ ಮೊತ್ತ ತಲುಪಲಿಲ್ಲ. ಇಂಗ್ಲೆಂಡ್ ಇನ್ನಿಂಗ್ಸ್ 10.3 ಓವರಲ್ಲೇ ಕೊನೆಗೊಂಡಿತು.
ಅಭಿಷೇಕ್ ದಾಖಲೆ ಸುರಿಮಳೆ!
ಅಭಿಷೇಕ್ ಶರ್ಮಾ ಬಾರಿಸಿದ 135 ರನ್, ಅಂ.ರಾ.ಟಿ20ಯಲ್ಲಿ ಭಾರತೀಯರಿಂದ ದಾಖಲಾದ ಗರಿಷ್ಠ ವೈಯಕ್ತಿಕ ಮೊತ್ತ . ಅವರು ಸಿಡಿಸಿದ 13 ಸಿಕ್ಸರ್ ಭಾರತೀಯರಿಂದ ದಾಖಲಾದ ಗರಿಷ್ಠ ಸಿಕ್ಸರ್. ಅಂ.ರಾ.ಟಿ20ಯಲ್ಲಿ 2ನೇ ಅತಿವೇಗದ ಅರ್ಧಶತಕ ಹಾಗೂ 2ನೇ ಅತಿವೇಗದ ಶತಕ ಸಹ ದಾಖಲಿಸಿದರು.
