ದಕ್ಷಿಣ ಆಫ್ರಿಕಾವನ್ನು ಫೈನಲ್‌ನಲ್ಲಿ 9 ವಿಕೆಟ್‌ಗಳಿಂದ ಮಣಿಸಿದ ಭಾರತ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಗೆದ್ದು ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾರತೀಯ ಸ್ಪಿನ್ನರ್‌ಗಳ ಅಮೋಘ ಬೌಲಿಂಗ್ ದ.ಆಫ್ರಿಕಾವನ್ನು 82 ರನ್‌ಗಳಿಗೆ ಕಟ್ಟಿಹಾಕಿತು. ತ್ರಿಶಾ ಅವರ ಸ್ಫೋಟಕ ಬ್ಯಾಟಿಂಗ್ (44*) ಭಾರತಕ್ಕೆ ಸುಲಭ ಜಯ ತಂದುಕೊಟ್ಟಿತು. ಬಿಸಿಸಿಐ ವಿಜೇತ ತಂಡಕ್ಕೆ 5 ಕೋಟಿ ಬಹುಮಾನ ಘೋಷಿಸಿದೆ.
ಮುಂಬೈ: ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್‌ನಲ್ಲಿ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ, ಸತತ 2ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯಿತು. 2023ರಲ್ಲಿ ನಡೆದಿದ್ದ ಉದ್ಘಾಟನಾ ಆವೃತ್ತಿಯಲ್ಲಿ ಭಾರತವೇ ಚಾಂಪಿಯನ್ ಆಗಿತ್ತು. ಇನ್ನು ಅಂಡರ್-19 ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡವನ್ನು ಕೊಂಡಾಡಿರುವ ಬಿಸಿಸಿಐ, ತಂಡಕ್ಕೆ ಬರೋಬ್ಬರಿ 5 ಕೋಟಿ ರು. ಬಹುಮಾನ ಘೋಷಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಬಿಸಿಸಿಐ, ‘ಭಾರತೀಯ ಕ್ರಿಕೆಟ್ ತಳಮಟ್ಟದಿಂದ ಎಷ್ಟು ಬಲಿಷ್ಠವಾಗಿದೆ ಎನ್ನುವುದಕ್ಕೆ ಈ ಗೆಲುವು ಸಾಕ್ಷಿ. ಪ್ರತಿಭೆಗಳನ್ನು ಹುಡುಕಿ, ಅವರಿಗೆ ಸೂಕ್ತ ತರಬೇತಿ, ವೇದಿಕೆ ಕಲ್ಪಿಸುವಲ್ಲಿ ಬಿಸಿಸಿಐ ಸದಾ ಮುಂದಿರಲಿದೆ’ ಎಂದಿದೆ. ಇನ್ನು ತಂಡವನ್ನು ಅಭಿನಂದಿಸಿರುವ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ‘ಭಾರತದಲ್ಲಿ ಮಹಿಳಾ ಕ್ರಿಕೆಟ್ ಬೆಳವಣಿಗೆಯನ್ನು ಈ ಗೆಲುವು ತೋರಿಸುತ್ತದೆ. ಸಂಘಟಿತ ಹೋರಾಟ ನಿರೀಕ್ಷಿತ ಯಶಸ್ಸು ತಂದುಕೊಡಲಿದೆ ಎನ್ನುವುದಕ್ಕೆ ಇದೇ ಸಾಕ್ಷಿ’ ಎಂದಿದ್ದಾರೆ.
ಯಂಗ್ ಇಂಡಿಯಾ ಮುಡಿಗೆ ವಿಶ್ವ ಕಿರೀಟ!
ಫೈನಲ್‌ನಲ್ಲಿ ಭಾರತೀಯ ಸ್ಪಿನ್ನರ್‌ಗಳು ಅಮೋಘ ಪ್ರದರ್ಶನ ತೋರಿದರು. ಟೂರ್ನಿಯದ್ದಕ್ಕೂ ತಮ್ಮ ಕೌಶಲ್ಯಗಳ ಮೂಲಕ ಎದುರಾಳಿಗಳನ್ನು ಕಟ್ಟಿಹಾಕಿದ ಸ್ಪಿನ್ನರ್‌ಗಳು ಫೈನಲ್‌ನಲ್ಲಿ ನಿರಾಸೆ ಮೂಡಿಸಲಿಲ್ಲ.
ಸ್ಪಿನ್ನರ್‌ಗಳಾದ ಆಯುಷಿ ಶುಕ್ಲಾ, ಗೊಂಗಾಡಿ ತ್ರಿಶಾ, ವೈಷ್ಣವಿ ಶರ್ಮಾ ಹಾಗೂ ಪಾರುಣಿಕಾ ಸಿಸೋಡಿಯಾ ಸೇರಿ ಒಟ್ಟು 9 ವಿಕೆಟ್‌ಗಳನ್ನು ಕಬಳಿಸಿದ ಪರಿಣಾಮ, ದಕ್ಷಿಣ ಆಫ್ರಿಕಾವನ್ನು ಭಾರತ 82 ರನ್‌ಗೆ ಕಟ್ಟಿಹಾಕಿತು. ಸುಲಭ ಗುರಿ ಬೆನ್ನತ್ತಿದ ಭಾರತ ತ್ರಿಶಾ ಅವರ ಸ್ಫೋಟಕ ಆಟದ ನೆರವಿನಿಂದ ಕೇವಲ 11.2 ಓವರ್‌ನಲ್ಲಿ ಜಯಿಸಿತು.
ಅಭಿಷೇಕ್ ಸೆಂಚುರಿಗೆ ಬೆಚ್ಚಿದ ಇಂಗ್ಲೆಂಡ್, 248 ಟಾರ್ಗೆಟ್ ಕೊಟ್ಟು ಹಲವು ದಾಖಲೆ ಬರೆದ ಭಾರತ
ದ.ಆಫ್ರಿಕಾ ನಾಯಕಿ ಕಯ್ಲಾ ರೆನೆಕೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಳಿಕ, ಆರಂಭಿಕ ಆಟಗಾರ್ತಿ ಎಮ್ಮಾ ಬೊಥಾ ಮೊದಲ ಓವರಲ್ಲೇ 2 ಬೌಂಡರಿ ಬಾರಿಸಿ ಉತ್ತಮ ಆರಂಭ ಒದಗಿಸಿದರು. ಆದರೆ, 2ನೇ ಓವರಲ್ಲಿ ದ.ಆಫ್ರಿಕಾಕ್ಕೆ ಸಮಸ್ಯೆ ಎದುರಾಯಿತು. ಪಾರುಣಿಕಾರ ಎಸೆತದಲ್ಲಿ ಸಿಮೊನ್ ಲಾರೆನ್ಸ್ ಬೌಲ್ಡ್ ಆದರು. ದ.ಆಫ್ರಿಕಾದ ಪ್ರಮುಖ ಆಟಗಾರ್ತಿ ಎಮ್ಮಾ ಬೊಥಾ (16) ಔಟಾಗುತ್ತಿದ್ದಂತೆ, ದ.ಆಫ್ರಿಕಾದ ಪತನ ಶುರುವಾಯಿತು. ಪವರ್-ಪ್ಲೇ ಮುಕ್ತಾಯಕ್ಕೆ3 ವಿಕೆಟ್‌ಗೆ 29 ರನ್ ಗಳಿಸಿದ್ದ ದ.ಆಫ್ರಿಕಾದ ಆಟ ಆನಂತರ ಸುಧಾರಿಸಲಿಲ್ಲ. 7ರಿಂದ 14ನೇ ಓವರ್ ನಡುವೆ ಒಂದೂ ಬೌಂಡರಿ ಗಳಿಸದ ತಂಡ, 2 ಪ್ರಮುಖ ವಿಕೆಟ್ ಸಹ ಕಳೆದುಕೊಂಡಿತು.
ಮೀಕೆ ವಾನ್ ವೊರ್ಸ್ಟ್ 56 ಎಸೆತಗಳ ಬಳಿಕ ತಂಡಕ್ಕೆ ಮೊದಲ ಬೌಂಡರಿ ತಂದುಕೊಟ್ಟರು. ಆ ಬಳಿಕ ಮತ್ತೆರಡು ಬೌಂಡರಿ ಬಾರಿಸಿ ತಂಡದ ಪರ ಅತಿಹೆಚ್ಚು (23) ರನ್ ಗಳಿಸಿದ ಆಟಗಾರ್ತಿ ಎನಿಸಿದರು. ಕೊನೆಯಲ್ಲಿ, ದ.ಆಫ್ರಿಕಾ 14 ಎಸೆತಗಳಲ್ಲಿ 5 ವಿಕೆಟ್ ಕಳೆದುಕೊಂಡು 20 ಓವರಲ್ಲಿ 82 ರನ್‌ಗೆ ಆಲೌಟ್ ಆಯಿತು. ತ್ರಿಶಾ 3, ಪಾರುಣಿಕಾ, ಆಯುಷಿ, ವೈಷ್ಣವಿ ತಲಾ 2, ಶಬ್ನಮ್ ಶಕೀಲ್ 1 ವಿಕೆಟ್ ಕಿತ್ತರು. ಕ್ಷೇತ್ರರಕ್ಷಣೆಯಲ್ಲೂ ಚುರುಕುತನ ತೋರಿದ ಭಾರತ, ಸಂಪೂರ್ಣ ಮೇಲುಗೈ ಸಾಧಿಸಿತು.
ತ್ರಿಶಾ ಅಬ್ಬರ: ಭಾರತ ಮೊದಲ ಓವರ್‌ನಿಂದಲೇ ಅಬ್ಬರಿಸಲು ಆರಂಭಿಸಿತು. ತ್ರಿಶಾ ತಾವು ಎದುರಿಸಿದ ಮೊದಲ 5 ಎಸೆತಗಳಲ್ಲಿ 3 ಬೌಂಡರಿ ಬಾರಿಸಿದರು. ಆ ಬಳಿಕ 4ನೇ ಓವರಲ್ಲಿ ಶೇಶ್ನಿ ನಾಯ್ಡುಗೆ ತ್ರಿಶಾ 3 ಬೌಂಡರಿ ಚಚ್ಚಿದರು. 8 ರನ್ ಗಳಿಸಿ ಆರಂಭಿಕ ಆಟಗಾರ್ತಿ ಕಮಲಿನಿ ಔಟಾದರೂ, ಭಾರತಕ್ಕೆ ಹೆಚ್ಚೇನೂ ಸಮಸ್ಯೆಯಾಗಲಿಲ್ಲ. 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಸನಿಕಾ ಛಲ್ಕೆ ಸಹ ರನ್ ಗಳಿಕೆಗೆ ವೇಗ ತುಂಬಿದರು.
ರಣಜಿ ಟ್ರೋಫಿ: ಸ್ಮರಣ್ ಶತಕ, ಸೋಲಿಂದ ರಾಜ್ಯ ಪಾರು!
38 ರನ್ ಗಳಿಸಿದ್ದಾಗ ತ್ರಿಶಾಗೆ ಜೀವದಾನ ದೊರೆಯಿತು. ಆದರೆ ಅಷ್ಟೊತ್ತಿಗಾಗಲೇ ಭಾರತ ಗೆಲುವಿನ ಹೊಸ್ತಿಲು ತಲುಪಿತ್ತು. 12ನೇ ಓವರಲ್ಲಿ ಭಾರತ ಗೆಲುವಿನ ದಡ ಸೇರಿತು. ತ್ರಿಶಾ 33 ಎಸೆತದಲ್ಲಿ 8 ಬೌಂಡರಿ ಸಹಿತ 44 ರನ್ ಸಿಡಿಸಿ ಔಟಾಗದೆ ಉಳಿದರೆ, ಸನಿಕಾ 26 ರನ್ ಗಳಿಸಿದರು.
309 ರನ್ ಮೂಲಕ ಟೂರ್ನಿಯಲ್ಲಿ ಅತಿಹೆಚ್ಚು ರನ್ ಕಲೆಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ತ್ರಿಶಾ ಪಂದ್ಯ ಶ್ರೇಷ್ಠ ಹಾಗೂ ಟೂರ್ನಿಯ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರು.
ಸ್ಕೋರ್: ದ.ಆಫ್ರಿಕಾ 20 ಓವರಲ್ಲಿ 82/10 (ವಾನ್ ವೊರ್ಸ್ಟ್ 23, ತ್ರಿಶಾ 3-15, ಪಾರುಣಿಕಾ 2-6, ಆಯುಷಿ 2-9, ವೈಷ್ಣವಿ 2-23), ಭಾರತ 11.2 ಓವರಲ್ಲಿ 84/1 (ತ್ರಿಶಾ 44*, ಸನಿಕಾ 26*, ರೆನೆಕೆ 1-14)
ವಿಶ್ವಕಪ್ ವಿಜೇತ ನಾಯಕಿ ಕರ್ನಾಟಕದ ನಿಕಿ ಪ್ರಸಾದ್!
ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು ಕರ್ನಾಟಕದ ನಿಕಿ ಪ್ರಸಾದ್. ಟೂರ್ನಿಯುದ್ದಕ್ಕೂ ಯಾವುದೇ ಹಂತದಲ್ಲೂ ಗೊಂದಲಕ್ಕೆ ಒಳಗಾಗದ ನಿಕಿ, ಅದ್ಭುತ ನಾಯಕತ್ವ ಗುಣಗಳನ್ನು ಪ್ರದರ್ಶಿಸಿದರು. ವಿಶ್ವಕಪ್‌ಗೂ ಮುನ್ನ ನಿಕಿ ಅವರ ನಾಯಕತ್ವದಲ್ಲೇ ಭಾರತ ಅಂಡರ್-19 ಏಷ್ಯಾಕಪ್ ಗೆದ್ದಿತ್ತು.
2027ರಲ್ಲಿ ಮುಂದಿನ ವಿಶ್ವಕಪ್
2 ವರ್ಷಗಳಿಗೊಮ್ಮೆ ನಡೆಯುವ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ನ 3ನೇ ಆವೃತ್ತಿ 2027ರಲ್ಲಿ ನಡೆಯಲಿದೆ. ಬಾಂಗ್ಲಾದೇಶ ಹಾಗೂ ನೇಪಾಳ ಜಂಟಿ ಆತಿಥ್ಯ ವಹಿಸಲಿವೆ. ನೇಪಾಳ ಮೊದಲ ಬಾರಿಗೆ ಜಾಗತಿಕ ಮಟ್ಟದ ಟೂರ್ನಿಯ ಆತಿಥ್ಯ ಹಕ್ಕು ಪಡೆದಿದೆ.
