ಬಿಸಿಸಿಐನ ಮುಂದಿನ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಆಟಗಾರ ಮಿಥುನ್ ಮನ್ಹಾಸ್ ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವರ ಆಯ್ಕೆ ಬಹುತೇಕ ಖಚಿತವಾಗಿದೆ. ದೇಶೀಯ ಕ್ರಿಕೆಟ್‌ನ ದಿಗ್ಗಜರಾದ ಮನ್ಹಾಸ್, ರೋಜರ್ ಬಿನ್ನಿ ಅವರ ಉತ್ತರಾಧಿಕಾರಿಯಾಗಲಿದ್ದು, ಈ ಹಿಂದೆ ಐಪಿಎಲ್ ತಂಡಗಳ ತರಬೇತುದಾರರಾಗಿಯೂ ಕೆಲಸ ಮಾಡಿದ್ದಾರೆ.
ಮುಂಬೈ: ಬಿಸಿಸಿಐನ ಮುಂದಿನ ಅಧ್ಯಕ್ಷ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ಮಾಜಿ ಆಟಗಾರ ಮಿಥುನ್ ಮನ್ಹಾಸ್ ಮಾತ್ರ ಅರ್ಜಿ ಸಲ್ಲಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಮಿಥುನ್ ಮನ್ಹಾಸ್ ಬಿಸಿಸಿಐ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿ ಹಿಂತಿರುಗುತ್ತಿರುವ ದೃಶ್ಯಗಳನ್ನು ಸುದ್ದಿ ಸಂಸ್ಥೆ ಎಎನ್‌ಐ ಬಿಡುಗಡೆ ಮಾಡಿದೆ. ಹೀಗಾಗಿ ಬಿಸಿಸಿಐ ನೂತನ ಅಧ್ಯಕ್ಷರಾಗಿ ಮಿಥುನ್ ಮನ್ಹಾಸ್ ನೇಮಕಗೊಳ್ಳುವುದು ಬಹುತೇಕ ಖಚಿತ ಎನಿಸಿದೆ.
ಸೆಪ್ಟೆಂಬರ್ 28ರಂದು ಘೋಷಣೆ
ಈ ತಿಂಗಳ 28 ರಂದು ನಡೆಯಲಿರುವ ಬಿಸಿಸಿಐ ಸಾಮಾನ್ಯ ಸಭೆಯಲ್ಲಿ ಮಿಥುನ್ ಮನ್ಹಾಸ್ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಲಾಗುವುದು. ದೇಶೀಯ ಕ್ರಿಕೆಟ್‌ನ ದಿಗ್ಗಜ ಆಟಗಾರರಲ್ಲಿ ಒಬ್ಬರಾದ ಮಿಥುನ್ ಮನ್ಹಾಸ್, ರೋಜರ್ ಬಿನ್ನಿ ಅವರ ಉತ್ತರಾಧಿಕಾರಿಯಾಗಿ ಬಿಸಿಸಿಐನ ಉನ್ನತ ಹುದ್ದೆಗೆ ಏರುತ್ತಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿ ತಂಡದ ಆಟಗಾರನಾಗಿದ್ದ 46 ವರ್ಷದ ಮನ್ಹಾಸ್, ಸದ್ಯ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆಯ ಆಡಳಿತಕ್ಕಾಗಿ ಬಿಸಿಸಿಐ ನೇಮಿಸಿದ ಉಪಸಮಿತಿಯ ಸದಸ್ಯರಾಗಿದ್ದಾರೆ. ಕಾಶ್ಮೀರದಲ್ಲಿ ಜನಿಸಿದ ಮನ್ಹಾಸ್ ತಮ್ಮ ವೃತ್ತಿಜೀವನದಲ್ಲಿ ದೆಹಲಿ ಪರ ಆಡಿದ್ದರೂ, 2016 ರಲ್ಲಿ ನಿವೃತ್ತರಾಗುವ ಮೊದಲು ಕೊನೆಯ ಋತುವಿನಲ್ಲಿ ಜಮ್ಮು ಮತ್ತು ಕಾಶ್ಮೀರ ಪರ ಆಡಿದ್ದರು.
ಅಪಾರ ಅನುಭವಿ ಮನ್ಹಾಸ್
ನಿವೃತ್ತಿಯ ನಂತರ, ಅವರು ಬಾಂಗ್ಲಾದೇಶ ಅಂಡರ್-19 ತಂಡದ ಬ್ಯಾಟಿಂಗ್ ಸಲಹೆಗಾರರಾಗಿ ಮತ್ತು ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್, ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳ ಭಾಗವಾಗಿ ಕೆಲಸ ಮಾಡಿದರು. 1997-98 ರಿಂದ 2016-2017 ರವರೆಗೆ ದೇಶೀಯ ಕ್ರಿಕೆಟ್‌ನಲ್ಲಿ 157 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ಮನ್ಹಾಸ್ 9,714 ರನ್ ಗಳಿಸಿದ್ದಾರೆ. 130 ಲಿಸ್ಟ್ ಎ ಪಂದ್ಯಗಳಲ್ಲಿ 4,126 ರನ್ ಮತ್ತು 91 ಟಿ20 ಪಂದ್ಯಗಳಲ್ಲಿ 1170 ರನ್ ಗಳಿಸಿದ್ದರೂ, ಅವರಿಗೆ ಭಾರತ ತಂಡದಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ.
ಇನ್ನು ಈ ಮೊದಲು ಕರ್ನಾಟಕ ಕ್ರಿಕೆಟ್ ಸಂಸ್ಥೆ (ಕೆಎಸ್‌ಎ) ಅಧ್ಯಕ್ಷರಾಗಿರುವ ರಘುರಾಮ್ ಭಟ್ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನದ ಆಯ್ಕೆ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಎಂದು ವರದಿಯಾಗಿತ್ತು. ಸಭೆಯಲ್ಲಿ ರಘುರಾಮ್‌ರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಬಗ್ಗೆ ಹೆಚ್ಚಿನವರು ಒಲವು ತೋರಿದ್ದಾರೆ ಎಂದು ವರದಿಯಾಗಿತ್ತು. ಇನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಕಿರಣ್ ಮೋರೆ, ಹರ್ಭಜನ್ ಸಿಂಗ್, ಸೌರವ್ ಗಂಗೂಲಿ ಹೆಸರು ಕೂಡಾ ಅಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿತ್ತು.
