128 ವರ್ಷಗಳ ನಂತರ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಮರಳಲಿದೆ. ಪುರುಷ ಮತ್ತು ಮಹಿಳೆಯರ ತಂಡಗಳು ಭಾಗವಹಿಸಲಿವೆ, ತಲಾ 6 ತಂಡಗಳು ಸ್ಪರ್ಧಿಸಲಿವೆ. ಈ ಹಿಂದೆ 1900ರಲ್ಲಿ ಪ್ಯಾರಿಸ್‌ನಲ್ಲಿ ಕ್ರಿಕೆಟ್ ಆಡಿಸಲಾಗಿತ್ತು. ಟಿ20 ಮಾದರಿಯಲ್ಲಿ ಪಂದ್ಯಗಳು ನಡೆಯುವ ಸಾಧ್ಯತೆಯಿದೆ. ಅಮೆರಿಕಕ್ಕೆ ನೇರ ಅರ್ಹತೆ ದೊರೆಯಲಿದೆ. ಅರ್ಹತಾ ನಿಯಮಗಳು ಇನ್ನೂ ಅಂತಿಮವಾಗಿಲ್ಲ.

ಬೆಂಗಳೂರು: ಬರೋಬ್ಬರಿ 128 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಕಮಿಟಿ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕ್ರೀಡೆ ಅಧಿಕೃತವಾಗಿ ಸೇರ್ಪಡೆಯಾಗಿದೆ. 1900ನೇ ಇಸವಿಯಲ್ಲಿ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕೊನೆಯ ಬಾರಿಗೆ ಕ್ರಿಕೆಟ್ ಆಡಿಸಲಾಗಿತ್ತು. ಆಗ ಕೇವಲ ಒಂದು ಪಂದ್ಯವನ್ನಷ್ಟೇ ಆಡಿಸಲಾಗಿತ್ತು. 

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು 128 ವರ್ಷಗಳ ಬಳಿಕ ಜಾಗತಿಕ ಕ್ರೀಡಾ ಹಬ್ಬ ಎನಿಸಿಕೊಂಡಿರುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕಮ್‌ಬ್ಯಾಕ್ ಮಾಡಿರುವ ಬಗ್ಗೆ ಮಹತ್ವದ ಅಪ್‌ಡೇಟ್ ನೀಡಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಪುರುಷರ ಹಾಗೂ ಮಹಿಳೆಯರ ಕ್ರಿಕೆಟ್ ಪಂದ್ಯಗಳು ನಡೆಯಲಿದ್ದು, ಈ ಕ್ರೀಡಾಕೂಟದಲ್ಲಿ ತಲಾ 6 ತಂಡಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದೆ. ಈ ಕ್ರೀಡಾಕೂಟದಲ್ಲಿ 90 ಆಟಗಾರರು ಪಾಲ್ಗೊಳ್ಳಲಿದ್ದಾರೆ.

ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ 5 ಹೊಸ ಕ್ರೀಡೆಗಳನ್ನು ಸೇರ್ಪಡೆ ಮಾಡಿದ್ದು, ಈ ಪೈಕಿ ಕ್ರಿಕೆಟ್ ಕೂಡಾ ಒಂದೆನಿಸಿದೆ. ಒಲಿಂಪಿಕ್ಸ್‌ಗೆ ಕ್ರಿಕೆಟ್ ತಂಡವು ಅರ್ಹತೆ ಪಡೆಯಲು ಇನ್ನೂ ಕ್ವಾಲಿಫಿಕೇಷನ್ ನಿಯಮಾವಳಿಗಳು ಅಂತಿಮವಾಗಿಲ್ಲ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಹೊರತುಪಡಿಸಿ, ಬಹುತೇಕ 100 ದೇಶಗಳು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಆಡುತ್ತಿವೆ. ಹೀಗಾಗಿ ಒಲಿಂಪಿಕ್ಸ್‌ಗೆ ಕ್ವಾಲಿಫಿಕೇಷನ್ ನೀಡುವ ವಿಚಾರದಲ್ಲಿ ಕೊಂಚ ಸವಾಲಾಗುವ ಸಾಧ್ಯತೆಯಿದೆ. ಇನ್ನು ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಿರುವ ಅಮೆರಿಕಗೆ ನೇರ ಅರ್ಹತೆ ಸಿಗಲಿದೆ.

ಇದನ್ನೂ ಓದಿ: ಗುಜರಾತ್ ಎದುರು ಮುಗ್ಗರಿಸಿದ ರಾಜಸ್ಥಾನ ರಾಯಲ್ಸ್‌ಗೆ ಮತ್ತೊಂದು ಬಿಗ್ ಶಾಕ್!

ಲಾಸ್ ಏಂಜಲೀಸ್‌ನಲ್ಲಿ ಒಲಿಂಪಿಕ್ಸ್ ಆಯೋಜಿಸುವ ಕುರಿತಂತೆ ಐಒಸಿ ಎಕ್ಸಿಕ್ಯೂಟಿವ್ ಬೋರ್ಡ್ ಇಂದು ಸಭೆ ಸೇರಿತ್ತು. ಈ ಪೈಕಿ ಹಲವು ಮಹತ್ವದ ತೀರ್ಮಾನಗಳನ್ನು ಈ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಒಟ್ಟು 351 ಮೆಡಲ್ ಇವೆಂಟ್‌ಗಳು ನಡೆಯಲಿವೆ. ಇದು ಪ್ಯಾರಿಸ್ ಒಲಿಂಪಿಕ್ಸ್‌ಗೆ ಹೋಲಿಸಿದರೆ 22 ಇವೆಂಟ್‌ಗಳು ಹೆಚ್ಚಿಗೆ ಇವೆ. ಐಒಸಿಯು ಅಥ್ಲೆಟಿಕ್ಸ್ ವಿಭಾಗದಲ್ಲಿ 10500 ಅಥ್ಲೀಟ್ಸ್‌ಗಳ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಇನ್ನು ಹೊಸ 5 ಕ್ರೀಡೆಗಳು ಸೇರ್ಪಡೆಯಾಗಿರುವುದರಿಂದ 698 ಹೆಚ್ಚುವರಿ ಅಥ್ಲೀಟ್‌ಗಳು ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಕ್ರಿಕೆಟ್ ಮಲ್ಟಿಸ್ಪೋರ್ಟ್ಸ್ ಇವೆಂಟ್‌ನಲ್ಲಿ ಈಗಾಗಲೇ ಎಂಟ್ರಿಕೊಟ್ಟಿದೆ. 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಸಲ ಮಹಿಳಾ ಕ್ರಿಕೆಟ್‌ಗೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾ ಚಿನ್ನ ಹಾಗೂ ಭಾರತ ಬೆಳ್ಳಿ ಪದಕ ಜಯಿಸಿತ್ತು. ಇನ್ನು ಇದಾದ ಬಳಿಕ 2023ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ 14 ಪುರುಷ ಹಾಗೂ 9 ಮಹಿಳಾ ಕ್ರಿಕೆಟ್ ತಂಡಗಳು ಪಾಲ್ಗೊಂಡಿದ್ದವು. ಈ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಹಾಗೂ ಪುರುಷ ತಂಡಗಳು ಚಿನ್ನದ ಪದಕ ಜಯಿಸಿದ್ದವು. 

ಇದನ್ನೂ ಓದಿ: 'ನನಗೆ ಸೊಕ್ಕು, ಅಹಂ ಎನ್ನುವುದು ಇಲ್ಲ': ವಿರಾಟ್ ಕೊಹ್ಲಿ ಹೀಗಂದಿದ್ದು ಯಾಕೆ?

ಟಿ20 ಮಾದರಿ?

2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಟಿ20 ಮಾದರಿಯಲ್ಲಿ ಪಂದ್ಯಾವಳಿಗಳು ನಡೆಯಲಿವೆ ಎನ್ನಲಾಗುತ್ತಿದೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಸೇರಿದಂತೆ ಬಲಿಷ್ಠ ತಂಡಗಳು ಲಾಸ್ ಏಂಜಲೀಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಕೊನೆಗೂ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಬೇಕು ಎನ್ನುವ ಅಭಿಮಾನಿಗಳ ಕನಸು ನನಸಾಗುತ್ತಿದೆ.

1900ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ನಲ್ಲಿ ಗೆದ್ದೋರು ಯಾರು?

1900ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಒಮ್ಮೆ ಮಾತ್ರ ಕ್ರಿಕೆಟ್ ಕ್ರೀಡಾಕೂಟ ಆಯೋಜನೆಗೊಂಡಿತ್ತು. ಆ ಒಲಿಂಪಿಕ್ಸ್‌ನಲ್ಲಿ ಗ್ರೇಟ್ ಬ್ರಿಟನ್ ಹಾಗೂ ಫ್ರಾನ್ಸ್ ತಂಡಗಳು ಪಾಲ್ಗೊಂಡಿದ್ದವು. ಕೇವಲ ಎರಡು ತಂಡಗಳು ಪಾಲ್ಗೊಂಡಿದ್ದ ಈ ಒಲಿಂಪಿಕ್ಸ್ ನಲ್ಲಿ ಗ್ರೇಟ್ ಬ್ರಿಟನ್ ಚಿನ್ನದ ಪದಕ ಜಯಿಸಿದರೆ, ಫ್ರಾನ್ಸ್ ಬೆಳ್ಳಿ ಪದಕ ಜಯಿಸಿತ್ತು.