ಸೆಕ್ಯೂರಿಟಿ ಗಾರ್ಡ್‌ಗೆ ಲಿಫ್ಟ್ ಕೊಟ್ಟ ಕ್ಯಾಪ್ಟನ್ ಕೂಲ್ ಧೋನಿ..! ಹಳೆ ವಿಡಿಯೋ ವೈರಲ್..!
ಮನೆಯ ಸೆಕ್ಯೂರಿಟಿ ಗಾರ್ಡ್‌ಗೆ ಬೈಕ್‌ನಲ್ಲಿ ಡ್ರಾಪ್ ಕೊಟ್ಟ ಧೋನಿ
ಧೋನಿಯ ಹಳೆಯ ವಿಡಿಯೋವೀಗ ವೈರಲ್
ರಾಂಚಿ(ಜು.04): ಮೈದಾನದೊಳಗೆ ಹಾಗೂ ಮೈದಾನದಾಚೆ ಅಪಾರ ಪ್ರೀತಿ ಹಾಗೂ ಗೌರವ ಪಡೆಯುವ ಕ್ರಿಕೆಟಿಗರಲ್ಲಿ ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಭಾರತಕ್ಕೆ ಮೂರು ಐಸಿಸಿ ಟ್ರೋಫಿ ಏಕೈಕ ನಾಯಕ ಎನ್ನುವ ಹೆಗ್ಗಳಿಕೆ ಹೊಂದಿರುವ ಧೋನಿ, ಎಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ದೃತಿಗೆಡದೇ ತಾಳ್ಮೆಯಿಂದ ತಂಡವನ್ನು ಮುನ್ನಡೆಸುವ ಗುಣ ಹೊಂದಿರುವುದರಿಂದಲೇ ಮಹಿಯನ್ನು ಕ್ಯಾಪ್ಟನ್ ಕೂಲ್ ಎಂದು ಕರೆಯಲಾಗುತ್ತದೆ. ಅಭಿಮಾನಿಗಳ ಜತೆಗೂ ಯಾವುದೇ ಹಮ್ಮುಬಿಮ್ಮು ಇಲ್ಲದೇ ಸರಳ ರೀತಿಯಲ್ಲಿ ಬೆರೆಯುವ ಗುಣ ಹೊಂದಿರುವುದರಿಂದಲೇ ಧೋನಿಯನ್ನು ಕೋಟ್ಯಾಂತರ ಮಂದಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಫಾಲೋ ಮಾಡುತ್ತಾ ಬಂದಿದ್ದಾರೆ. ಧೋನಿಯ ಸಿಂಪಲ್ ಜೀವನದ ವಿಡಿಯೋಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.
ಈ ಹಿಂದೆ 2023ರ ಐಪಿಎಲ್ ಟೂರ್ನಿಯ ವೇಳೆಯಲ್ಲೂ ಪಂದ್ಯ ಮುಕ್ತಾಯದ ಬಳಿಕ ಮೈದಾನದ ಸಿಬ್ಬಂದಿಗಳ ಜತೆ ಮಾತುಕತೆ ನಡೆಸಿ, ಫೋಟೋಗೆ ಫೋಸ್ ಕೊಟ್ಟಿದ್ದರು. ಇದಷ್ಟೇ ಅಲ್ಲದೇ ಅಸಂಖ್ಯಾತ ಅಭಿಮಾನಿಗಳ ಜತೆಗೂ ಧೋನಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಅವಕಾಶ ಮಾಡಿ ಕೊಟ್ಟಿದ್ದರು. ಇದೀಗ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಎಂ ಎಸ್ ಧೋನಿ, ತಮ್ಮ ನಿವಾಸದಿಂದ ಸೆಕ್ಯೂರಿಟಿ ಗಾರ್ಡ್‌ವೊಬ್ಬರನ್ನು ಧೋನಿ ತಮ್ಮ ಬೈಕ್‌ನಲ್ಲಿ ಮೈನ್ ಗೇಟ್‌ಗೆ ಡ್ರಾಪ್ ಮಾಡಿರುವ ಹಳೆಯ ವಿಡಿಯೋವೀಗ ಸಾಕಷ್ಟು ವೈರಲ್ ಆಗಿದೆ.
ಧೋನಿಯ ಓಲ್ಡ್ ಈಸ್ ಗೋಲ್ಡ್ ಮಂತ್ರ..! ಸಮಯ ಸಿಕ್ರೆ ಸಾಕು ಹೊಲದಲ್ಲಿ MSD ಕೆಲಸ..!
ಮಹೇಂದ್ರ ಸಿಂಗ್ ಧೋನಿಯವರ ಫಾರ್ಮ್ ಹೌಸ್ ಎಷ್ಟು ದೊಡ್ಡದಿದೆ ಎಂದರೆ, ಸೆಕ್ಯೂರಿಟಿ ಗಾರ್ಡ್ ಅವರನ್ನು ಪ್ರವೇಶದ್ವಾರಕ್ಕೆ ತಂದು ಬಿಡಲು ಬೈಕ್‌ನಲ್ಲಿ ಬರಬೇಕಾಗುವಷ್ಟ ವಿಶಾಲವಾಗಿದೆ. ಹೀಗಿತ್ತು ನೋಡಿ ಆ ವಿಡಿಯೋ:
ಮಹೇಂದ್ರ ಸಿಂಗ್ ಧೋನಿ 2020ರ ಆಗಸ್ಟ್ 15ರಂದು ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಸದ್ಯ ಧೋನಿ, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಾಯಕನಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹೀಗಾಗಿ ಧೋನಿ ವರ್ಷದಲ್ಲಿ ಅಪರೂಪಕ್ಕೆ ಮಾತ್ರ ಅಭಿಮಾನಿಗಳಿಗೆ ದರ್ಶನ ನೀಡುತ್ತಾರೆ. ಧೋನಿಯನ್ನು ಹತ್ತಿರದಿಂದ ನೋಡುವುದೇ ಅವರ ಅಭಿಮಾನಿಗಳ ಕಣ್ಣಿಗೆ ಹಬ್ಬ. ಹೀಗಾಗಿಯೇ ಧೋನಿ ಎಲ್ಲಿಯೇ ಕಾಣಿಸಿಕೊಂಡರೂ, ಫೋಟೋ ಹಾಗೂ ವಿಡಿಯೋಗಳು ಕ್ಷಣಾರ್ಧದಲ್ಲಿ ವೈರಲ್ ಆಗುತ್ತವೆ.
ಕೆಲದಿನಗಳ ಹಿಂದಷ್ಟೇ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಇಂಡಿಗೋ ವಿಮಾನದಲ್ಲಿ ಪ್ರಯಾಣ ಮಾಡುವ ವೇಳೆ ತಮ್ಮ ಟ್ಯಾಬ್ಲೆಟ್‌ನಲ್ಲಿ ಕ್ಯಾಂಡಿ ಕ್ರಶನ್ ಗೇಮ್ ಆಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಇಂಡಿಗೋ ಏರ್‌ಲೈನ್ಸ್‌ನ ಗಗನಸಖಿಯೊಬ್ಬರು ಧೋನಿಗೆ ಚಾಕಲೇಟ್‌ಗಳನ್ನು ನೀಡುತ್ತಿರುವುದು ಕಂಡುಬಂದಿದೆ. ಭಾರತದ ದಿಗ್ಗಜ ಕ್ರಿಕೆಟಿಗ ಆತ್ಮೀಯತೆಯಿಂದಲೇ ಇದನ್ನು ಸ್ವೀಕರಿಸಿದ್ದಲ್ಲದೆ, ಅವರೊಂದಿಗೆ ಸಂವಹನ ನಡೆಸಿದ್ದರು. ಅದೇ ವಿಡಿಯೋದಲ್ಲಿ ಧೋನಿ ತಮ್ಮ ಟ್ಯಾಬ್ಲೆಟ್‌ನಲ್ಲಿ ಕ್ಯಾಂಡಿ ಕ್ರಶ್ ಗೇಮ್ ಆಡುತ್ತಿರುವುದು ಕಂಡುಬಂದಿದೆ. ಚಾಕೋಲೆಟ್ ಸ್ವೀಕರಿಸುವಾಗ ಟ್ಯಾಬ್ಲೆಟ್ ಅನ್ನು ತಮ್ಮ ಸೀಟ್‌ನ ಮುಂದೆ ಧೋನಿ ಇಟ್ಟ ಬೆನ್ನಲ್ಲಿಯೇ ಅದರಲ್ಲಿ ಅವರು ಕ್ಯಾಂಡಿ ಕ್ರಶ್ ಗೇಮ್ ಆಡುತ್ತಿರುವುದು ಕಂಡುಬಂದಿತ್ತು.
ಈ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆದ ನಂತರ ಕ್ಯಾಂಡಿ ಕ್ರಷ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಪ್ರಾರಂಭಿಸಿತು. ಕೇವಲ ಮೂರು ಗಂಟೆಗಳಲ್ಲಿ 36 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಕ್ಯಾಂಡಿ ಕ್ರಷ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ ಎಂದು ಮೊಬೈಲ್ ಗೇಮಿಂಗ್ ಅಪ್ಲಿಕೇಶನ್ ಹೇಳಿಕೊಂಡಿತ್ತು. ಇದು ಧೋನಿಯ ಮೇಲಿರುವ ಕ್ರೇಜ್ ಹೇಗಿದೆ ಎನ್ನುವುದನ್ನು ಸೂಚಿಸುತ್ತದೆ.