ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡವು ಎರಡನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದು, ಪ್ರಶಸ್ತಿಗಾಗಿಂದು ಬೆಂಗಳೂರು ಬ್ಲಾಸ್ಟರ್ಸ್ ಎದುರು ಕಾದಾಡಲಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ

ಬೆಂಗಳೂರು: ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್‌ ಸತತ 2ನೇ ಬಾರಿ ಫೈನಲ್‌ ಪ್ರವೇಶಿಸಿದೆ. ಶನಿವಾರ ಟೂರ್ನಿಯ 2ನೇ ಸೆಮಿಫೈನಲ್‌ನಲ್ಲಿ ಕಳೆದ ಬಾರಿ ಚಾಂಪಿಯನ್‌ ಹುಬ್ಬಳ್ಳಿ ಟೈಗರ್ಸ್‌ ವಿರುದ್ಧ 9 ರನ್‌ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಕಳೆದ ಬಾರಿ ಫೈನಲ್‌ ಸೋಲಿಗೆ ಮೈಸೂರು ಸೇಡು ತೀರಿಸಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಮೈಸೂರು 8 ವಿಕೆಟ್‌ಗೆ 177 ರನ್‌ ಕಲೆಹಾಕಿತು. ಕಾರ್ತಿಕ್‌ ಎಸ್‌.ಯು. 43 ಎಸೆತಗಳಲ್ಲಿ 53 ರನ್‌ ಸಿಡಿಸಿದರು. ಶ್ರೀನಿವಾಸ್‌ ಶರತ್‌ 26, ಮನೋಜ್‌ ಭಾಂಡಗೆ 11 ಎಸೆತಗಳಲ್ಲಿ 26 ರನ್‌ ಕೊಡುಗೆ ನೀಡಿದರು. ತಂಡ ಕೊನೆ 3 ಓವರ್‌ಗಳಲ್ಲಿ 50 ರನ್‌ ಗಳಿಸಿತು.

ಇಂಪ್ಯಾಕ್ಟ್ ಪ್ಲೇಯರ್ ಮುಂದುವರೆಸಲು ಬಿಸಿಸಿಐ ಚಿಂತನೆ; ರೋಹಿತ್, ಕೊಹ್ಲಿ ಮಾತಿಗೆ ಬೆಲೆನೇ ಇಲ್ವಾ?

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಹುಬ್ಬಳ್ಳಿ ಕಾರ್ತಿಕೇಯ ಕೆ.ಪಿ. ಹೋರಾಟದ ಹೊರತಾಗಿಯೂ 20 ಓವರ್‌ಗಳಲ್ಲಿ 168 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಕಾರ್ತಿಕೇಯ 39 ಎಸೆತಗಳಲ್ಲಿ ಔಟಾಗದೆ 61 ರನ್‌ ಗಳಿಸಿದರು. ತಿಪ್ಪಾರೆಡ್ಡಿ 19 ಎಸೆತಗಳಲ್ಲಿ 33 ರನ್‌ ಕೊಡುಗೆ ನೀಡಿದರು. ಕೃಷ್ಣನ್‌ ಶ್ರೀಜಿತ್‌ 20, ಮನ್ವಂತ್‌ ಕುಮಾರ್‌ ಔಟಾಗದೆ 21 ರನ್ ಸಿಡಿಸಿದರು.

ಸ್ಕೋರ್‌: ಮೈಸೂರು 20 ಓವರಲ್ಲಿ 177/8 (ಕಾರ್ತಿಕ್‌ 53, ಮನೋಜ್‌ 26, ಕುಮಾರ್‌ 3/37), ಹುಬ್ಬಳ್ಳಿ 20 ಓವರಲ್ಲಿ 168/5 (ಕಾರ್ತಿಕೇಯ 61, ತಿಪ್ಪಾರೆಡ್ಡಿ 33, ಕೆ.ಗೌತಮ್‌ 3/29)

ಬೆಂಗ್ಳೂರು vs ಮೈಸೂರು ನಡುವೆ ಇಂದು ಫೈನಲ್‌

ಟೂರ್ನಿಯ ಫೈನಲ್‌ ಭಾನುವಾರ ನಡೆಯಲಿದ್ದು, ಬೆಂಗಳೂರು ಬ್ಲಾಸ್ಟರ್ಸ್‌ ಹಾಗೂ ಮೈಸೂರು ವಾರಿಯರ್ಸ್‌ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಬೆಂಗಳೂರು 2022ರಲ್ಲಿ ಫೈನಲ್‌ನಲ್ಲಿ ಸೋತಿದ್ದರೆ, ಮೈಸೂರು ಕಳೆದ ಆವೃತ್ತಿಯಲ್ಲಿ ರನ್ನರ್‌-ಅಪ್‌ ಆಗಿತ್ತು. ಇತ್ತಂಡಗಳು ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿವೆ.

ಹಾರ್ದಿಕ್‌ ಪಾಂಡ್ಯಗೆ ಶುರುವಾಯ್ತು ಢವ-ಢವ..! ಆಲ್ರೌಂಡರ್‌ ಹೊಸ ತಲೆನೋವು ತಂದ ಕೋಚ್ ಗೌತಮ್ ಗಂಭೀರ್

03ನೇ ಗೆಲುವು: ಹುಬ್ಬಳ್ಳಿ ವಿರುದ್ಧ ಮೈಸೂರಿಗಿದು ಈ ಬಾರಿ ಸತತ 3ನೇ ಜಯ. ಲೀಗ್‌ ಹಂತದಲ್ಲಿ 2 ಪಂದ್ಯಗಳಲ್ಲೂ ಗೆದ್ದಿತ್ತು.

ದ್ರಾವಿಡ್‌ ಪುತ್ರ ಸಮಿತ್‌ ಭಾರತ ಅಂ-19 ತಂಡಕ್ಕೆ

ನವದೆಹಲಿ: ಭಾರತದ ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಪುತ್ರ ಸಮಿತ್‌ ದ್ರಾವಿಡ್‌ ಮುಂಬರುವ ಆಸ್ಟ್ರೇಲಿಯಾ ವಿರುದ್ಧ ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆಲ್ರೌಂಡರ್‌ ಸಮಿತ್‌ ಸದ್ಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್‌ ತಂಡದ ಪರ ಆಡುತ್ತಿದ್ದಾರೆ.

ಅದಕ್ಕೂ ಮುನ್ನ ಕೂಚ್‌ ಬೆಹಾರ್‌ ಟ್ರೋಫಿಯಲ್ಲಿ ಕರ್ನಾಟಕ ತಂಡ ಚಾಂಪಿಯನ್‌ ಎನಿಸಿಕೊಳ್ಳಲು 18 ವರ್ಷದ ಸಮಿತ್‌ ಪ್ರಮುಖ ಕೊಡುಗೆ ನೀಡಿದ್ದರು. ಟೂರ್ನಿಯಲ್ಲಿ ಅವರು 8 ಪಂದ್ಯಗಳಲ್ಲಿ 362 ರನ್‌, 16 ವಿಕೆಟ್‌ ಪಡೆದಿದ್ದರು. ಆಸೀಸ್‌ ವಿರುದ್ಧ ಭಾರತ ಸೆ.21ರಿಂದ ಅ.7ರ ವರೆಗೆ 4 ದಿನಗಳ 1 ಪಂದ್ಯ ಹಾಗೂ 3 ಏಕದಿನ ಪಂದ್ಯಗಳು ನಡೆಯಲಿವೆ. ಉತ್ತರ ಪ್ರದೇಶದ ಮೊಹಮ್ಮದ್‌ ಅಮಾನ್‌ ನಾಯಕತ್ವ ವಹಿಸಲಿದ್ದಾರೆ. ಕರ್ನಾಟಕದ ಕಾರ್ತಿಕೇಯ ಕೆ.ಪಿ. ಕೂಡಾ ತಂಡದಲ್ಲಿದ್ದಾರೆ.