ಸೆಪ್ಟೆಂಬರ್ 28 ರಂದು ಬಿಸಿಸಿಐ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಹೊಸ ಮುಖ್ಯಸ್ಥರ ಆಯ್ಕೆ ನಡೆಯಲಿದೆ. ಇದಕ್ಕೂ ಮುನ್ನ ಗೃಹ ಸಚಿವ ಅಮಿತ್ ಶಾ ಅವರ ನಿವಾಸದಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ ಅವಿರೋಧ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಚುನಾವಣೆ ಸೆ.28ರಂದು ನಡೆಯಲಿದ್ದು, ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಇದಕ್ಕೂ ಮುನ್ನ ಶನಿವಾರ ಗೃಹ ಸಚಿವ ಅಮಿತ್ ಶಾನಿವಾಸದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಇದೇ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಯನ್ನು ಆರಿಸಿ, ಚುನಾವಣೆ ಇಲ್ಲದೆ ಅವಿರೋಧವಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಅಧ್ಯಕ್ಷ ರೇಸ್‌ನಲ್ಲಿ ಸೌರವ್ ಗಂಗೂಲಿ
2022ರಲ್ಲಿ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಸಭೆ ನಡೆಸಿ, ಆಗಿನ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿಯನ್ನು ಕೆಳಕ್ಕಿಳಿಸಿ ಆ ಸ್ಥಾನಕ್ಕೆ ರೋಜರ್‌ಬಿನ್ನಿ ಅವರನ್ನು ಆಯ್ಕೆ ಮಾಡಲಾಗಿತ್ತು. ಹೀಗಾಗಿ ಶನಿವಾರದ ಸಭೆ ಮಹತ್ವ ಸೃಷ್ಟಿಸಿದೆ. ಸಭೆಯಲ್ಲಿ ಯಾರೆಲ್ಲಾ ಪಾಲ್ಗೊಳ್ಳ ಲಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲದಿದ್ದರೂ, ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ, ಕಿರಣ್ ಮೋರೆ, ಹರ್ಭ ಜನ್ ಸಿಂಗ್, ಕರ್ನಾಟಕದ ರಘುರಾಮ್ ಭಟ್ ಹೆಸರು ಕೇಳಿಬರುತ್ತಿವೆ.
ಕರ್ನಾಟಕದ ದಿಗ್ಗಜ ಕ್ರಿಕೆಟಿಗ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಇದೀಗ ಹೊಸ ಅಧ್ಯಕ್ಷರ ಹುಡುಕಾಟದಲ್ಲಿದೆ ಬಿಸಿಸಿಐ.
ಯಾವುದೇ ರೂಲ್ಸ್ ಉಲ್ಲಂಘಿಸಿಲ್ಲ: ಐಸಿಸಿಗೆ ಪಾಕ್ ಕ್ರಿಕೆಟ್ ಪ್ರತಿಕ್ರಿಯೆ
ಅಬುಧಾಬಿ: ಯುಎಇ ವಿರುದ್ದ ಪಂದ್ಯದ ದಿನ ನಿಯಮ ಉಲ್ಲಂಘಿಸಿರುವ ಬಗ್ಗೆ ಐಸಿಸಿ ಬರೆದಿದ್ದ ಪತ್ರಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರತಿಕ್ರಿಯೆ ನೀಡಿದ್ದು, ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದಿದೆ.
ಆಟಗಾರರು, ಅಧಿಕಾರಿಗಳು ಮಾತ್ರ ಪ್ರವೇಶವಿರುವ ಸ್ಥಳಕ್ಕೆ ತಂಡದ ಮೀಡಿಯಾ ಮ್ಯಾನೇಜರ್‌ರನ್ನು ಕರೆದುಕೊಂಡು ಹೋಗಿದ್ದಲ್ಲದೆ, ಮ್ಯಾಚ್ ರೆಫ್ರಿ ಜೊತೆಗಿನ ಮಾತುಕತೆಯನ್ನು ವಿಡಿಯೋ ಮಾಡಿ ಪಿಸಿಬಿ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿತ್ತು. ಇದರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದ ಐಸಿಸಿ, ಪಿಸಿಬಿಗೆ ಪತ್ರವನ್ನೂ ಬರೆದಿತ್ತು. 'ಮ್ಯಾನೇಜರ್ ತಂಡದ ಭಾಗ. ಅವರು ಆಟಗಾರರು ಇರುವ ಸ್ಥಳಕ್ಕೆ ಪ್ರವೇಶಿಸುವ ಅಧಿಕಾರವಿದೆ. ಹೀಗಾಗಿ ನಿಯಮ ಉಲ್ಲಂಘನೆಯಾಗಿಲ್ಲ' ಎಂದು ಪಿಸಿಬಿ ತಿಳಿಸಿದೆ.
ಇದಕ್ಕೂ ಮೊದಲು ಪಿಸಿಬಿಗೆ ಐಸಿಸಿ ಸಿಇಒ ಸಂಗೋಜ್ ಗುಪ್ತಾ ಪತ್ರ ಬರೆದು, ಯುಎಇ ವಿರುದ್ಧ ಪಂದ್ಯದ ದಿನ ಪಾಕಿಸ್ತಾನ ನಿಯಮ ಉಲ್ಲಂಘಿಸಿದೆ ಎಂದಿದ್ದಾರೆ. ಆಟಗಾರರು ಮತ್ತು ಮ್ಯಾಚ್ ಅಧಿಕಾರಿಗಳಿಗೆ ಮಾತ್ರ ಪ್ರವೇಶವಿರುವ ಸ್ಥಳಕ್ಕೆ ಪಾಕ್ ಮಾಧ್ಯಮ ವ್ಯವಸ್ಥಾಪಕ ಪ್ರವೇಶಿಸಿದ್ದಾರೆ. ಅಲ್ಲದೆ, ರೆಫ್ರಿ ಆ್ಯಂಡಿ ಪೈಕ್ರಾಫ್ಟ್, ಪಾಕ್ ನಾಯಕ, ಕೋಚ್ ಜೊತೆಗಿನ ಮಾತುಕತೆಯ ವಿಡಿಯೋ ಚಿತ್ರೀಕರಣ ಮಾಡಿ, ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ಮೂಲಕ ನಿಯಮ ಉಲ್ಲಂಘಿಸಲಾಗಿದೆ ಎಂದು ತಿಳಿಸಿದ್ದರು.
ಪಡಿಕ್ಕಲ್ 150, ಮೊದಲ ಟೆಸ್ಟ್‌ನಲ್ಲಿ ಭಾರತ 'ಎ' ಡ್ರಾ
ಲಖನೌ: ಕರ್ನಾಟಕದ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್‌ನಿಂದಾಗಿ ಮೊದಲ ಅನಧಿಕೃತ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 'ಎ' ತಂಡಕ್ಕೆ ಭಾರತ 'ಎ' ದಿಟ್ಟ ತಿರುಗೇಟು ನೀಡಿತು. ಆದರೆ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಆಸೀಸ್ 6 ವಿಕೆಟ್‌ಗೆ 532 ರನ್ ಗಳಿಸಿತ್ತು. ಭಾರತ 7 ವಿಕೆಟ್‌ಗೆ 531 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲರ್ ಘೋಷಿಸಿತು. ಪಡಿಕ್ಕಲ್ (150) ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 7ನೇ ಶತಕ ಬಾರಿಸಿದರು. ಧ್ರುವ್ ಜುರೆಲ್ 140 ರನ್ ಗಳಿಸಿದರು. 2ನೇ ಇನ್ನಿಂಗ್ಸ್ ಆರಂಭಿಸಿದ ಆಸೀಸ್ 56/0 ರನ್ ಗಳಿಸಿದ್ದಾಗ ಪಂದ್ಯ ಡ್ರಾಗೊಂಡಿತು.
