ನವದೆಹಲಿ(ಆ.29): ಟೀಂ ಇಂಡಿಯಾದ ಮಾಜಿ ಆಟಗಾರ ಎಂ.ಎಸ್‌. ಧೋನಿ ಕಳೆದ 50 ವರ್ಷಗಳ ಕ್ರಿಕೆಟ್‌ ಇತಿಹಾಸದಲ್ಲಿ ಕಾಣಿಸಿದ ಅತ್ಯಂತ ಸ್ಫೂರ್ತಿದಾಯಕ ನಾಯಕ ಎಂದು ಆಸ್ಪ್ರೇಲಿಯಾದ ಮಾಜಿ ಕ್ರಿಕೆಟಿಗ, ಭಾರತದ ಮಾಜಿ ಕೋಚ್‌ ಗ್ರೇಗ್‌ ಚಾಪೆಲ್‌ ಹೇಳಿದ್ದಾರೆ. 

ಭಾರತ ತಂಡಕ್ಕೆ 2 ವಿಶ್ವಕಪ್‌ಗಳನ್ನು ಗೆದ್ದುಕೊಟ್ಟ ಧೋನಿ, ಜಾಗತಿಕ ಕ್ರಿಕೆಟ್‌ನಲ್ಲಿ ಮಿಂಚಿದ ಮೈಕಲ್‌ ಬೇರ್ಲಿ, ಇಯಾನ್‌ ಚಾಪೆಲ್‌, ಮಾರ್ಕ್ ಟೇಲರ್‌ ಮತ್ತು ಕ್ಲೈವ್‌ ಲಾಯ್ಡ್‌ ಅವರಂತಹ ಸರ್ವಶ್ರೇಷ್ಠ ನಾಯಕರ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಾರೆ ಎಂದು ಚಾಪೆಲ್‌ ಹೇಳಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಮೊದಲೆರಡು ವರ್ಷಗಳಲ್ಲಿ(2005-2007) ಗ್ರೇಗ್ ಚಾಪೆಲ್ ತಂಡದ ಕೋಚ್ ಆಗಿದ್ದರು. ಧೋನಿ ನಮ್ಮೆಲ್ಲರ ನಿರೀಕ್ಷೆಗಳನ್ನು ಮೀರಿ, ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಾಗಿ ಬೆಳೆದು ನಿಂತರು ರಂದು ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.

"

ಧೋನಿಯ ಬಳಿ ಅಸಾಧಾರಣ ಕೌಶಲ್ಯಗಳಿವೆ ಹಾಗೂ ಅವರು ಸವಾಲುಗಳನ್ನು ಯಾವಾಗಲೂ ಇಷ್ಟಪಡುತ್ತಾರೆ. ಸವಾಲುಗಳನ್ನು ಮೈಮೇಲೆ ಎಳೆದುಕೊಂಡು ಅದರ ಜತೆಯೇ ಅತ್ಯಂತ ತಾಳ್ಮೆಯಿಂದ ಅದನ್ನು ಎದುರಿಸುವ ಕಲೆಯನ್ನು ಧೋನಿ ಕರಗತ ಮಾಡಿಕೊಂಡಿದ್ದರು. ಇದರ ಧೋನಿ ಹಾಸ್ಯ ಪ್ರೌವೃತ್ತಿಯನ್ನು ಹೊಂದಿದ್ದರು ಎಂದು ಚಾಪೆಲ್ ಗುಣಗಾನ ಮಾಡಿದ್ದಾರೆ.

ಧೋನಿ ನಿವೃತ್ತಿಯ ಬೆನ್ನಲ್ಲೇ ಬಿಸಿಸಿಐನಿಂದ ಗುಡ್‌ ನ್ಯೂಸ್..!

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ ನಡೆದ 2007ರ ಟಿ20 ವಿಶ್ವಕಪ್, 2011ರಲ್ಲಿ ನಡೆದ ಏಕದಿನ ವಿಶ್ವಕಪ್ ಹಾಗೂ 2013ರಲ್ಲಿ ನಡೆದ ಮಿನಿ ವಿಶ್ವಕಪ್ ಎಂದೇ ಕರೆಯಲ್ಪಡುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಈ ಮೂಲಕ ಮೂರೂ ಐಸಿಸಿ ಟ್ರೋಫಿ ಜಯಿಸಿದ ಜಗತ್ತಿನ ಏಕೈಕ ಕ್ರಿಕೆಟಿಗ ಎನ್ನುವ ಗೌರವ ಧೋನಿ ಹೆಸರಿನಲ್ಲಿದೆ. ಇದೇ ಆಗಸ್ಟ್ 15ರಂದು ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.