ನವದೆಹಲಿ(ನ.27): ಭಾರತ ತಂಡದ ಮಾಜಿ ನಾಯಕ ಎಂ.ಎಸ್‌. ಧೋನಿ ಕ್ರಿಕೆಟ್‌ ಭವಿಷ್ಯ ಮುಂದಿನ 2020ರ ಐಪಿಎಲ್‌ ಬಳಿಕ ನಿರ್ಧಾರವಾಗುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ. 2020ರ ಐಪಿಎಲ್‌ ನಲ್ಲಿ ಧೋನಿ ಹೇಗೆ ಆಡಲಿದ್ದಾರೆ. ವಿಕೆಟ್‌ ಕೀಪಿಂಗ್‌ ಹಾಗೂ ಬ್ಯಾಟಿಂಗ್‌ ಹೇಗೆ ನಡೆಸುತ್ತಾರೆ ಎನ್ನುವುದರ ಬಳಿಕ ಧೋನಿ ಅವರ ಕ್ರಿಕೆಟ್‌ ಭವಿಷ್ಯವನ್ನು ನಿರ್ಧರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಏಷ್ಯಾ-ವಿಶ್ವ ಇಲೆ​ವನ್‌ ಟಿ20 ಸರ​ಣಿಗೆ ಧೋನಿ?

ಮುಂದಿನ ವರ್ಷ 2020ರಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಧೋನಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುತ್ತಾರೋ.. ಇಲ್ಲವೋ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ಮಧ್ಯೆಯೇ ಮಾತನಾಡಿರುವ ಭಾರತ ಕ್ರಿಕೆಟ್‌ ತಂಡದ ಕೋಚ್‌ ರವಿಶಾಸ್ತ್ರಿ, ಐಪಿಎಲ್‌ ವರೆಗೂ ಕಾಯುವಂತೆ ಹೇಳಿದ್ದಾರೆ. ಐಪಿಎಲ್‌ ಮುಕ್ತಾಯದ ಬಳಿಕ ಟಿ20 ವಿಶ್ವಕಪ್‌ಗೆ ಅಂತಿಮ 15ರ ತಂಡವನ್ನು ರಚಿಸಲಾಗುವುದು ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ಇದನ್ನೂ ಓದಿ: ಮದ್ವೆವರೆಗೆ ಪುರುಷರೆಲ್ಲರೂ ಸಿಂಹ: ಧೋನಿ ಮಾತಿನ ಮೋಡಿಗೆ ಸಲಾಂ!

ಇದೇ ವರ್ಷ ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ನಡೆದಿದ್ದ ಐಸಿಸಿ ಏಕದಿನ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಬಳಿಕ ಧೋನಿ ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ. ವಿಶ್ವಕಪ್‌ ಗೆದ್ದು ನಿವೃತ್ತಿ ಹೇಳುವ ಲೆಕ್ಕಾಚಾರದಲ್ಲಿ ಧೋನಿ ಇರಬಹುದು ಎಂದೇ ಹೇಳಲಾಗಿತ್ತು. ಆದರೆ ಸೆಮೀಸ್‌ ಸೋಲು ಎಲ್ಲಾವನ್ನು ಬದಲು ಮಾಡಿತು.

ವಿಂಡೀಸ್‌ ಪ್ರವಾಸ, ತವರಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ಸರಣಿಗಳಿಂದ ಧೋನಿ ದೂರ ಉಳಿದರು. ಈ ಅವಧಿಯಲ್ಲಿ ಮೊದಲಿಗೆ ಸೇನೆ ಸಲ್ಲಿಸುವುದಕ್ಕಾಗಿ 2 ತಿಂಗಳ ವಿಶ್ರಾಂತಿ ತೆಗೆದುಕೊಂಡಿದ್ದ ಧೋನಿ, ಬಳಿಕ ಅನಿರ್ಧಿಷ್ಟಾವಧಿಗೆ ತಮ್ಮ ವಿಶ್ರಾಂತಿಯನ್ನು ಮುಂದೂಡಿದ್ದಾರೆ. ಈ ನಡುವೆ ಭಾರತ ತಂಡದ ಭವಿಷ್ಯದ ವಿಕೆಟ್‌ ಕೀಪರ್‌ ಎಂಬಂತೆ ರಿಷಭ್‌ ಪಂತ್‌ರನ್ನು ಬಿಂಬಿಸಲಾಗುತ್ತಿದೆ.