ಕೋಲ್ಕತ(ಮೇ.06): ಇಡೀ ದೇಶವೇ ಕೋವಿಡ್ ಎರಡನೇ ಅಲೆಗೆ ತತ್ತರಿಸಿ ಹೋಗಿವೆ. ಪ್ರತಿನಿತ್ಯ ದೇಶಾದ್ಯಂತ ಮೂರೂವರೆ ಲಕ್ಷಕ್ಕೂ ಅಧಿಕ ಹೊಸ ಕೋವಿಡ್ 19 ಕೇಸ್‌ಗಳು ಪತ್ತೆಯಾಗುತ್ತಿವೆ. ಈ ಸಂಕಷ್ಟದಿಂದ ಪಾರಾಗಲು ಈಗಾಗಲೇ ಹಲವು ರಾಜ್ಯಗಳು ಲಾಕ್‌ಡೌನ್ ಘೋಷಿಸಿವೆ.

ಇದೇ ಸಂದರ್ಭದಲ್ಲಿ ದೇಶವು ಸೂಕ್ತ ಬೆಡ್‌ಗಳ, ಆಕ್ಸಿಜನ್‌ ಹಾಗೂ ಇತರೇ ವೈದ್ಯಕೀಯ ಉಪಕರಣಗಳ ಕೊರತೆ ಎದುರಿಸುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸೆಲಿಬ್ರಿಟಿಗಳು ಹಾಗೂ ಸಾಮಾನ್ಯ ಜನರು ಸ್ವಯಂ ಪ್ರೇರಿತರಾಗಿ ದೇಣಿಗೆ ನೀಡುತ್ತಿದ್ದಾರೆ.

ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಹಾಲಿ ವೀಕ್ಷಕ ವಿವರಣೆಗಾರ ಲಕ್ಷ್ಮಿ ರತನ್ ಶುಕ್ಲಾ ಕೋವಿಡ್ ವಿರುದ್ದದ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಮೇ.06, 2021ರಂದು ತಮ್ಮ 40ನೇ ವಸಂತಕ್ಕೆ ಕಾಲಿಟ್ಟ ಶುಕ್ಲಾ ತಮ್ಮ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ದೇಣಿಗೆ ನೀಡುವ ಮೂಲಕ ಸ್ಮರಣೀಯವಾಗಿ ಆಚರಿಸಿಕೊಂಡಿದ್ದಾರೆ. 2021ನೇ ಸಾಲಿನ ಐಪಿಎಲ್‌ ವೀಕ್ಷಕ ವಿವರಣೆಯಲ್ಲಿ ಬಂದ ಸಂಪೂರ್ಣ ಸಂಭಾವನೆಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿರುವುದಾಗಿ ಟ್ವೀಟ್‌ ಮೂಲಕ ಖಚಿತಪಡಿಸಿದ್ದಾರೆ.

ಇಂದು ಮೇ 06, 2021 ನನ್ನ ಜನ್ಮದಿನ. ಐಪಿಎಲ್ 2021ರ ವೀಕ್ಷಕ ವಿವರಣೆಯ ಸಂಪೂರ್ಣ ಸಂಭಾವನೆಯನ್ನು ಪಶ್ಚಿಮಬಂಗಾಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಪಿಸುತ್ತಿದ್ದೇನೆ. ಕೊರೋನಾ ಎರಡನೇ ಅಲೆಯ ವಿರುದ್ದದ ಹೋರಾಟಕ್ಕೆ ನನ್ನದೊಂದು ಚಿಕ್ಕ ಕೊಡುಗೆಯಷ್ಟೇ. ಕೊರೋನಾ ವಿರುದ್ದ ಗೆಲುವು ಸಾಧಿಸೋಣ ಎಂದು ಟ್ವೀಟ್‌ ಮಾಡಿದ್ದಾರೆ.

ಕೊರೋನಾ ವಿರುದ್ದ ಹೋರಾಟಕ್ಕಿಳಿದ ವಿರಾಟ್ ಕೊಹ್ಲಿ..!

ದೇಸಿ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಲಕ್ಷ್ಮಿ ರತನ್ ಶುಕ್ಲಾ 1999ರಲ್ಲಿ ಭಾರತ ಪರ 3 ಏಕದಿನ ಪಂದ್ಯಗಳನ್ನಾಡಿದ್ದಾರೆ. ಶುಕ್ಲಾ 137 ಪ್ರಥಮ ದರ್ಜೆ, 141 ಲಿಸ್ಟ್ ಎ ಹಾಗೂ 81 ಟಿ20 ಪಂದ್ಯಗಳನ್ನಾಡಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಕೋಲ್ಕತ ನೈಟ್‌ ರೈಡರ್ಸ್‌, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇನ್ನು 2015ರಲ್ಲಿ ಲಕ್ಷ್ಮಿ ರತನ್‌ ಶುಕ್ಲಾ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಹೇಳಿ ವೀಕ್ಷಕ ವಿವರಣೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona