ಲಂಕಾ ಎದುರು ಮೊದಲು ಏಕದಿನ ಪಂದ್ಯ ಗೆದ್ದು ಬೀಗಿದ ಟೀಂ ಇಂಡಿಯಾಸಚಿನ್ ತೆಂಡುಲ್ಕರು ದಾಖಲೆ ಅಳಿಸಿ ಹಾಕಿದ ವಿರಾಟ್ ಕೊಹ್ಲಿಭಾರತದ ಪರ ವೇಗದ ಬೌಲ್ ಎಸೆದ ವೇಗಿ ಉಮ್ರಾನ್ ಮಲಿಕ್

ಗುವಾಹಟಿ(ಜ.11): ಏಕದಿನ ಕ್ರಿಕೆಟ್‌ನಲ್ಲಿ 45ನೇ ಶತಕ ಪೂರ್ತಿಗೊಳಿಸಿದ ವಿರಾಟ ಕೊಹ್ಲಿ ಈ ಮೂಲಕ ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ರ ಕೆಲ ದಾಖಲೆಗಳನ್ನೂ ತನ್ನ ಹೆಸರಿಗೆ ಬರೆದುಕೊಂಡರು. ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಭಾರತದಲ್ಲಿ 20ನೇ ಶತಕ ಬಾರಿಸಿದ್ದು, ಸಚಿನ್‌(20 ಶತಕ) ದಾಖಲೆಯನ್ನು ಸರಿಗಟ್ಟಿದರು. 

ಕೊಹ್ಲಿ 101 ಪಂದ್ಯಗಳಲ್ಲಿ ಈ ಮೈಲುಗಲ್ಲು ತಲುಪಿದ್ದರೆ, ಸಚಿನ್‌ 164 ಪಂದ್ಯಗಳನ್ನು ತೆಗೆದುಕೊಂಡಿದ್ದರು. ಇನ್ನು ಲಂಕಾ ವಿರುದ್ಧ ಕೊಹ್ಲಿ 9ನೇ ಶತಕ ಬಾರಿಸಿದ್ದು, ಆ ದೇಶದ ವಿರುದ್ಧ ಗರಿಷ್ಠ ಶತಕ ಬಾರಿಸಿದ ಖ್ಯಾತಿಗೆ ಪಾತ್ರರಾದರು. ಸಚಿನ್‌ 8 ಶತಕ ಬಾರಿಸಿದ್ದಾರೆ. ಕೊಹ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ 9, ಅಸ್ಪ್ರೇಲಿಯಾ ವಿರುದ್ಧ 8 ಶತಕ ಬಾರಿಸಿದ್ದಾರೆ. ಏಕದಿನದಲ್ಲಿ ಸಚಿನ್‌ 49 ಶತಕಗಳನ್ನು ಬಾರಿಸಿದ್ದು ಈ ದಾಖಲೆ ಮುರಿಯಲು ಕೊಹ್ಲಿಗೆ ಇನ್ನು ಕೇವಲ 5 ಶತಕ ಬೇಕಿದೆ. ಸಚಿನ್‌ 452 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರೆ ಕೊಹ್ಲಿ ಕೇವಲ 257 ಇನ್ನಿಂಗ್‌್ಸ ಆಡಿದ್ದಾರೆ.

37 ಪಂದ್ಯಶ್ರೇಷ್ಠ: ವಿರಾಟ್‌ ಏಕದಿನ ಕ್ರಿಕೆಟ್‌ನಲ್ಲಿ 266 ಪಂದ್ಯಗಳಲ್ಲಿ 37ನೇ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸಚಿನ್‌ 68(463 ಪಂದ್ಯ), ಜಯಸೂರ್ಯ 48(445 ಪಂದ್ಯ) ಬಾರಿ ಈ ಸಾಧನೆ ಮಾಡಿದ್ದಾರೆ.

72 ಶತಕ: ಆರಂಭಿಕನಾಗಿ ಕಣಕ್ಕಿಳಿಯದೇ ವಿರಾಟ್‌ ಕೊಹ್ಲಿ 72 ಶತಕ ಸಿಡಿಸಿದರು. ಈ ಮೂಲಕ ಆಸ್ಪ್ರೇಲಿಯಾದ ರಿಕಿ ಪಾಂಟಿಂಗ್‌ (71 ಶತಕ) ದಾಖಲೆ ಮುರಿದರು.

ಲಂಕಾ ವಿರುದ್ಧ 9 ಬಾರಿ 350+ ರನ್‌: ದಾಖಲೆ

ಭಾರತ ತಂಡ ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ 9ನೇ ಬಾರಿ 350ಕ್ಕೂ ಹೆಚ್ಚು ರನ್‌ ಕಲೆ ಹಾಕಿದ್ದು, ದಾಖಲೆ ಎನಿಸಿಕೊಂಡಿತು. ಆಸ್ಪ್ರೇಲಿಯಾ ತಂಡ ಭಾರತ ವಿರುದ್ಧ 8 ಬಾರಿ 350+ ರನ್‌ ಗಳಿಸಿತ್ತು. ಇನ್ನು, ಲಂಕಾ ವಿರುದ್ಧ ಭಾರತ 22 ಬಾರಿ 300ಕ್ಕೂ ಹೆಚ್ಚು ರನ್‌ ಕಲೆ ಹಾಕಿದೆ. ತಂಡವೊಂದರ ವಿರುದ್ಧ ಅತಿಹೆಚ್ಚು ಬಾರಿ 300+ ರನ್‌ ಸಿಡಿಸಿದ ದಾಖಲೆ ಆಸ್ಪ್ರೇಲಿಯಾ ಹೆಸರಲ್ಲಿದೆ. ಭಾರತ ವಿರುದ್ಧ ಆಸೀಸ್‌ 28 ಬಾರಿ 300+ ರನ್‌ ಹೊಡೆದಿದೆ.

IND vs SL ಸಾಕಾಗಲಿಲ್ಲ ದಸೂನ್ ಹೋರಾಟ, ಗೆಲುವಿನೊಂದಿಗೆ ಏಕದಿನದಲ್ಲಿ ಶುಭಾರಂಭ ಮಾಡಿದ ಭಾರತ!

156ಕಿ.ಮೀ.: ಉಮ್ರಾನ್‌ ಮಲಿಕ್‌ ಉರಿ ಚೆಂಡು

ಗುವಾಹಟಿ: ಪ್ರಚಂಡ ವೇಗದ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿರುವ ಭಾರತದ ಯುವ ಬೌಲರ್‌ ಉಮ್ರಾನ್‌ ಮಲಿಕ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತೀಯ ಬೌಲರ್‌ಗಳ ಪೈಕಿ ವೇಗದ ಬೌಲ್‌ ಮಾಡಿದರು. ಶ್ರೀಲಂಕಾ ವಿರುದ್ಧದ ಪಂದ್ಯದ 14ನೇ ಓವರ್‌ನ 4ನೇ ಎಸೆತದಲ್ಲಿ ಜಮ್ಮು-ಕಾಶ್ಮೀರದ ವೇಗಿ ಉಮ್ರಾನ್‌ 156 ಕಿ.ಮೀ. ವೇಗದಲ್ಲಿ ಬಾಲ್‌ ಎಸೆದರು. ಈ ಮೂಲಕ ತಮ್ಮದೇ ಹೆಸರಲ್ಲಿದ್ದ ವೇಗದ ಎಸೆತದ ದಾಖಲೆಯನ್ನು ಉತ್ತಮಗೊಳಿಸಿದರು. 

ಕಳೆದ ವಾರ ಲಂಕಾ ವಿರುದ್ಧವೇ ಮೊದಲ ಟಿ20 ಪಂದ್ಯದಲ್ಲಿ 155 ಕಿ.ಮೀ. ವೇಗದಲ್ಲಿ ಬೌಲ್‌ ಮಾಡಿ, ಜಸ್‌ಪ್ರೀತ್‌ ಬೂಮ್ರಾರ 153.36 ಕಿ.ಮೀ. ವೇಗದ ದಾಖಲೆಯನ್ನು ಮುರಿದಿದ್ದರು. ಉಮ್ರಾನ್‌ ಕಳೆದ ವರ್ಷ ಐಪಿಎಲ್‌ನಲ್ಲಿ 156.9 ಕಿ.ಮೀ. ವೇಗದಲ್ಲಿ ಬೌಲ್‌ ಮಾಡಿದ್ದರು.