ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟು, ಇಬ್ಬರು ಎಡಗೈ ಬ್ಯಾಟ್ಸ್‌ಮನ್‌ಗಳನ್ನು ಆರಂಭಿಕರಾಗಿ ಕಳುಹಿಸಿದ ಕೋಚ್ ಗೌತಮ್ ಗಂಭೀರ್ ಅವರ ತಂತ್ರವನ್ನು ಮೊಹಮ್ಮದ್ ಕೈಫ್ ತೀವ್ರವಾಗಿ ಟೀಕಿಸಿದ್ದಾರೆ. ಇದೊಂದು 'ಹಿಮಾಲಯದಷ್ಟು ದೊಡ್ಡ ಪ್ರಮಾದ' ಎಂದಿರುವ ಅವರು, ಬಲಗೈ-ಎಡಗೈ ಆರಂಭಿಕ ಜೋಡಿಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ್ದಾರೆ.

ಲಂಡನ್: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾದ ತಂತ್ರಗಾರಿಕೆ ಮತ್ತು ಹೆಡ್ ಕೋಚ್ ಗೌತಮ್ ಗಂಭೀರ್ ಅವರ ಪ್ರಯೋಗಗಳ ವಿರುದ್ಧ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಗರಂ ಆಗಿದ್ದಾರೆ. ಕೇರಳ ಮೂಲದ ಸಂಜು ಸ್ಯಾಮ್ಸನ್ ಅವರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಟ್ಟು, ಇಬ್ಬರೂ ಎಡಗೈ ಬ್ಯಾಟ್ಸ್‌ಮನ್‌ಗಳನ್ನೇ ಆರಂಭಿಕರಾಗಿ ಕಳುಹಿಸಿದ್ದು 'ಹಿಮಾಲಯದಷ್ಟು ದೊಡ್ಡ ಪ್ರಮಾದ' ಎಂದು ಕೈಫ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಎಚ್ಚರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ, ಸಂಜು ಬದಲು 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಅಭಿಷೇಕ್ ಶರ್ಮಾ ಜೊತೆ ಓಪನಿಂಗ್‌ಗೆ ಕಳುಹಿಸಲಾಗಿತ್ತು. ಆದರೆ, 10 ಎಸೆತಗಳಲ್ಲಿ 14 ರನ್ ಗಳಿಸಿದ್ದ ವೈಭವ್, ಇಂಗ್ಲೆಂಡ್‌ನ ಪಾರ್ಟ್-ಟೈಮ್ ಆಫ್ ಸ್ಪಿನ್ನರ್ ವಿಲ್ ಜಾಕ್ಸ್ ಬೌಲಿಂಗ್‌ನಲ್ಲಿ ಔಟಾದರು. ಭಾರತದ ಮೊದಲ ಏಳು ಬ್ಯಾಟರ್‌ಗಳ ಪೈಕಿ ಆರು ಮಂದಿ ಎಡಗೈ ಆಟಗಾರರಾಗಿದ್ದರಿಂದ ವಿಲ್ ಜಾಕ್ಸ್‌ಗೆ ಬೌಲಿಂಗ್ ಮಾಡುವುದು ಸುಲಭವಾಯ್ತು. ಅವರು 3 ಓವರ್‌ಗಳಲ್ಲಿ ಕೇವಲ 22 ರನ್ ನೀಡಿ ಮಿಂಚಿದರು. ಈ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳಿಂದ ಸೋಲು ಕಂಡಿತ್ತು.

ಗಂಭೀರ್ ಮೇಲೆ ಚಾಟಿ ಬೀಸಿದ ಕೈಫ್

ಕಳೆದ ಟಿ20 ವಿಶ್ವಕಪ್‌ನಲ್ಲಿ ಭಾರತ ಕಲಿತ ಪಾಠವನ್ನು ಗಂಭೀರ್ ಮತ್ತು ತಂಡ ಮರೆತಿದೆ ಎಂದು ಕೈಫ್ ಚಾಟಿ ಬೀಸಿದ್ದಾರೆ. "ವಿಶ್ವಕಪ್‌ನಲ್ಲಿ ಮಾಡಿದ ತಪ್ಪನ್ನೇ ಇಲ್ಲಿ ಮತ್ತೆ ಮಾಡಲಾಗುತ್ತಿದೆ. ಆಗ ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ಓಪನಿಂಗ್ ಮಾಡುತ್ತಿದ್ದರು. ಎದುರಾಳಿಗಳು ಆಫ್ ಸ್ಪಿನ್ನರ್‌ಗಳನ್ನು ತಂದಾಗ ಇಬ್ಬರೂ ಔಟಾಗುತ್ತಿದ್ದರು. ದೊಡ್ಡ ಸೋಲು ಅನುಭವಿಸುವವರೆಗೂ ಸಂಜುಗೆ ಅವಕಾಶ ನೀಡಿರಲಿಲ್ಲ," ಎಂದು ಕೈಫ್ ನೆನಪಿಸಿಕೊಂಡರು.

ಬಲಗೈ-ಎಡಗೈ ಆರಂಭಿಕ ಜೋಡಿ ಭಾರತಕ್ಕೆ ಯಾವಾಗಲೂ ಉತ್ತಮ ಎಂದು ಕೈಫ್ ಅಭಿಪ್ರಾಯಪಟ್ಟರು. ವಿಶ್ವಕಪ್‌ನಲ್ಲಿ ಆಫ್ ಸ್ಪಿನ್ನರ್‌ಗಳ ಎದುರು ಭಾರತ ಪರದಾಡುತ್ತಿದ್ದಾಗ, ಸಂಜು ಸ್ಯಾಮ್ಸನ್ ತಂಡಕ್ಕೆ ಬಂದು ಆ ಸಮಸ್ಯೆಯನ್ನು ಬಗೆಹರಿಸಿದ್ದರು. ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ದೀರ್ಘಕಾಲದ ಆರಂಭಿಕ ಜೋಡಿಯಾಗಲು ಸಾಧ್ಯವಿಲ್ಲ. ಟಾಪ್ ಆರ್ಡರ್‌ನಲ್ಲಿ ಒಬ್ಬ ಬಲಗೈ ಬ್ಯಾಟರ್ ಇರಲೇಬೇಕು ಎಂದು ಕೈಫ್ ಒತ್ತಿ ಹೇಳಿದರು. ಕಳೆದ ಕೆಲವು ಪಂದ್ಯಗಳ ಕಳಪೆ ಫಾರ್ಮ್ ನೋಡಿ ಸಂಜು ಅವರನ್ನು ಅಳೆಯಬಾರದು ಎಂದೂ ಅವರು ಸಲಹೆ ನೀಡಿದರು.

"ಸಂಜು ಕೆಲವೊಮ್ಮೆ 2-3 ಪಂದ್ಯಗಳಲ್ಲಿ ವಿಫಲರಾಗಬಹುದು. ಆದರೆ ಅವರ ವೃತ್ತಿಜೀವನ ನೋಡಿ, ಒತ್ತಡದ ಸಂದರ್ಭಗಳಲ್ಲಿ ದೊಡ್ಡ ಶತಕಗಳನ್ನು ಬಾರಿಸುವ ಸಾಮರ್ಥ್ಯ ಅವರಿಗಿದೆ. ಅವರು ರನ್ ಗಳಿಸಿದರೆ, ಅದು ಯಾವಾಗಲೂ ದೊಡ್ಡ ಸ್ಕೋರ್ ಆಗಿರುತ್ತದೆ. ಸಂಜು ಅವರನ್ನು ಮತ್ತೆ ಓಪನಿಂಗ್‌ಗೆ ಕರೆತರಬೇಕು. ಅಭಿಷೇಕ್ ಶರ್ಮಾ ಅಥವಾ ವೈಭವ್ ಸೂರ್ಯವಂಶಿ ಮೂರನೇ ಕ್ರಮಾಂಕದಲ್ಲಿ ಆಡಬೇಕು," ಎಂದು ಕೈಫ್ ಹೇಳಿದರು. "ನಮಗೆ ದೀರ್ಘಕಾಲೀನ ಗುರಿಗಳು ಇರಬೇಕು. ಯಾರು ಎಲ್ಲಿ ಆಡುತ್ತಾರೆ, ಮುಂದಿನ ಪಂದ್ಯದಲ್ಲಿ ಇರುತ್ತಾರೋ ಇಲ್ಲವೋ ಎಂಬ ಗೊಂದಲ ಆಟಗಾರರಲ್ಲಿ ಇರಬಾರದು. ತಂಡದಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯ ಬಗ್ಗೆ ಸ್ಪಷ್ಟತೆ ಬೇಕು," ಎಂದು ಅವರು ತಿಳಿಸಿದರು.

ಟಿ20 ಸರಣಿಯಲ್ಲಿ ಹಿನ್ನಡೆ ಅನುಭವಿಸಿರುವ ಹಾಲಿ ಚಾಂಪಿಯನ್

ಸದ್ಯ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲೆರಡು ಪಂದ್ಯಗಳು ಮುಕ್ತಾಯವಾಗಿದ್ದು, ಆತಿಥೇಯ ಇಂಗ್ಲೆಂಡ್ ತಂಡವು 1-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾದರೇ, ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಸುಲಭ ಗೆಲುವು ದಾಖಲಿಸಿದೆ. ಇದೀಗ ಜುಲೈ 07ರಂದು ಟ್ರೆಂಟ್‌ ಬ್ರಿಡ್ಜ್‌ನಲ್ಲಿ ನಡೆಯಲಿರುವ ಮೂರನೇ ಟಿ20 ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮೂರನೇ ಪಂದ್ಯದಲ್ಲಾದರೂ ಶ್ರೇಯಸ್ ಅಯ್ಯರ್ ನಾಯಕನಾಗಿ ಮೊದಲ ಗೆಲುವಿನ ಖಾತೆ ತೆರೆಯುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.