ಶುಕ್ರವಾರದಿಂದ 10ನೇ ಆವೃತ್ತಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಆರಂಭವಾಗಲಿದ್ದು, ಇಂಗ್ಲೆಂಡ್‌ ಹಾಗೂ ವೇಲ್ಸ್‌ನಲ್ಲಿ ನಡೆಯಲಿದೆ. ಚೊಚ್ಚಲ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿರುವ ಭಾರತ ತಂಡ, ತನ್ನ ಮೊದಲ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಲಿದೆ.

ಬರ್ಮಿಂಗ್‌ಹ್ಯಾಮ್‌: ಫಿಫಾ ಫುಟ್ಬಾಲ್‌ ವಿಶ್ವಕಪ್‌ ಅಬ್ಬರದ ನಡುವೆ ಹೆಚ್ಚು ಸುದ್ದಿಯಾಗದೆ ಮರೆಯಾದಂತಿರುವ 10ನೇ ಆವೃತ್ತಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಶುಕ್ರವಾರ ಆರಂಭಗೊಳ್ಳಿದೆ. ಇಂಗ್ಲೆಂಡ್‌ ಹಾಗೂ ವೇಲ್ಸ್‌ನ ಜಂಟಿ ಆತಿಥ್ಯದಲ್ಲಿ ಟೂರ್ನಿ ನಡೆಯಲಿದ್ದು, ಭಾರತ ಸೇರಿದಂತೆ ಒಟ್ಟು 12 ತಂಡಗಳು ಪಾಲ್ಗೊಳ್ಳಲಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2 ವರ್ಷಗಳಿಗೊಮ್ಮೆ ನಡೆಯಲಿರುವ ಟೂರ್ನಿಯು ಈ ಬಾರಿ 2 ದೇಶಗಳ ಒಟ್ಟು 7 ಕ್ರೀಡಾಂಗಣಗಳಲ್ಲಿ ಆಯೋಜನೆಗೊಳ್ಳಲಿದ್ದು, 33 ಪಂದ್ಯಗಳು ನಡೆಯಲಿವೆ. ಜುಲೈ 5ರಂದು ಪ್ರತಿಷ್ಠಿತ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಫೈನಲ್‌ ಪಂದ್ಯ ನಿಗದಿಯಾಗಿದೆ. 2009ರ ಚೊಚ್ಚಲ ಆವೃತ್ತಿಯ ಚಾಂಪಿಯನ್‌ ಇಂಗ್ಲೆಂಡ್‌ ತಂಡ ಬರೋಬ್ಬರಿ 17 ವರ್ಷ ಬಳಿಕ ಮತ್ತೊಮ್ಮೆ ಚಾಂಪಿಯನ್‌ ಆಗಲು ಕಾಯುತ್ತಿದ್ದರೆ, ಆಸ್ಟ್ರೇಲಿಯಾ ತಂಡ ದಾಖಲೆಯ 7ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ನ್ಯೂಜಿಲೆಂಡ್ ತಂಡ ಹಾಲಿ ಚಾಂಪಿಯನ್‌ ಪಟ್ಟದೊಂದಿಗೆ ಟೂರ್ನಿಗೆ ಕಾಲಿಡಲಿದ್ದು, ಏಕದಿನ ವಿಶ್ವಕಪ್‌ನ ಹಾಲಿ ಚಾಂಪಿಯನ್‌ ಭಾರತ ಟಿ20 ವಿಶ್ವಕಪ್‌ನಲ್ಲಿ ಚೊಚ್ಚಲ ಟ್ರೋಫಿ ಗೆಲ್ಲಲು ಹೋರಾಡಲಿದೆ.

ಟೂರ್ನಿ ಮಾದರಿ ಹೇಗೆ?:

ಟೂರ್ನಿಯಲ್ಲಿರುವ 12 ತಂಡಗಳನ್ನು ತಲಾ 6 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ನೆದರ್‌ಲೆಂಡ್ಸ್‌, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ‘ಎ’ ಗುಂಪಿನಲ್ಲಿದ್ದು, ಆತಿಥೇಯ ಇಂಗ್ಲೆಂಡ್‌, ನ್ಯೂಜಿಲೆಂಡ್‌, ಶ್ರೀಲಂಕಾ, ಐರ್ಲೆಂಡ್‌, ಸ್ಕಾಟ್ಲೆಂಡ್‌ ಹಾಗೂ ವೆಸ್ಟ್‌ಇಂಡೀಸ್‌ ‘ಬಿ’ ಗುಂಪಿನಲ್ಲಿದೆ. ಗುಂಪು ಹಂತದಲ್ಲಿ ಪ್ರತಿ ತಂಡಗಳು ಒಮ್ಮೆ ಮುಖಾಮುಖಿಯಾಗಲಿವೆ. ಅಂದರೆ ಒಂದು ತಂಡಕ್ಕೆ 5 ಪಂದ್ಯಗಳಿರಲಿವೆ. ಪ್ರತಿ ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಅದರಲ್ಲಿ ಗೆದ್ದ ತಂಡಗಳು ಫೈನಲ್‌ಗೇರಲಿವೆ.

--05 ಪಂದ್ಯ: ಪ್ರತಿ ತಂಡಗಳು ಗುಂಪು ಹಂತದಲ್ಲಿ ತಲಾ 5 ಪಂದ್ಯಗಳನ್ನಾಡಲಿವೆ.

24 ದಿನ: ಈ ಬಾರಿ ಮಹಿಳಾ ವಿಶ್ವಕಪ್‌ ಒಟ್ಟು 24 ದಿನಗಳ ಕಾಲ ನಡೆಯಲಿದೆ.

ಪಂದ್ಯ ವೀಕ್ಷಣೆ ಹೇಗೆ?

ಎಲ್ಲಾ ಪಂದ್ಯಗಳು ಭಾರತದಲ್ಲಿ ಸ್ಟಾರ್‌ಸ್ಪೋರ್ಟ್ಸ್‌ ಚಾನೆಲ್‌ ಹಾಗೂ ಜಿಯೋ ಹಾಟ್‌ಸ್ಟಾರ್‌ ಆ್ಯಪ್‌ನಲ್ಲಿ ಪ್ರಸಾರಗೊಳ್ಳಲಿವೆ. ಭಾರತದ ಎಲ್ಲಾ ಪಂದ್ಯಗಳು ಸಂಜೆ 7 ಗಂಟೆಗೆ(ಭಾರತೀಯ ಕಾಲಮಾನ) ಆರಂಭಗೊಳ್ಳಲಿದೆ.

ಗೆದ್ದ ತಂಡಕ್ಕೆ ಸಿಗಲಿದೆ 22.4 ಕೋಟಿ ರುಪಾಯಿ

ಈ ಬಾರಿ ಮಹಿಳಾ ವಿಶ್ವಕಪ್‌ ಐಸಿಸಿ ಬರೋಬ್ಬರಿ ₹83.93 ಕೋಟಿ ನಗದು ಬಹುಮಾನ ಪ್ರಕಟಿಸಿದೆ. ಇದು ಕಳೆದ ಬಾರಿಗಿಂತ ಶೇ.10ರಷ್ಟು ಹೆಚ್ಚು. ಟೂರ್ನಿಯಲ್ಲಿ ಚಾಂಪಿಯನ್‌ ಆಗುವ ತಂಡಕ್ಕೆ ₹22.4 ಕೋಟಿ ನಗದು ಪಡೆಯಲಿದ್ದು, ರನ್ನರ್‌-ಅಪ್‌ ತಂಡಕ್ಕೆ ₹11.2 ಕೋಟಿ ಸಿಗಲಿದೆ. ಸೆಮಿಫೈನಲ್‌ನಲ್ಲಿ ಸೋಲುವ 2 ತಂಡಗಳಿಗೆ ತಲಾ ₹6.46 ಕೋಟಿ ಲಭಿಸಲಿದೆ. ಉಳಿದಂತೆ ಗುಂಪು ಹಂತದ ಪಂದ್ಯದಲ್ಲಿ ಗೆಲ್ಲುವ ತಂಡಗಳಿಗೆ ತಲಾ ₹29 ಲಕ್ಷ ಸಿಗಲಿದೆ.

--

ಈ ಹಿಂದಿನ ಚಾಂಪಿಯನ್ಸ್‌

ವರ್ಷ ಚಾಂಪಿಯನ್‌ ರನ್ನರ್‌-ಅಪ್‌

2009 ಇಂಗ್ಲೆಂಡ್‌ ನ್ಯೂಜಿಲೆಂಡ್‌

2010 ಆಸ್ಟ್ರೇಲಿಯಾ ನ್ಯೂಜಿಲೆಂಡ್‌

2012 ಆಸ್ಟ್ರೇಲಿಯಾ ಇಂಗ್ಲೆಂಡ್‌

2014 ಆಸ್ಟ್ರೇಲಿಯಾ ಇಂಗ್ಲೆಂಡ್‌

2016 ವೆಸ್ಟ್‌ಇಂಡೀಸ್‌ ಆಸ್ಟ್ರೇಲಿಯಾ

2018 ಆಸ್ಟ್ರೇಲಿಯಾ ಇಂಗ್ಲೆಂಡ್‌

2020 ಆಸ್ಟ್ರೇಲಿಯಾ ಭಾರತ

2023 ಆಸ್ಟ್ರೇಲಿಯಾ ದ.ಆಫ್ರಿಕಾ

2024 ನ್ಯೂಜಿಲೆಂಡ್‌ ದ.ಆಫ್ರಿಕಾ

--

ಭಾರತಕ್ಕೆ ಈ ಸಲ ಬದ್ಧವೈರಿ

ಪಾಕಿಸ್ತಾನ ಮೊದಲ ಸವಾಲು

ಬರ್ಮಿಂಗ್‌ಹ್ಯಾಮ್‌: ಚೊಚ್ಚಲ ಟ್ರೋಫಿ ಗೆಲ್ಲಲು ಕಾಯುತ್ತಿರುವ ಭಾರತ ತಂಡ ಈ ಬಾರಿ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲೇ ಬದ್ಧವೈರಿ ಪಾಕಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯ ಜೂ.14ರಂದು ಬರ್ಮಿಂಗ್‌ಹ್ಯಾಮ್‌ ಕ್ರೀಡಾಂಗಣದಲ್ಲಿ ನಿಗದಿಯಾಗಿದೆ.

ಭಾರತ ತಂಡವನ್ನು ಈ ಬಾರಿಯೂ ಹರ್ಮನ್‌ಪ್ರೀತ್‌ ಕೌರ್‌ ಮುನ್ನಡೆಸಲಿದ್ದು, ಸ್ಮೃತಿ ಮಂಧನಾ, ಜೆಮಿಮಾ, ಶಫಾಲಿ, ರಿಚಾ ಘೋಷ್‌ ಸೇರಿ ಪ್ರಮುಖರಿದ್ದಾರೆ. ಕರ್ನಾಟಕದ ಶ್ರೇಯಾಂಕ ಪಾಟೀಲ್‌ ಕೂಡಾ ತಂಡದ ಭಾಗವಾಗಿದ್ದಾರೆ.

2024ರ ಟಿ20 ವಿಶ್ವಕಪ್‌ ಬಳಿಕ ಭಾರತ ತಂಡ 24 ಪಂದ್ಯಗಳನ್ನಾಡಿದ್ದು, ಈ ಪೈಕಿ 14ರಲ್ಲಿ ಜಯಗಳಿಸಿದೆ. ತಂಡ ಟಿ20ಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗುತ್ತಿದ್ದರೂ ಈ ಬಾರಿ ವಿಶ್ವಕಪ್‌ ಗೆಲ್ಲುವ ಫೇವರಿಟ್‌ ತಂಡಗಳ ಸಾಲಿನಲ್ಲಿದೆ. ಕಳೆದ ಏಕದಿನ ವಿಶ್ವಕಪ್‌ನಂತೆ ಆಸ್ಟ್ರೇಲಿಯಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌ಗೆ ಪೈಪೋಟಿ ನೀಡಿ ಕಪ್‌ ಗೆಲ್ಲಲು ಕಾಯುತ್ತಿರುವ ತಂಡಕ್ಕೆ ಈ ಬಾರಿ ಗುಂಪು ಹಂತದಲ್ಲೇ ಕಠಿಣ ಸವಾಲು ಎದುರಾಗಲಿದೆ. ಪಾಕ್‌ ಪಂದ್ಯದ ಬಳಿಕ ಭಾರತ ತಂಡ ಜೂ.17ಕ್ಕೆ ನೆದರ್‌ಲೆಂಡ್ಸ್‌ ವಿರುದ್ಧ ಆಡಲಿದೆ. ನಂತರ ಜೂ.21ಕ್ಕೆ ದ.ಆಫ್ರಿಕಾ, 25ಕ್ಕೆ ಬಾಂಗ್ಲಾದೇಶ, 28ಕ್ಕೆ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ 3 ಪಂದ್ಯದಲ್ಲೂ ತಂಡಕ್ಕೆ ಕಠಿಣ ಸವಾಲು ಎದುರಾಗಲಿದೆ.

ಭಾರತದ ಪಂದ್ಯ(ಗುಂಪು ಹಂತ)

ಎದುರಾಳಿ ದಿನಾಂಕ ಸ್ಥಳ

ಪಾಕಿಸ್ತಾನ ಜೂ.14 ಬರ್ಮಿಂಗ್‌ಹ್ಯಾಮ್‌

ನೆದರ್‌ಲೆಂಡ್ಸ್‌ ಜೂ.17 ಲೀಡ್ಸ್‌

ದಕ್ಷಿಣ ಆಫ್ರಿಕಾ ಜೂ.21 ಮ್ಯಾಂಚೆಸ್ಟರ್‌

ಬಾಂಗ್ಲಾದೇಶ ಜೂ.25 ಮ್ಯಾಂಚೆಸ್ಟರ್‌

ಆಸ್ಟ್ರೇಲಿಯಾ ಜೂ.28 ಲಾರ್ಡ್ಸ್‌