* 2ನೇ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್ ಟೂರ್ನಿ ಜುಲೈ 30 ರಿಂದ ಆರಂಭ* ಪ್ರಶಸ್ತಿಗಾಗಿ ಲಂಕಾದ 5 ತಂಡಗಳ ನಡುವೆ ಕಾದಾಟ* ಚೊಚ್ಚಲ ಆವೃತ್ತಿಯಲ್ಲಿ ಜಾಫ್ನಾ ಸ್ಟಾಲಿಯನ್ಸ್ ಲಂಕಾ ಪ್ರೀಮಿಯರ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಕೊಲಂಬೊ(ಮೇ.13): ಎರಡನೇ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯು ಜುಲೈ 30ರಿಂದ ಆಗಸ್ಟ್ 22ರವರೆಗೆ ನಡೆಯಲಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯು ತಿಳಿಸಿದೆ.
ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯು 2020ರ ನವೆಂಬರ್ 26ರಿಂದ ಡಿಸೆಂಬರ್ 16ರವರೆಗೆ ಅತ್ಯಂತ ಯಶಸ್ವಿಯಾಗಿ ನಡೆದಿತ್ತು. ಟೂರ್ನಿಯಲ್ಲಿ ಜಾಫ್ನಾ ಸ್ಟಾಲಿಯನ್ಸ್ ಲಂಕಾ ಪ್ರೀಮಿಯರ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಲಂಕಾ ಕ್ರಿಕೆಟ್ ಲೀಗ್‌ನ ವ್ಯವಸ್ಥಾಪಕ ಸಮಿತಿಯ ಮುಖ್ಯಸ್ಥ ಅರ್ಜುನ ಡಿ ಸಿಲ್ವಾ ಎರಡನೇ ಆವೃತ್ತಿಯ ಎಲ್‌ಪಿಎಲ್ ಟೂರ್ನಿಯ ದಿನಾಂಕವನ್ನು ಖಚಿತಪಡಿಸಿದ್ದಾರೆ.
ಕಳೆದ ವರ್ಷ ಕೋವಿಡ್ ಭೀತಿಯಿಂದಾಗಿ ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಬಯೋ ಸೆಕ್ಯೂರ್ ಬಬಲ್‌ನೊಳಗೆ ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು. ಈ ಬಾರಿಯು ಸಹಾ ಮುನ್ನೆಚ್ಚರಿಕಾ ಕ್ರಮವಾಗಿ ಖಾಲಿ ಮೈದಾನದಲ್ಲಿ ಟೂರ್ನಿ ಆಯೋಜಿಸಲು ಲಂಕಾ ಕ್ರಿಕೆಟ್ ಮಂಡಳಿಯು ಚಿಂತನೆ ನಡೆಸುತ್ತಿದೆ.
ಬಾಂಗ್ಲಾದೇಶ ಸರಣಿಗೆ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಕಟ
ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್‌ನಿಂದ ಟಿ20 ಸ್ಟಾರ್ ಕ್ರಿಕೆಟಿಗರಾದ ಕ್ರಿಸ್ ಗೇಲ್, ಲಸಿತ್ ಮಾಲಿಂಗ, ಫಾಫ್ ಡುಪ್ಲೆಸಿಸ್, ಮೊಹಮ್ಮದ್ ಹಫೀಜ್, ಲಿಯಾಮ್ ಫ್ಲಂಕೆಟ್ ಸೇರಿದಂತೆ ಹಲವಾರು ಆಟಗಾರರು ಟೂರ್ನಿ ಆರಂಭಕ್ಕೂ ಮುನ್ನವೇ ದಿಢೀರ್ ಎನ್ನುವಂತೆ ಹಿಂದೆ ಸರಿದಿದ್ದರು. ಹೀಗಿದ್ದೂ ಭಾರತದ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್, ಮನ್‌ಪ್ರೀತ್ ಗೋಣಿ ಹಾಗೂ ಮುನಾಫ್ ಪಟೇಲ್ ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.
ಲಂಕಾ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯಲ್ಲಿ ಕೊಲಂಬೊ ಕಿಂಗ್ಸ್, ದಂಬುಲ್ಲಾ ವಿಕಿಂಗ್, ಜಾಫ್ನಾ ಸ್ಟಾಲಿಯನ್ಸ್, ಗಾಲೆ ಗ್ಲಾಡಿಯೇಟರ್ಸ್ ಮತ್ತು ಕ್ಯಾಂಡಿ ಟಸ್ಕರ್ಸ್ ತಂಡಗಳು ಪಾಲ್ಗೊಳ್ಳುತ್ತವೆ.
