Asianet Suvarna News Asianet Suvarna News

ನಿಮ್ಮಂತ ನಾಯಕ ಮತ್ತೊಬ್ಬರಿಲ್ಲ: ಧೋನಿ ಹುಟ್ಟುಹಬ್ಬಕ್ಕೆ ಭಾವನಾತ್ಮಕವಾಗಿ ಶುಭ ಕೋರಿದ ಕೊಹ್ಲಿ..!

* 41ನೇ ವಸಂತಕ್ಕೆ ಕಾಲಿರಿಸಿದ ಮಹೇಂದ್ರ ಸಿಂಗ್ ಧೋನಿ
* ಧೋನಿಗೆ ಭಾವನಾತ್ಮಕವಾಗಿ ಶುಭ ಕೋರಿದ ವಿರಾಟ್ ಕೊಹ್ಲಿ
* ನೀವು ನನ್ನ ಹಿರಿಯಣ್ಣ ಎಂದು ಕರೆದ ಕಿಂಗ್ ಕೊಹ್ಲಿ

MS Dhoni turns 41 Virat Kohli sends Special Birthday Wish For Dhoni kvn
Author
Bengaluru, First Published Jul 7, 2022, 5:29 PM IST

ಬೆಂಗಳೂರು(ಜು.07): ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇಂದು ತಮ್ಮ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಭಾರತದ ತಾರಾ ಕ್ರಿಕೆಟಿಗ ವಿರಾಟ್ ಕೊಹ್ಲಿ, ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿಗೆ ಭಾವನಾತ್ಮಕವಾಗಿ ಶುಭಕೋರಿದ್ದಾರೆ. ಮತ್ತೊಮ್ಮೆ ಕೊಹ್ಲಿ, ಧೋನಿಯನ್ನು ತಮ್ಮ ಹಿರಿಯಣ್ಣ ಎಂದು ಕರೆದಿದ್ದಾರೆ.

ವಿರಾಟ್ ಕೊಹ್ಲಿಯವರ ಕ್ರಿಕೆಟ್ ಬೆಳವಣಿಗೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಮಹತ್ತರ ಪಾತ್ರವನ್ನು ನಿಭಾಯಿಸಿದ್ದಾರೆ. ಈ ವಿಚಾರವನ್ನು ಸಮಯ ಸಿಕ್ಕಾಗಲೆಲ್ಲಾ ವಿರಾಟ್ ಕೊಹ್ಲಿ ಕೂಡಾ ಹೇಳುತ್ತಲೇ ಬಂದಿದ್ದಾರೆ. ಇಂದು ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ಆಗಿ ಹೊರಹೊಮ್ಮುವಲ್ಲಿ ಧೋನಿ ಪಾತ್ರವಿದೆ. ಮಹೇಂದ್ರ ಸಿಂಗ್ ಧೋನಿ (MS Dhoni) ಗರಡಿಯಲ್ಲಿ ಪಳಗಿರುವ ಕೊಹ್ಲಿ ಈಗಾಗಲೇ ನೂರಾರು ದಾಖಲೆಗಳ ಒಡೆಯರಾಗಿದ್ದಾರೆ. ಧೋನಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಕೊಹ್ಲಿ ವಿನೂತನವಾಗಿ ಟ್ವೀಟ್ ಮಾಡುವ ಮೂಲಕ ಶುಭಕೋರಿದ್ದಾರೆ. 

ನಿಮ್ಮಂತಹ ನಾಯಕ ಮತ್ತೊಬ್ಬರಿಲ್ಲ. ಭಾರತ ಕ್ರಿಕೆಟ್‌ಗೆ ನೀವು ನೀಡಿದ ಕೊಡುಗೆಗಳಿಗೆ ಅನಂತ ಧನ್ಯವಾದಗಳು. ನನ್ನ ಪಾಲಿಗೆ ನೀವಂತೂ ಹಿರಿಯ ಅಣ್ಣನಾಗಿದ್ದೀರ. ನಿಮ್ಮ ಮೇಲೆ ಪ್ರೀತಿ ಹಾಗೂ ಗೌರವ ಎಂದೆಂದಿಗೂ ಇರಲಿದೆ. ಹುಟ್ಟುಹಬ್ಬದ ಶುಭಾಶಯಗಳು ನಾಯಕ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಭಾರತ ಕ್ರಿಕೆಟ್‌ನ ಈ ಇಬ್ಬರು ದಂತಕತೆಗಳು ಮೈದಾನಗೊಳಗೆ ಹಾಗೂ ಮೈದಾನದಾಚೆಗೆ ಉತ್ತಮ ಸಹೋದರ ಸಂಬಂಧವನ್ನು ಹೊಂದಿದ್ದಾರೆ. ಈ ಜೋಡಿ ಮೈದಾನದಲ್ಲಿ ಭರ್ಜರಿ ಜತೆಯಾಟವಾಡುವ ಮೂಲಕ ಹಲವು ಸಂಕಷ್ಟದ ಸಂದರ್ಭದಲ್ಲಿ ಟೀಂ ಇಂಡಿಯಾಗೆ ಆಸರೆಯಾಗಿದ್ದರು. ಕೊಹ್ಲಿ ಹಾಗೂ ಧೋನಿ ಮೈದಾನದಲ್ಲಿ ಅತ್ಯಂತ ವೇಗವಾಗಿ ಓಡುವ ಮೂಲಕ ಗಮನ ಸೆಳೆದಿದ್ದಾರೆ. ಒಬ್ಬರಿಗೊಬ್ಬರು ಸಾಕಷ್ಟು ಹೊಂದಾಣಿಕೆಯಿಂದ ಕ್ರೀಸ್‌ನಲ್ಲಿ ಓಡುತ್ತಿದ್ದರು.

ಧೋನಿ ನಾಯಕರಾಗಿದ್ದಾಗಲೇ, ವಿರಾಟ್ ಕೊಹ್ಲಿಯನ್ನು ಉಪನಾಯಕರನ್ನಾಗಿ ನೇಮಕ ಮಾಡಿಕೊಳ್ಳುವ ಮೂಲಕ ಬೆಳೆಸಿದ್ದರು. ಹಲವು ಸಂಕಷ್ಟದ ಸಂದರ್ಭದಲ್ಲಿ ಮೈದಾನದಲ್ಲಿ ಧೋನಿ ಹಾಗೂ ಕೊಹ್ಲಿ ಒಟ್ಟಾಗಿ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. 

MS Dhoni turns 41: ಕ್ಯಾಪ್ಟನ್ ಕೂಲ್ ಧೋನಿ ಕುರಿತಾದ 5 ಇಂಟ್ರೆಸ್ಟಿಂಗ್ ಸಂಗತಿಗಳು..!

ಮಹೇಂದ್ರ ಸಿಂಗ್ ಧೋನಿ 2014ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬಳಿಕ, ವಿರಾಟ್ ಕೊಹ್ಲಿಗೆ (Virat Kohli) ಭಾರತ ಟೆಸ್ಟ್ ತಂಡದ ನಾಯಕತ್ವ ಪಟ್ಟ ಕಟ್ಟಲಾಯಿತು. ಇದಾಗಿ ಎರಡು ವರ್ಷಗಳ ಬಳಿಕ ಮೂರು ಮಾದರಿಯ ಕ್ರಿಕೆಟ್‌ಗೂ ವಿರಾಟ್ ಕೊಹ್ಲಿಯನ್ನೇ ನಾಯಕರನ್ನಾಗಿ ಬಿಸಿಸಿಐ ನೇಮಕ ಮಾಡಿತ್ತು. ವಿರಾಟ್ ಕೊಹ್ಲಿ ನಾಯಕರಾದ ಬಳಿಕವೂ ಮೈದಾನದಲ್ಲಿ ಧೋನಿಯವರ ಬಳಿ ಸಲಹೆಗಳನ್ನು ಪಡೆದುಕೊಳ್ಳುವುದು ಸರ್ವೇ ಸಾಮಾನ್ಯವಾಗಿತ್ತು. 

ಮಹೇಂದ್ರ ಸಿಂಗ್ ಧೋನಿ 16 ವರ್ಷಗಳ ಕಾಲ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ (2007), ಐಸಿಸಿ ಏಕದಿನ ವಿಶ್ವಕಪ್(2011) ಹಾಗೂ ಐಸಿಸಿ ಚಾಂಪಿಯನ್ಸ್‌ ಟ್ರೋಫಿ(2013) ಹೀಗೆ ಐಸಿಸಿಯ ಮೂರು ಟ್ರೋಫಿ ಗೆದ್ದ ಜಗತ್ತಿನ ಏಕೈಕ ನಾಯಕ ಎನ್ನುವ ಹಿರಿಮೆ ಮಾರ್ಗನ್ ಹೆಸರಿನಲ್ಲಿದೆ. ಎಂ ಎಸ್ ಧೋನಿ, 2004ರಲ್ಲಿ ಬಾಂಗ್ಲಾದೇಶ ವಿರುದ್ದ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಭಾರತ ಪರ 350 ಏಕದಿನ ಪಂದ್ಯಗಳನ್ನಾಡಿ 50.58ರ ಬ್ಯಾಟಿಂಗ್ ಸರಾಸರಿಯಲ್ಲಿ 10,773 ರನ್ ಬಾರಿಸಿದ್ದಾರೆ. ಇನ್ನು 90 ಟೆಸ್ಟ್ ಪಂದ್ಯಗಳನ್ನಾಡಿ 38.09ರ ಸರಾಸರಿಯಲ್ಲಿ 4876 ಹಾಗೂ 98 ಟಿ20 ಪಂದ್ಯಗಳನ್ನಾಡಿ 1,617 ರನ್ ಬಾರಿಸಿದ್ದಾರೆ.

Follow Us:
Download App:
  • android
  • ios