ಕೊಲಂಬೊ(ಮೇ.12): ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ಸೂಪರ್ ಲೀಗ್‌ ಸೀರೀಸ್‌ನ ಬಾಂಗ್ಲಾದೇಶ ವಿರುದ್ದದ ಸರಣಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು 18 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದೆ. ನಿರೀಕ್ಷೆಯಂತೆಯೇ ಕುಸಾಲ ಪೆರೆರಾಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ. 3 ಪಂದ್ಯಗಳ ಏಕದಿನ ಸರಣಿ ಮೇ 23ರಿಂದ ಆರಂಭವಾಗಲಿದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿಯು ನೂತನವಾಗಿ ಕುಸಾಲ ಪರೆರಾಗೆ ನಾಯಕತ್ವ ಪಟ್ಟ ಕಟ್ಟಿದ್ದರೆ, ಕುಸಾಲ ಮೆಂಡೀಸ್‌ ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಸರಣಿಗೆ ಹಿರಿಯ ಕ್ರಿಕೆಟಿಗರಾದ ದೀಮುತ್ ಕರುಣಾರತ್ನೆ, ಏಂಜಲೋ ಮ್ಯಾಥ್ಯೂಸ್ ಹಾಗೂ ದಿನೇಶ್ ಚಾಂಡಿಮಲ್‌ಗೆ ವಿಶ್ರಾಂತಿ ನೀಡಲಾಗಿದ್ದು, ಹೊಸ ಮುಖಗಳಿಗೆ ಮಣೆಹಾಕಲಾಗಿದೆ.

ಲಂಕಾ ಪ್ರವಾಸ: ಧವನ್‌ ಇಲ್ಲವೇ ಹಾರ್ದಿಕ್‌ ಟೀಂ ಇಂಡಿಯಾ ನಾಯಕ?

2023ರ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಶ್ರೀಲಂಕಾ ಕ್ರಿಕೆಟ್ ಮಂಡಳಿಯು ತನ್ನ ತಂಡದಲ್ಲಿ ಮೇಜರ್ ಸರ್ಜರಿ ಮಾಡಿದೆ. ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ಸೂಪರ್ ಲೀಗ್‌ ಸೀರೀಸ್‌ನಲ್ಲಿ ದ್ವೀಪ ರಾಷ್ಟ್ರ ಶ್ರೀಲಂಕಾ ಇನ್ನೂ ಗೆಲುವಿನ ಖಾತೆ ತೆರೆದಿಲ್ಲ. ಶ್ರೀಲಂಕಾ ತನ್ನ ಮೊದಲ ಸರಣಿಯಲ್ಲಿ ವೆಸ್ಟ್ ಇಂಡೀಸ್ ಎದುರು 0-3 ಅಂತರದಲ್ಲಿ ಹೀನಾಯ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿದೆ.

ಬಾಂಗ್ಲಾದೇಶ ವಿರುದ್ದದ 3 ಪಂದ್ಯಗಳ ಏಕದಿನ ಸರಣಿಗೆ ಶ್ರೀಲಂಕಾ ತಂಡ ಹೀಗಿದೆ ನೋಡಿ:
ಕುಸಾಲ್ ಪೆರೆರಾ(ನಾಯಕ), ಕುಸಾಲ್ ಮೆಂಡೀಸ್(ಉಪನಾಯಕ), ವಹಿಂದು ಹಸರಂಗ, ಚಮಿಕಾ ಕರುಣರತ್ನೆ, ಆಸಿತಾ ಫರ್ನಾಂಡೋ, ಬಿನುರಾ ಫರ್ನಾಂಡೋ, ಶೇರಾನ್ ಫರ್ನಾಂಡೋ, ಧನುಷ್ಕಾ ಗುಣತಿಲಕ, ಪತುಮ್‌ ನಿಶಾಂಕ, ಧನಂಜಯ ಡಿ ಸಿಲ್ವಾ, ಆಶನ್‌ ಬಂಡಾರ, ನಿರ್ಶೋನ್‌ ಡಿಕ್‌ವೆಲ್ಲಾ, ದಶುನ್ ಶನಕಾ, ಇಸುರು ಉಡಾನ, ದುಸ್ಮಂತ್ ಚಮೀರಾ, ರಮೇಶ್ ಮೆಂಡೀಸ್, ಲಕ್ಷನ್‌ ಸಂದಕನ, ಅಕಿಲಾ ಧನಂಜಯ.