ನವದೆಹಲಿ(ಆ.19): ಭಾರತಕ್ಕೆ ಎಲ್ಲವನ್ನು ಗೆದ್ದುಕೊಟ್ಟ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಆಗಸ್ಟ್ 15ರಂದು ದಿಢೀರ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದಾರೆ. ಇದರ ಬೆನ್ನಲ್ಲೇ ಧೋನಿ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಲು ಬಿಸಿಸಿಐ ಮುಂದಾಗಿದೆ.

"

ಹೌದು, ಮಹೇಂದ್ರ ಧೋನಿಗೆ ವಿದಾಯದ ಪಂದ್ಯವನ್ನು ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು ಆಂಗ್ಲ ಸುದ್ದಿ ಸಂಸ್ಥೆ IANS ವರದಿ ಮಾಡಿದೆ. ಮಹೇಂದ್ರ ಸಿಂಗ್ ಧೋನಿ ಶನಿವಾರ ಸಂಜೆ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಮೂಲಕ ತಮ್ಮ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿದ್ದರು. ಇದರೊಂದಿಗೆ 16 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ ಧೋನಿ ಗುಡ್‌ ಬೈ ಹೇಳಿದ್ದರು.

39 ವರ್ಷದ ಧೋನಿ ಐಸಿಸಿಯ ಮೂರು ಟ್ರೋಫಿ(ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ)ಗಳನ್ನು ಗೆದ್ದ ಜಗತ್ತಿನ ಏಕೈಕ ನಾಯಕ ಎನ್ನುವ ಅಪರೂಪದ ದಾಖಲೆಗಳನ್ನು ಬರೆದಿದ್ದಾರೆ. ಧೋನಿ ದೇಶಕ್ಕಾಗಿ ಅತ್ಯುನ್ನತ ಸೇವೆ ಮಾಡಿದ್ದಾರೆ. ಅವರಿಗೆ ವಿದಾಯದ ಪಂದ್ಯವನ್ನು ಆಯೋಜಿಸುವ ಕುರಿತಂತೆ ಐಪಿಎಲ್ ವೇಳೆಯಲ್ಲಿ ಧೋನಿ ಜತೆ ಮಾತುಕತೆ ನಡೆಸುವ ಬಗ್ಗೆಯೂ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಧೋನಿ ನಿವೃತ್ತಿಯಾದ ರಾತ್ರಿ ಟೀಂ ಇಂಡಿಯಾದ ಇಬ್ಬರು ಕ್ರಿಕೆಟಿಗರು ನೆಮ್ಮದಿಯಿಂದ ನಿದ್ರೆ ಮಾಡಿದ್ರು..!

ಸದ್ಯಕ್ಕೆ ಭಾರತದ ಯಾವುದೇ ಅಂತಾರಾಷ್ಟ್ರೀಯ ಸರಣಿಗಳು ನಡೆಯುತ್ತಿಲ್ಲ. ಐಪಿಎಲ್ ಮುಕ್ತಾಯದ ಬಳಿಕ ಏನು ಮಾಡಲು ಸಾಧ್ಯ ಎನ್ನುವುದರ ಬಗ್ಗೆ ಯೋಚನೆ ಮಾಡುತ್ತೇವೆ. ಧೋನಿ ಟೀಂ ಇಂಡಿಯಾಗೆ ಸಾಕಷ್ಟು ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾರೆ. ಅವರು ಎಲ್ಲಾ ಗೌರವಕ್ಕೆ ಅರ್ಹರಾಗಿದ್ದಾರೆ. ನಾವು ಅವರಿಗೆ ವಿದಾಯದ ಪಂದ್ಯ ಆಯೋಜಿಸುವ ಯೋಚಿಸುತ್ತಿದ್ದೇವೆ. ಐಪಿಎಲ್ ವೇಳೆ ಈ ಬಗ್ಗೆ ಧೋನಿ ಬಳಿ ಮಾತನಾಡಲಿದ್ದೇವೆ. ಅವರು ಒಪ್ಪಲಿ ಅಥವಾ ಒಪ್ಪದಿರಲಿ ನಾವಂತು ಅವರಿಗೆ ಸೂಕ್ತ ಸನ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮದನ್ ಲಾಲ್ ಕೂಡಾ ಧೋನಿಗೆ ವಿದಾಯದ ಪಂದ್ಯ ಆಯೋಜಿಸುವ ಬಗ್ಗೆ ಮಾತನಾಡಿದ್ದಾರೆ. ಒಂದು ವೇಳೆ ಧೋನಿಗೆ ವಿದಾಯದ ಪಂದ್ಯವನ್ನು ಆಯೋಜಿಸಿದರೆ ನಾನಂತೂ ಖುಷಿ ಪಡುತ್ತೇನೆ ಎಂದು ಮದನ್ ಲಾಲ್ ಹೇಳಿದ್ದಾರೆ. ಧೋನಿ ನಿವೃತ್ತಿ ಘೋಷಿಸುತ್ತಿದ್ದಂತೆ ಝಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಬಿಸಿಸಿಐಗೆ ಪತ್ರ ಬರೆದಿದ್ದರು.