ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿಗಿಂದು 42ನೇ ಹುಟ್ಟುಹಬ್ಬದ ಸಂಭ್ರಮಧೋನಿಗೆ ವಿನೂತನವಾಗಿ ಶುಭ ಕೋರುತ್ತಿರುವ ಅಭಿಮಾನಿಗಳುಆಂಧ್ರಪ್ರದೇಶದ ನಂದಿಗ್ರಾಮದಲ್ಲಿ ಧೋನಿಯ 77 ಅಡಿ ಎತ್ತರದ ಕಟೌಟ್
ಬೆಂಗಳೂರು(ಜು.07): ಮೂರು ಐಸಿಸಿ ಟ್ರೋಫಿ ಗೆದ್ದ ಜಗತ್ತಿನ ಮೊದಲ ಹಾಗೂ ಏಕೈಕ ನಾಯಕ ಎನ್ನುವ ಇತಿಹಾಸ ನಿರ್ಮಿಸಿರುವ ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಇಂದು(ಜುಲೈ 07-2023) ತಮ್ಮ 42ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇನ್ನು ಮಹೇಂದ್ರ ಸಿಂಗ್ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ವಿವಿಧ ರೀತಿಯಲ್ಲಿ ದೇಶಾದ್ಯಂತ ಸಂಭ್ರಮಾಚರಣೆ ಮಾಡುತ್ತಿದ್ದಾರೆ.
ಎಂ ಎಸ್ ಧೋನಿಯ ಈ ಹುಟ್ಟುಹಬ್ಬದ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾಗಳಾದ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ ಮಾತ್ರವಲ್ಲದೇ ವಾಟ್ಸ್‌ಅಪ್ ಸ್ಟೇಟಸ್‌ಗಳಲ್ಲೂ ಧೋನಿ ಅಭಿಮಾನಿಗಳು ನೆಚ್ಚಿನ ಕ್ರಿಕೆಟಿಗನ ಪೋಸ್ಟರ್‌ಗಳನ್ನು ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ. ಇನ್ನು ಹೈದರಾಬಾದ್‌ನಲ್ಲಿ ಧೋನಿಯ 52 ಅಡಿ ಎತ್ತರದ ಕಟೌಟ್ ಹಾಕಿ ಅಭಿಮಾನ ಮೆರೆದಿದ್ದಾರೆ. ಇನ್ನು ಆಂಧ್ರಪ್ರದೇಶದ ನಂದಿಗ್ರಾಮದಲ್ಲಿ ಧೋನಿಯ 77 ಅಡಿ ಎತ್ತರದ ಕಟೌಟ್ ಹಾಕಿ ಅಭಿಮಾನಿಗಳು ಕ್ಯಾಪ್ಟನ್ ಕೂಲ್‌ಗೆ ಶುಭ ಹಾರೈಸಿದ್ದಾರೆ. ಆಂಧ್ರಪ್ರದೇಶದ ನಂದಿಗ್ರಾಮದಲ್ಲಿ ಬೃಹತ್ ಕಟೌಟ್‌ಗೆ ಅವರ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಹುಲ್ ದ್ರಾವಿಡ್ ನೇತೃತ್ವದ ಟೀಂ ಇಂಡಿಯಾ, 2007ರಲ್ಲಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್ ಹಂತದಲ್ಲೇ ಹೊರಬಿದ್ದು ನಿರಾಸೆ ಅನುಭವಿಸಿತ್ತು. ಇನ್ನು ಇದರ ಬೆನ್ನಲ್ಲೇ 2007ರ ಚೊಚ್ಚಲ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳೆಗೆ ಧೋನಿಗೆ ಭಾರತ ತಂಡದ ನಾಯಕ ಪಟ್ಟ ಕಟ್ಟಲಾಯಿತು. 2007ರಲ್ಲಿ ಭಾರತ ತಂಡದ ನಾಯಕರಾದ ಬಳಿಕ ಧೋನಿ ಚೊಚ್ಚಲ ಪ್ರಯತ್ನದಲ್ಲೇ ಭಾರತ ತಂಡವನ್ನು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದರು. ಇನ್ನು 2009ರಲ್ಲಿ ಭಾರತ ತಂಡವು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟು ಇತಿಹಾಸ ಬರೆದಿತ್ತು. ಇನ್ನು ಐಸಿಸಿಯ ಮೂರು ಟ್ರೋಫಿ ಗೆದ್ದ ಜಗತ್ತಿನ ಮೊದಲ ಹಾಗೂ ಏಕೈಕ ನಾಯಕ ಎನ್ನುವ ಹೆಗ್ಗಳಿಕೆ ಧೋನಿಗಿದೆ. 2007ರಲ್ಲಿ ಎಂ ಎಸ್ ಧೋನಿ ನೇತೃತ್ವದ ಟೀಂ ಇಂಡಿಯಾ ಟಿ20 ವಿಶ್ವಕಪ್ ಜಯಿಸಿತು. ಇದಾದ ಬಳಿಕ 2011ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಧೋನಿ ಭಾರತಕ್ಕೆ ವಿಶ್ವಕಪ್ ಜಯಿಸಿಕೊಟ್ಟರು. ಇದಾದ ಬಳಿಕ 2013ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸುವ ಮೂಲಕ ಧೋನಿ ಭಾರತದ ಯಶಸ್ವಿ ನಾಯಕರಾಗಿ ಹೊರಹೊಮ್ಮಿದ್ದರು.
ಇನ್ನು ಭಾರತ ಸರ್ಕಾರವು ಮಹೇಂದ್ರ ಸಿಂಗ್ ಧೋನಿಗೆ 2007ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದಾದ ಬಳಿಕ 2009ರಲ್ಲಿ ಪದ್ಮಶ್ರೀ ಹಾಗೂ 2018ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಎಂ ಎಸ್ ಧೋನಿ 2008 ಮತ್ತು 2009ರಲ್ಲಿ ಸತತ ಎರಡು ವರ್ಷ ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಎನ್ನುವ ಕೀರ್ತಿಗೂ ಪಾತ್ರರಾಗಿದ್ದರು.
ಸಾಕ್ಷಿಯನ್ನು ಧೋನಿ ಮೊದಲು ಭೇಟಿಯಾಗಿದ್ದೆಲ್ಲಿ? ಇಲ್ಲಿದೆ ನೋಡಿ ನಿಜವಾದ ಇಂಟ್ರೆಸ್ಟಿಂಗ್ ಸ್ಟೋರಿ
ಮಹೇಂದ್ರ ಸಿಂಗ್ ಧೋನಿ 2014ರಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ವೇಳೆಯಲ್ಲಿಯೇ ದಿಢೀರ್ ಎನ್ನುವಂತೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ತಮ್ಮ 90ನೇ ಟೆಸ್ಟ್ ಪಂದ್ಯವನ್ನಾಡಿದ ಬಳಿಕ ಧೋನಿ, ರೆಡ್ ಬಾಲ್ ಕ್ರಿಕೆಟ್‌ಗೆ ನಾಯಕರಾಗಿದ್ದಾಗಲೇ ಗುಡ್ ಬೈ ಹೇಳಿದರು. ಇನ್ನು ಇದಾದ ಬಳಿಕ 2017ರ ಜನವರಿಯಲ್ಲಿ ಧೋನಿ ಭಾರತ ಏಕದಿನ ಹಾಗೂ ಟಿ20 ನಾಯಕತ್ವಕ್ಕೂ ಗುಡ್ ಬೈ ಹೇಳಿದರು.
ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಪರ ತಮ್ಮ ಅದ್ಭುತ ನಾಯಕತ್ವದ ಹೆಜ್ಜೆಗುರುತನ್ನು ಧೋನಿ ದಾಖಲಿಸಿದ್ದಾರೆ. ಸಿಎಸ್‌ಕೆ ತಂಡದ ಪಾಲಿತ 'ತಾಲಾ' ಯೆಲ್ಲೋ ಜೆರ್ಸಿಯಲ್ಲಿ ತಮ್ಮ ನಾಯಕತ್ವದಲ್ಲಿ ಚೆನ್ನೈ ತಂಡವನ್ನು 5 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ಧೋನಿ, ಬಿಸಿಸಿಐನಿಂದ ಸಿಎಸ್‌ಕೆ ಎರಡು ವರ್ಷ ಬ್ಯಾನ್ ಆದ ಸಂದರ್ಭದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಿದ್ದರು.
ಸೆಕ್ಯೂರಿಟಿ ಗಾರ್ಡ್‌ಗೆ ಲಿಫ್ಟ್ ಕೊಟ್ಟ ಕ್ಯಾಪ್ಟನ್ ಕೂಲ್ ಧೋನಿ..! ಹಳೆ ವಿಡಿಯೋ ವೈರಲ್..!
ಎಂ ಎಸ್ ಧೋನಿ, 2004ರಲ್ಲಿ ಬಾಂಗ್ಲಾದೇಶ ವಿರುದ್ದ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಭಾರತ ಪರ 350 ಏಕದಿನ ಪಂದ್ಯಗಳನ್ನಾಡಿ 50.58ರ ಬ್ಯಾಟಿಂಗ್ ಸರಾಸರಿಯಲ್ಲಿ 10,773 ರನ್ ಬಾರಿಸಿದ್ದಾರೆ. ಇನ್ನು 90 ಟೆಸ್ಟ್ ಪಂದ್ಯಗಳನ್ನಾಡಿ 38.09ರ ಸರಾಸರಿಯಲ್ಲಿ 4876 ಹಾಗೂ 98 ಟಿ20 ಪಂದ್ಯಗಳನ್ನಾಡಿ 1,617 ರನ್ ಬಾರಿಸಿದ್ದಾರೆ. ಎಂ ಎಸ್ ಧೋನಿ 2020ರ ಆಗಸ್ಟ್ 15ರಂದು ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಸದ್ಯ ಧೋನಿ ಐಪಿಎಲ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಭಾರತ ಕ್ರಿಕೆಟ್ ತಂಡಕ್ಕೆ ಹಲವಾರು ಅವಿಸ್ಮರಣೀಯ ಗೆಲುವು ತಂದುಕೊಟ್ಟ ಧೋನಿ ಅವರಿಗೆ ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ವತಿಯಿಂದ ಜನ್ಮದಿನದ ಶುಭಾಶಯಗಳು.
