Asianet Suvarna News Asianet Suvarna News

98 ರನ್ ಗಳಿಸಿದ್ದಾಗ ಶಾನಕ ಮಂಕಡ್ ರನೌಟ್‌ ಮಾಡಲೆತ್ನಿಸಿದ ಶಮಿ..! ಮತ್ತೆ ಹೃದಯ ಗೆದ್ದ ಕ್ಯಾಪ್ಟನ್‌ ರೋಹಿತ್ ಶರ್ಮಾ

ಲಂಕಾ ಎದುರು ಮೊದಲ ಏಕದಿನ ಪಂದ್ಯ ಗೆದ್ದು ಬೀಗಿದ ಟೀಂ ಇಂಡಿಯಾ
ಶತಕದ ಹೊಸ್ತಿಲಲ್ಲಿದ್ದಾಗ ನಾನ್‌ಸ್ಟ್ರೈಕ್ ರನೌಟ್ ಮಾಡಿದ ಮೊಹಮ್ಮದ್ ಶಮಿ
ಮಧ್ಯ ಪ್ರವೇಶಿಸಿ ರನೌಟ್ ಮನವಿ ಹಿಂಪಡೆದ ನಾಯಕ ರೋಹಿತ್ ಶರ್ಮಾ

Mohammed Shami Runs Out Dasun Shanaka At Non Strikers End Captain Rohit Sharma Withdraws Appeal due to this reason kvn
Author
First Published Jan 11, 2023, 12:44 PM IST

ಗುವಾಹಟಿ(ಜ.11): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಬಾರಿಸಿದ ದಾಖಲೆಯ ಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಶ್ರೀಲಂಕಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 67 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಇದೇ ಪಂದ್ಯದ ಕೊನೆಯ ಓವರ್‌, ನಾಟಕೀಯ ಸನ್ನಿವೇಶಕ್ಕೂ ಸಾಕ್ಷಿಯಾಯಿತು. 

ಹೌದು, ಶತಕದ ಹೊಸ್ತಿಲಲ್ಲಿದ್ದ ದಶೂನ್ ಶಾನಕ ಅವರನ್ನು ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ ನಾನ್‌ಸ್ಟ್ರೈಕ್ ರನೌಟ್(ಮಂಕಡ್ ರನೌಟ್) ಮಾಡುವ ಯತ್ನ ನಡೆಸಿ ಗಮನ ಸೆಳೆದರು. ಇದೆಲ್ಲ ನಡೆದಿದ್ದು, ಲಂಕಾದ 50ನೇ ಓವರ್‌ನಲ್ಲಿ. ಲಂಕಾ ನಾಯಕ ದಶೂನ್ ಶಾನಕ 98 ರನ್‌ಗಳಿಸಿ ನಾನ್‌ ಸ್ಟ್ರೈಕ್‌ನಲ್ಲಿದ್ದಾಗ, ಬೌಲಿಂಗ್ ಮಾಡುವ ಮುನ್ನವೇ ಶಾನಕ ಕ್ರೀಸ್‌ ತೊರೆದಿದ್ದರಿಂದ ಮೊಹಮ್ಮದ್ ಶಮಿ, ನಾನ್‌ಸ್ಟ್ರೈಕ್‌ ರನೌಟ್ ಮಾಡಿದರು. ಆಗ ಮೈದಾನದಲ್ಲಿದ್ದ ಅಂಪೈರ್ ನಿತಿನ್ ಮೆನನ್, ನಿರ್ಣಯಕ್ಕಾಗಿ ಥರ್ಡ್‌ ಅಂಪೈರ್ ಮೊರೆ ಹೋದರು. ಆಗ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಧ್ಯ ಪ್ರವೇಶಿಸಿ, ನಾನ್‌ ಸ್ಟ್ರೈಕ್ ರನೌಟ್ ಮನವಿಯನ್ನು ಹಿಂಪಡೆದರು. ಇದಾದ ಬಳಿಕ ಶಾನಕ, ತಮ್ಮ ಏಕದಿನ ಕ್ರಿಕೆಟ್‌ ವೃತ್ತಿಜೀವನದ ಎರಡನೇ ಶತಕ ಸಿಡಿಸಿದರಾದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಯಶಸ್ವಿಯಾಗಲಿಲ್ಲ.

ಇನ್ನು ಈ ವಿಚಾರದ ಕುರಿತಂತೆ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, " ಮೊಹಮ್ಮದ್ ಶಮಿ ಹೀಗೆ ಮಾಡುತ್ತಾರೆ ಎನ್ನುವ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ. ಶಾನಕ ಆಗ 98 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ನಾವು ಅವರನ್ನು ಔಟ್ ಮಾಡಬೇಕೆಂದಿದ್ದೆವು, ಆದರೆ ನಾವು ಅವರನ್ನು ಈ ರೀತಿ ಔಟ್ ಮಾಡುವುದು ಸರಿ ಎನಿಸಲಿಲ್ಲ. ತುಂಬಾ ಚೆನ್ನಾಗಿ ಆಡಿದ ಅವರಿಗೆ ಅಭಿನಂದನೆಗಳು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಹೀಗಿತ್ತೂ ನೋಡಿ, ಆ ಕ್ಷಣ:

ಇನ್ನು ಪಂದ್ಯದ ಬಗ್ಗೆ ಹೇಳುವುದಾದರೇ, ಆರಂಭದಲ್ಲೇ ಅಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದ ಭಾರತ ನಿಗದಿತ 50 ಓವರಲ್ಲಿ 7 ವಿಕೆಟ್‌ಗೆ 373 ರನ್‌ ಕಲೆ ಹಾಕಿತು. ಲಂಕಾ ಫೀಲ್ಡರ್‌ಗಳು ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಭಾರತಕ್ಕೆ ವರವಾಯಿತು. ಬೃಹತ್‌ ಮೊತ್ತ ಬೆನ್ನತ್ತಿದ ಶ್ರೀಲಂಕಾ ದಸುನ್‌ ಶಾನಕ ಅಬ್ಬರದ ಶತಕದ ಹೊರತಾಗಿಯೂ 50 ಓವರಲ್ಲಿ 8 ವಿಕೆಟ್‌ಗೆ 306 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಹಲವು ದಾಖಲೆಗಳಿಗೆ ಸಾಕ್ಷಿಯಾದ ಭಾರತ-ಲಂಕಾ ಮೊದಲ ಒನ್‌ ಡೇ; ಕೊಹ್ಲಿಯಿಂದ ಸಚಿನ್ ವಿಶ್ವದಾಖಲೆ ನುಚ್ಚುನೂರು..!

ಆವಿಷ್ಕಾ ಫೆರ್ನಾಂಡೊ(05), ಕುಸಾಲ್‌ ಮೆಂಡಿಸ್‌(00)ರನ್ನು ಆರಂಭದಲ್ಲೇ ಪೆವಿಲಿಯನ್‌ಗಟ್ಟಿದ ಸಿರಾಜ್‌ ಭಾರತಕ್ಕೆ ಮೇಲುಗೈ ಸಾಧಿಸಲು ನೆರವಾದರು. 14 ಓವರಲ್ಲಿ 64ಕ್ಕೆ 3 ವಿಕೆಟ್‌ ಕಳೆದುಕೊಂಡ ತಂಡ ಬಳಿಕ ಕೆಲ ಹೋರಾಟ ಪ್ರದರ್ಶಿಸಿದರೂ ಗೆಲುವಿಗೆ ಸಾಕಾಗಲಿಲ್ಲ. ಪಥುಮ್‌ ನಿಸ್ಸಂಕ 72, ಧನಂಜಯ ಡಿ ಸಿಲ್ವ 47 ರನ್‌ ಸಿಡಿಸಿ ತಂಡಕ್ಕೆ ಆಸರೆಯಾದರು. ಕೊನೆಯಲ್ಲಿ ಅಬ್ಬರಿಸಿದ ನಾಯಕ ಶಾನಕ 88 ಎಸೆತಗಳಲ್ಲಿ 12 ಬೌಂಡರಿ, 3 ಸಿಕ್ಸರನ್ನೊಳಗೊಂಡ 108 ರನ್‌ ಸಿಡಿಸಿ ಔಟಾಗದೆ ಉಳಿದರು. ಉಮ್ರಾನ್‌ 57ಕ್ಕೆ 3, ಸಿರಾಜ್‌ 30ಕ್ಕೆ 2 ವಿಕೆಟ್‌ ಕಿತ್ತರು.

ಬ್ಯಾಟಿಂಗ್‌ ಅಬ್ಬರ:

ಟಾಸ್‌ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟ ಭಾರತಕ್ಕೆ ನಾಯಕ ರೋಹಿತ್‌ ಶರ್ಮಾ ಹಾಗೂ ಶುಭ್‌ಮನ್‌ ಗಿಲ್‌ ಭರ್ಜರಿ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 143 ರನ್‌ ಜೊತೆಯಾಟವಾಡಿತು. 60 ಎಸೆತಗಳಲ್ಲಿ 70 ರನ್‌ ಸಿಡಿಸಿ ಗಿಲ್‌ ಔಟಾದರೆ, ಶತಕದತ್ತ ಮುನ್ನುಗ್ಗುತ್ತಿದ್ದ ರೋಹಿತ್‌ 83(67 ಎಸೆತ) ರನ್‌ಗೆ ವಿಕೆಟ್‌ ಒಪ್ಪಿಸಿದರು. ಸೂರ‍್ಯಕುಮಾರ್‌ ಬದಲು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಶ್ರೇಯಸ್‌ ಅಯ್ಯರ್‌(28), ಕೆ.ಎಲ್‌.ರಾಹುಲ್‌(39) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲಿಲ್ಲ. ಆದರೆ ವಿರಾಟ್‌ ಕೊಹ್ಲಿ ಸತತ 2ನೇ ಶತಕ ಸಿಡಿಸಿ ತಂಡದ ಮೊತ್ತ 350ರ ಗಡಿ ದಾಟಲು ನೆರವಾದರು. 2 ಬಾರಿ ಜೀವದಾನ ಪಡೆದ ಕೊಹ್ಲಿ 80 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 73ನೇ ಶತಕ ಬಾರಿಸಿದ ಅವರು 87 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್‌ ಒಳಗೊಂಡ 113 ರನ್‌ ಸಿಡಿಸಿ ನಿರ್ಗಮಿಸಿದರು. ಕಸುನ ರಜಿತಾ 3 ವಿಕೆಟ್‌ ಕಿತ್ತರು.

Follow Us:
Download App:
  • android
  • ios