ಮೊಹಮ್ಮದ್ ಶಮಿ ಭಾರತ ಟೆಸ್ಟ್ ಕ್ರಿಕೆಟ್ ತಂಡದಿಂದ ನಿರ್ಲಕ್ಷ್ಯಕ್ಕೊಳಗಾಗಿ, ಕೊನೆಗೂ ನೋವಿನಿಂದಲೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಸೀಮ್ ಮತ್ತು ಸ್ವಿಂಗ್ ಬೌಲಿಂಗ್‌ನಲ್ಲಿ ಮಾಸ್ಟರ್ ಆಗಿದ್ದ ಶಮಿ, ತಮ್ಮ ಅದ್ಭುತ ಕೌಶಲ್ಯಗಳಿಂದ ಭಾರತಕ್ಕೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು.

  • ಸುದರ್ಶನ್, ಏಷ್ಯಾನೆಟ್ ಸುವರ್ಣ ನ್ಯೂಸ್

ಎರಡು ವರ್ಷ.. ನೆಲಕ್ಕೆ ಬಿದ್ದ ಬೆವರ ಹನಿಗಳಿಗೆ ಲೆಕ್ಕವಿಲ್ಲ. ಆದರೆ ಅವನನ್ನು ಲೆಕ್ಕಕ್ಕೇ ಇಡಲಿಲ್ಲ.. ಎರಡು ವರ್ಷ.. ಹಸಿದ ಹೆಬ್ಬುಲಿಯಂತೆ ವಿಕೆಟ್’ಗಳನ್ನು ಬೇಟೆಯಾಡಿದ..ಆದರೆ ಅವನೇ ಬೇಟೆಯಾಗಿ ಬಿಟ್ಟ.. ಎರಡು ವರ್ಷ.. ಉಸಿರು ಬಿಗಿ ಹಿಡಿದು ಆಡಿದ.. ನೋವನ್ನೆಲ್ಲಾ ಹಲ್ಲು ಕಚ್ಚಿ ನುಂಗಿದ.. ಅವನ ಗುರಿ ಇದ್ದದ್ದು ಒಂದೇ.. ಬದುಕು ಕೊಟ್ಟ ಆಟದಲ್ಲಿ ಭಾರತವನ್ನು ಮತ್ತೆ ಪ್ರತಿನಿಧಿಸಬೇಕು.. ತಾನೇನು, ತನ್ನ ತಾಕತ್ತೇನು ಎಂಬುದನ್ನು ಜಗತ್ತಿಗೆ ತೋರಿಸಲು ಅವಕಾಶ ಕೊಟ್ಟ ಟೆಸ್ಟ್ ಕ್ರಿಕೆಟ್’ನಲ್ಲಿ ಮತ್ತೊಮ್ಮೆ ಧೂಳೆಬ್ಬಿಸಬೇಕು.. ಒಂದು ಅವಕಾಶ.. ಒಂದೇ ಒಂದು ಅವಕಾಶಕ್ಕಾಗಿ ಹಂಬಲಿಸಿದ.. ತನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಕ್ರಿಕೆಟ್ ಮೈದಾನದಲ್ಲಿ ಸೋಲರಿಯದ ಯೋಧನಂತೆ ಸೆಣಸುತ್ತಲೇ ಹೋದ..

ಎರಡು ವರ್ಷ.. ಪ್ರತಿ ಬಾರಿ ಭಾರತ ಟೆಸ್ಟ್ ತಂಡದ ಆಯ್ಕೆ ನಡೆದಾಗಲೆಲ್ಲಾ ಅಲ್ಲಿ ತನ್ನ ಹೆಸರಿದೆಯೇ ಎಂದು ನೋಡುತ್ತಿದ್ದ.. ಕೊನೆಗೊಂದು ದಿನ ಅವನಿಗೆ ಎಲ್ಲವೂ ಅರ್ಥವಾಯಿತು.. ಇವರಿಗೆ ನಾನು ಬೇಕಿಲ್ಲ.. ಇವರು ನನ್ನನ್ನು ನೋಡುವ ದೃಷ್ಠಿಕೋನವೇ ಬದಲಾಗಿದೆ ಎಂಬ ಕಟು ಸತ್ಯವನ್ನು ಅರ್ಥೈಸಿಕೊಂಡ. ಎಲ್ಲವೂ ಅರ್ಥವಾದ ಆ ಕ್ಷಣ ತಡಮಾಡದೆ ಎದ್ದು ನಡೆದು ಬಿಟ್ಟ. ಹಾಗೆ ಎದ್ದು ನಡೆದವನು ಟೆಸ್ಟ್ ಕ್ರಿಕೆಟ್’ನಲ್ಲಿ ಧೂಳೆಬ್ಬಿಸಿದ ಅಮ್ರೋಹಾದ ಬೆಂಕಿ ಚೆಂಡು ಮೊಹಮ್ಮದ್ ಶಮಿ.

ಮತ್ತೊಬ್ಬ ಪರಾಕ್ರಮಿ ಕ್ರಿಕೆಟಿಗ.. ಮತ್ತೊಂದು ನೋವಿನ ವಿದಾಯ.. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಂತರ ಮೊಹಮ್ಮದ್ ಶಮಿ ಕೂಡ ವೈಟ್ ಜರ್ಸಿ ಕಳಚಿಟ್ಟಿದ್ದಾನೆ.

2023, ಜೂನ್ 11

ಅಪ್ರತಿಮ ಕ್ರಿಕೆಟ್ ಯೋಧನೊಬ್ಬ ಟೆಸ್ಟ್ ಅಖಾಡದಲ್ಕಿ ಕೊನೆಯ ಬಾರಿ ಕಾಣಿಸಿಕೊಂಡ ದಿನ. ಆಸ್ಟ್ರೇಲಿಯಾ ವಿರುದ್ಧದ ವರ್ಲ್ಡ್ ಟೆಸ್ಟ್ ಚಾಂಪಿಯನ್’ಶಿಪ್ ಫೈನಲ್’ನಲ್ಲಿ ಆಡಿದ್ದೇ ಕೊನೆ. ನಂತರ ಮೊಹಮ್ಮದ್ ಶಮಿಗೆ ಟೆಸ್ಟ್ ಆಡುವ ಅವಕಾಶವೇ ಸಿಗಲಿಲ್ಲ. ಅವಕಾಶ ಕೊಡಬೇಕಾದವರು ಅವನ ವಿಚಾರದಲ್ಲಿ ನಿರ್ದಯಿಯಾದರು. ಹಾಗೆಂದು ಕೈಚೆಲ್ಲಿ ಕೂರುವ ಜಾಯಮಾನದವನಲ್ಲ ಅವನು.

ಮೊಹಮ್ಮದ್ ಶಮಿ ಬಂಗಾಳದಿಂದ ಭುಗಿಲೆದ್ದು ಬಂದಿದ್ದ ಜ್ವಾಲಾಮುಖಿ. ಪೂರ್ವ ರಾಜ್ಯದಲ್ಲಿ ಕ್ರಿಕೆಟ್ ಬದುಕು ಕಟ್ಟಿಕೊಂಡವನ ಹುಟ್ಟೂರು ಉತ್ತರಪ್ರದೇಶದ ಅಮ್ರೋಹದ ಸಾಹಸಪುರ. ಊರಿನ ಹೆಸರಲ್ಲೇ ಸಾಹಸ.. ಅಂಥಾ ಮಣ್ಣಿನಿಂದ ಬಂದಿದ್ದ ಸೋಲೊಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಟೆಸ್ಟ್ ತಂಡಕ್ಕೆ ಮರಳಲು ಎಲ್ಲವನ್ನೂ ಮಾಡಿದ್ದ. ದೇಶೀಯ ಕ್ರಿಕೆಟ್’ನಲ್ಲಿ ಆಡಿದ.. ದೊಡ್ಡ ದೊಡ್ಡ ಸ್ಪೆಲ್’ಗಳನ್ನು ಎಸೆದ.. ವಿಕೆಟ್’ಗಳನ್ನು ಪಡೆದ.. ಸತತವಾಗಿ ನಿರ್ಲಕ್ಷಿಸುತ್ತಾ ಬಂದಾಗಲೂ ಅವನು ಪಟ್ಟು ಸಡಿಲಿಸಲಿಲ್ಲ.. 2023ರ ಜೂನ್ ತಿಂಗಳಲ್ಲಿ ಭಾರತ ಟೆಸ್ಟ್ ತಂಡದಿಂದ ಹೊರ ಬಿದ್ದ ನಂತರ ದೇಶೀಯ ಕ್ರಿಕೆಟ್ ಅಖಾಡಕ್ಕೆ ಧುಮುಕಿದವನು ಎರಡೂ ವರ್ಷಗಳಲ್ಲಿ ಎಷ್ಟು ಓವರ್ 4115 ಎಸೆತಗಳನ್ನು ಎಸೆದಿದ್ದ.. ಅಂದರೆ 685.5 ಓವರ್. ಪಡೆದ ವಿಕೆಟ್’ಗಳು 131. ಫಿಟ್ನೆಸ್ ಬಗ್ಗೆ ತಕಾರರು ಎತ್ತಿದವರಿಗೆ ಅದೇ ಉತ್ತರ. ಆದರೆ ಇದಾವುದಕ್ಕೂ ಬೆಲೆ ಇಲ್ಲ ಎಂಬುದು ಅರಿವಾಗುತ್ತಿದ್ದಂತೆ ವಿದಾಯದ ನಿರ್ಧಾರ ಪ್ರಕಟಿಸಿದ್ದಾನೆ.

ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್’ವುಡ್ 36ನೇ ವಯಸ್ಸಲ್ಲಿ ಟೆಸ್ಟ್ ಕ್ರಿಕೆಟ್ ಆಡುತ್ತಾರೆ ಎಂದರೆ ಮೊಹಮ್ಮದ್ ಶಮಿಗೆ ಏಕೆ ಸಾಧ್ಯವಿರಲಿಲ್ಲ.. Infact ಅವನು ಸಿದ್ಧನಿದ್ದ.. ಆದರೆ ಅವನನ್ನು ಆಯ್ಕೆ ಮಾಡಲು ಇವರು ಸಿದ್ಧರಿರಲಿಲ್ಲ. ಅವರ ಕಣ್ಣಿಗೆ ಮೆರಿಟ್ ಕಾಣಲಿಲ್ಲ. ಮೊಹಮ್ಮದ್ ಶಮಿಯಂಥಾ ಬೌಲರ್ ಯಾವುದೇ ತಂಡಕ್ಕಾದರೂ ಆಸ್ತಿ. ಪ್ರತಿಕೂಲ ಪರಿಸ್ಥಿತಿಯಿಂದ ತಂಡವನ್ನು ಹೊರಗೆಳೆದೂ ಗೆಲುವು ತಂದುಕೊಡುತ್ತಿದ್ದ ಮ್ಯಾಚ್ ವಿನ್ನರ್ ಅವನು. ಕೈ ತಪ್ಪಿ ಹೋಗುತ್ತಿದ್ದ ಪಂದ್ಯಗಳನ್ನು ಭಾರತದ ಮಡಿಲಿಗೆ ಎಳೆದು ತಂದು ಪಂದ್ಯಗಳನ್ನು ಗೆಲ್ಲಿಸಿಕೊಟ್ಟವನು. ಗೆಲ್ಲಿಸಲಬೇಕೆಂದು ಹಠಕ್ಕೆ ಬಿದ್ದರೆ ಅದೆಂಥಾ ಬೆಟ್ಟವಾದರೂ ಸರಿ.. ಏರಿ ವಿಜಯ ಪತಾಕೆ ಹಾರಿಸಿ ಬಿಡುತ್ತಿದ್ದ.

2018ರ ಜೊಹಾನ್ಸ್’ಬರ್ಗ್ ಟೆಸ್ಟ್ ಪಂದ್ಯ..

ಅದಾಗಲೇ ಭಾರತ ಸರಣಿಯಲ್ಲಿ 0-2ರಿಂದ ಹಿನ್ನಡೆಯಲ್ಲಿತ್ತು. 3ನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮುಂದಿದ್ದ ಗೆಲುವಿನ ಗುರಿ 241. 2 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿದ್ದ ಆಫ್ರಿಕಾ ಸುಲಭ ಜಯದತ್ತ ಮುನ್ನುಗ್ಗುತ್ತಿತ್ತು. ಲಂಚ್ ಬ್ರೇಕ್’ನಲ್ಲಿ ಮೊಹಮ್ಮದ್ ಶಮಿ ಬಟ್ಟಲು ತುಂಬಾ ಬಿರಿಯಾನಿ ಹಾಕಿಕೊಂಡು ತಿನ್ನುತ್ತಿದ್ದನಂತೆ. ಆ ದೃಶ್ಯವನ್ನು ನೋಡಿದ ಕೋಚ್ ರವಿಶಾಸ್ತ್ರಿ ಶಮಿಗೆ ಚೆನ್ನಾಗಿ ಝಾಡಿಸಿ ಬಿಟ್ಟರಂತೆ. ಭಾರತ ಸೋಲುವ ಹಂತದಲ್ಲಿದೆ.. ಸೋತರೆ ವೈಟ್ ವಾಶ್ ಅವಮಾನ.

‘’ಕೆಲವೇ ನಿಮಿಷಗಳಲ್ಲಿ ಬೌಲಿಂಗ್ ಮಾಡಬೇಕಿರುವವನು ಈ ಪರಿ ಬಿರಿಯಾನಿ ತಿನ್ನುತಿದ್ದಾನೆ’’ ಎಂದು ಆಕ್ರೋಶಭರಿತರಾಗಿ ಹೇಳಿದರಂತೆ ರವಿಶಾಸ್ತ್ರಿ. ಶಮಿ ಸಿಟ್ಟಿಗೆದ್ದು ಬಿಟ್ಟ. ಕ್ರೋಧ ಧಗಧಗಿಸಿ ಬಿಟ್ಟಿತು. 131/2ರಲ್ಲಿದ್ದ ದಕ್ಷಿಣ ಆಫ್ರಿಕಾ 177ಕ್ಕೆ ಆಲೌಟ್. ಶಮಿ 28ಕ್ಕೆ 5 ವಿಕೆಟ್ ಉಡಾಯಿಸಿದ್ದ.

ಸೀಮ್ & ಸ್ವಿಂಗ್ ಬೌಲಿಂಗ್’ನಲ್ಲಿ ಮೊಹಮ್ಮದ್ ಶಮಿ ಮಾಸ್ಟರ್ ಕ್ಲಾಸ್. ರಿವರ್ಸ್ ಸ್ವಿಂಗ್ ಅವನ ಬತ್ತಳಿಕೆಯ ಮತ್ತೊಂದು ಅಸ್ತ್ರ. ಅದು ಎಲ್ಲರಿಗೂ ಸಿದ್ಧಿಸುವ ಅಸ್ತ್ರ ಅಲ್ಲ. ಕ್ರಿಕೆಟ್ ಮೈದಾನದಲ್ಲಿ ರಿವರ್ಸ್ ಸ್ವಿಂಗನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರಯೋಗಿಸಿದವನು ಶಮಿ. He was lethal, He was accurate, He was effective, He was extremely good. ‘’Shami swings the ball, Shami seams the ball and Shami's control is as good as Bumrah's. ಈ ಕ್ಷಣಕ್ಕೆ ಶಮಿ ಭಾರತದ ಬೆಸ್ಟ್ ಫಾಸ್ಟ್ ಬೌಲರ್. ಬುಮ್ರಾನಂತೆ ವಿಕೆಟ್ ಪಡೆಯಲು ಅವನಿಗೆ ಸಾಧ್ಯವಾಗದೇ ಇರಬಹುದು. ಆದರೆ ಅವನು full package ಮತ್ತು ಉಳಿದೆಲ್ಲರಿಗಿಂತಲೂ consistent’’

ಇದು ಶಮಿಗೆ ವೆಸ್ಟ್ ಇಂಡೀಸ್’ನ ಬೌಲಿಂಗ್ ಶ್ರೇಷ್ಠ ಆ್ಯಂಡಿ ರಾಬರ್ಟ್ಸ್ ಕೊಟ್ಟ ಸಾಮರ್ಥ್ಯದ ಪ್ರಮಾಣಪತ್ರ.

64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್’ಗಳು..!

ಮೊಹಮ್ಮದ್ ಶಮಿ ಪಡೆದ ಟೆಸ್ಟ್ ವಿಕೆಟ್’ಗಳಲ್ಲಿ ಅರ್ಧದಷ್ಟು ವಿಕೆಟ್’ಗಳು ಬಿದ್ದಿರುವುದು ಬೌಲ್ಡ್ ಅಥವಾ LBW ರೂಪದಲ್ಲಿ. ಕಾರಣ, ಅವನ ಅದ್ಭುತ ಸೀಮ್ & ಸ್ವಿಂಗ್ ಕೌಶಲ್ಯ. ಕ್ರಿಕೆಟ್ ಬಾಲ್’ನ ಸೀಮ್ ಜೊತೆಗೆ ಅವನದ್ದೊಂದು ರೀತಿಯ ರೊಮ್ಯಾನ್ಸ್.. ಸಾಮಾನ್ಯವಾಗಿ ವೇಗದ ಬೌಲರ್’ನನ್ನು ಎದುರಿಸಿ ನಿಲ್ಲುವ ದಾಂಡಿಗರು ಅವನ ಕೈಯಲ್ಲಿನ ಸೀಮ್ ಅನ್ನು ಗಮನಿಸುತ್ತಾರೆ.. ಚೆಂಡಿನ ಹೊಳಪು ಯಾವ ದಿಕ್ಕಿನಲ್ಲಿದೆ ಎಂದು ನೋಡುತ್ತಾರೆ. ಶಮಿಯ ವಿಶೇಷತೆ ಏನು ಗೊತ್ತೇ..? ಬೌಲಿಂಗ್ run upನಲ್ಲಿದ್ದಾಗ ಚೆಂಡಿನ ಹೊಳಪಿನ ಭಾರ ಎಡಭಾಗಕ್ಕಿದ್ದರೆ, ಓಡುತ್ತಾ ಬಂದು ಅಂಪೈರ್ ಬಳಿ ಸಣ್ಣಗೆ ಮೇಲಕ್ಕೆ ನೆಗೆದು ಕೈಯನ್ನು ತಲೆಯ ಮೇಲೆತ್ತಿ ಚೆಂಡನ್ನು ರಿಲೀಸ್ ಮಾಡುವ ಹೊತ್ತಿಗೆ ಚೆಂಡಿನ ಹೊಳಪಿನ ಭಾಗವನ್ನು ಬಲಭಾಗಕ್ಕೆ ತಿರುಗಿಸಿ ಬಿಡಬಲ್ಲ ಚಾಣಾಕ್ಷ. ದಾಂಡಿಗರನ್ನು ಈ ರೀತಿ ವಂಚಿಸುವ ಕಲೆ ಅವನಿಗೆ ಸಿದ್ಧಿಸಿತ್ತು. ಚೆಂಡು ಸ್ಟಂಪ್’ಗೆ ಬಡಿಯುವಾಗ ಅದರಿಂದ ಹೊಸ ಬರುತ್ತಿದ್ದ ಸದ್ದು ಶಮಿಗೆ ಮತ್ತೇರಿಸುತ್ತಿತ್ತಂತೆ. ಅಲ್ಲಿಂದ ಮತ್ತೇರಿದ ಮದಗಜದಂತಾಗಿ ಬಿಡುತ್ತಿದ್ದ. ಸ್ವಿಂಗ್ ಮತ್ತು ಸೀಮ್ ಬೌಲಿಂಗ್’ಗೆ ನೆರವು ನೀಡುವ ನ್ಯೂಜಿಲೆಂಡ್’ನಲ್ಲಿ ಟೆಸ್ಟ್ ಆಡುವ ಆಸೆ ಪಟ್ಟಿದ್ದ. ಕರೆ ಬರಬಹುದೆಂಬ ದೂರದ ನಿರೀಕ್ಷೆಯಲ್ಲಿದ್ದ.. ಆದರೆ ದೂರದ ನಿರೀಕ್ಷೆ ದೂರವೇ ನಿಂತು ಬಿಟ್ಟಿತು.

ಅವನೇ ಹೇಳಿದಂತೆ ಟೆಸ್ಟ್ ಕ್ರಿಕೆಟ್ ಅವನ ಪಾಲಿಗೆ ಹೆಮ್ಮೆ, ಗರ್ವ, ಸಂತೋಷ, ಸಂಭ್ರಮ, ಜೀವನ ಪಾಠ. ಅವನು ನಿವೃತ್ತಿ ಹೇಳಿರುವುದು ಟೆಸ್ಟ್ ಕ್ರಿಕೆಟ್’ಗೆ. ಏಕದಿನ ಕ್ರಿಕೆಟ್ ಆಡುತ್ತೇನೆ ಎಂದಿದ್ದಾನೆ. ಅದರೆ ಅವನು 2027ರ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದಾನೆ. ಏಕದಿನ ವಿಶ್ವಕಪ್ ಅಖಾಡದಲ್ಲಿ ಅವನಂತೆ ವೀರಾವೇಶದಿಂದ ಬೌಲಿಂಗ್ ಮಾಡಿದ ಮತ್ತೊಬ್ಬನಿಲ್ಲ.. ಅವಕಾಶದ ನಿರೀಕ್ಷೆಯಲ್ಲಿದ್ದಾನೆ. ಅವಕಾಶ ಸಿಗಲಿ, ಬಿಡಲಿ.. ಅವನದ್ದು ಸಾಧನೆಯ ಶಿಖರ.. ಅವನು ವಿದಾಯ ಹೇಳಿದ್ದು ವೈಟ್ ಜರ್ಸಿಗಷ್ಟೇ.. ನೆನಪುಗಳಿಗಲ್ಲ..

ಪ್ರೀತಿಯ ಲಾಲಾ..

ನೀನು ಭಾರತೀಯ ಕ್ರಿಕೆಟ್ ಕಂಡ ಪ್ರಚಂಡ ವೇಗಿ. ನೀನೀಗ ಭಾರತ ತಂಡಕ್ಕೆ ಬೇಡವಾಗಿರಬಹುದು. ಆದರೆ ಕ್ರಿಕೆಟ್ ಪ್ರಿಯರಿಗೆ, ನಿನ್ನ ಅಭಿಮಾನಿಗಳಿಗೆ ಯಾವತ್ತೂ ಬೇಡವಾಗಲಾರೆ. ಕಾರಣ, ನೀನು ಹೃದಯದಲ್ಲಿರುವೆ..