ಎಸಿಸಿ ಉದ​ಯೋ​ನ್ಮುಖ ಮಹಿ​ಳೆ​ಯರ ಏಷ್ಯಾ​ಕಪ್‌ ಕ್ರಿಕೆಟ್‌ ಟೂರ್ನಿಗೆ ಭಾರತ ತಂಡ ಪ್ರಕಟಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೋಲುಕುಂದ ಗ್ರಾಮದ ಮಮತಾ ಭಾರತ ಎ ತಂಡಕ್ಕೆ ಆಯ್ಕೆಜೂನ್‌ 12ರಿಂದ ಹಾಂಕಾಂಗ್‌ನಲ್ಲಿ ಆರಂಭವಾಗುವ ಎಸಿಸಿ ಎಮರ್ಜಿಂಗ್‌ ಮಹಿಳಾ ಟಿ20 ಏಷ್ಯಾಕಪ್‌ ಟೂರ್ನಿ

- ಎಂ.ಬಿ. ನಾಯಕಿನ್‌, ಕನ್ನಡಪ್ರಭ

ಗುರುಮಠಕಲ್‌(ಜೂ.05): ಗ್ರಾಮೀಣ ಪ್ರತಿಭೆ, ಧೋಬಿ ಮಗಳು ಮಮತಾ ವೀರೇಶ್‌ ಮಡಿವಾಳ, ಭಾರತ ಕ್ರಿಕೆಟ್‌ನ ಮಹಿಳಾ ‘ಎ’ ತಂಡಕ್ಕೆ ವಿಕೆಟ್‌ ಕೀಪರ್‌ ಆಗಿ ಆಯ್ಕೆಯಾಗಿದ್ದಾರೆ. ಇವರು ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕೋಲುಕುಂದ ಗ್ರಾಮದವರು. ಪ್ರಸ್ತುತ ಹೈದರಾಬಾದ್‌ನ ಮಹಿಳಾ ವಂದನಾ ಕಾಲೇಜಿನಲ್ಲಿ ಬಿಕಾಂ ದ್ವಿತೀಯ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ಜೂನ್‌ 12ರಿಂದ ಹಾಂಕಾಂಗ್‌ನಲ್ಲಿ ಆರಂಭವಾಗುವ ಎಸಿಸಿ ಎಮರ್ಜಿಂಗ್‌ ಮಹಿಳಾ ಟಿ20 ಏಷ್ಯಾಕಪ್‌ ಕ್ರಿಕೆಟ್‌ಗೆ ಭಾರತೀಯ ‘ಎ’ ತಂಡವನ್ನು ಜೂ.2ರಂದು ಪ್ರಕಟಿಸಲಾಗಿದೆ. ಶ್ವೇತಾ ಶೇರಾವತ್‌ ನಾಯಕತ್ವದಲ್ಲಿ 14 ಮಂದಿ ‘ಎ’ ತಂಡಕ್ಕೆ ಆಯ್ಕೆಯಾಗಿದ್ದು, ಇದರಲ್ಲಿ 19 ವರ್ಷದ ಮಮತಾ ಮಡಿವಾಳ 2ನೇ ವಿಕೆಟ್‌ ಕೀಪರ್‌ ಆಗಿ ಸ್ಥಾನ ಪಡೆದಿದ್ದಾರೆ.

ತನ್ನ 13ನೇ ವಯಸ್ಸಿನಲ್ಲಿಯೇ ಮಮತಾ, ಕ್ರಿಕೆಟ್‌ ಮೇಲೆ ಪ್ರೀತಿ ಬೆಳೆಸಿಕೊಂಡಳು. ಇದಕ್ಕಾಗಿ ತಾಯಿ ಜತೆಗೆ ನೆರೆಯ ಹೈದ್ರಾಬಾದ್‌ಗೆ ತೆರಳಿ ನೆಲೆ ನಿಂತಳು. ತಂದೆ ವೀರೇಶ್‌ ಮಡಿವಾಳ, ಕಲಬುರಗಿಯಲ್ಲಿ ಹಾರ್ಡ್‌ವೇರ್‌ ಕಂಪ್ಯೂಟರ್‌ ಕೆಲಸ ಮಾಡುತ್ತಿದ್ದರು. ಮಗಳಲ್ಲಿನ ಕ್ರಿಕೆಟ್‌ ಪ್ರತಿಭೆ ಪ್ರೋತ್ಸಾಹಿಸಲು, ಕಲಬುರಗಿಯಲ್ಲಿ ತಮ್ಮ ಕೆಲಸ ಬಿಟ್ಟು, ಹೈದ್ರಾಬಾದ್‌ಗೆ ಬಂದರು. ತಮ್ಮ ಕುಲಕಸುಬು ಧೋಬಿ ವೃತ್ತಿಗೆ ಮರಳಿದರು. ಇಸ್ತ್ರಿ ಮಾಡಿ, ಅದರಿಂದ ಬಂದ ಹಣದಿಂದ ಕ್ರಿಕೆಟ್‌ ಅಕಾಡೆಮಿಗೆ ಸೇರಿಸಿ, ಮಗಳಿಗೆ ವೇದಿಕೆ ಕಲ್ಪಿಸಿಕೊಟ್ಟರು.

French Open: 17ನೇ ಫ್ರೆಂಚ್‌ ಕ್ವಾರ್ಟ​ರ್‌ಗೆ ಜೋಕೋವಿಚ್ ಲಗ್ಗೆ!

ಆರ್ಥಿಕ ಸಂಕಷ್ಟದ ನಡುವೆಯೂ ಮಗಳಿಗೆ ಹೈದ್ರಾಬಾದ್‌ನ ಭವಾನಿ ಕ್ರಿಕೆಟ್‌ ಅಕಾಡೆಮಿಯಲ್ಲಿ ತರಬೇತಿ ಕೊಡಿಸಿದರು. ಈ ವೇಳೆ, ಆಕೆಯ ತಂದೆಯ ಸ್ನೇಹಿತರು ಬ್ಯಾಟ್‌, ಬಾಲ್‌ ಇತರ ಕಿಟ್‌ಗಳನ್ನು ಕೊಡುಗೆಯಾಗಿ ನೀಡುತ್ತಿದ್ದರು. ಕೆಲವರು ಆರ್ಥಿಕ ಸಹಾಯ ಮಾಡಿದರು. ಮಮತಾ ಕರ್ನಾಟಕದವರಾದರೂ ಹೈದ್ರಾಬಾದ್‌ನಿಂದ ಭಾರತ ‘ಎ’ ತಂಡಕ್ಕೆ ಈಗ ಆಯ್ಕೆಯಾಗಿದ್ದಾರೆ.

ಈಕೆ ವಿಕೆಟ್‌ ಕೀಪರ್‌ ಮಾತ್ರವಲ್ಲ, ಉತ್ತಮ ಬ್ಯಾಟ್ಸ್‌ಮನ್‌ ಕೂಡ ಹೌದು. ಈ ಹಿಂದಿನ ಹಲವು ಟೂರ್ನ್‌ಮೆಂಟ್‌ಗಳಲ್ಲಿ ಬ್ಯಾಟಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದಕ್ಕೂ ಮೊದಲು, 2019ರಲ್ಲಿ ಮಧ್ಯಪ್ರದೇಶದಲ್ಲಿ ನಡೆದ ಬಿಸಿಸಿಐನ 19 ವರ್ಷದೊಳಗಿನ ಟೂರ್ನ್‌ಮೆಂಟ್‌ ಸೇರಿದಂತೆ ರಾಷ್ಟ್ರೀಯ ಮಟ್ಟದ ಹಲವು ಟೂರ್ನ್‌ಮೆಂಟ್‌ಗಳಲ್ಲಿ ಆಡಿದ್ದಾರೆ.

ಕಳೆದ ಬಾರಿ ಐಪಿಎಲ್‌ ಟಿ20 ಹರಾಜು ಆಗುವ ಲಿಸ್ಟ್‌ನಲ್ಲಿ ನನ್ನ ಹೆಸರು ಇತ್ತು. ಕೆಲವು ಕಾರಣಗಳಿಂದ ಹರಾಜು ಆಗಲಿಲ್ಲ. ಮುಂದೆ ಖಂಡಿತವಾಗಿ ಐಪಿಎಲ್‌ನಲ್ಲಿ ಆಡಬಲ್ಲೆ ಮತ್ತು ಭಾರತ ಮಹಿಳಾ ಮುಖ್ಯ ಟೀಮ್‌ಗೆ ಆಯ್ಕೆಯಾಗಬೇಕೆಂಬ ಕನಸು ಇದೆ. ಇದಕ್ಕಾಗಿ ಎಷ್ಟೇ ಕಷ್ಟವಾದರೂ ಸರಿ, ಸ್ಥಾನ ಗಿಟ್ಟಿಸಿಕೊಳ್ಳಲು ಹೆಚ್ಚು ನೆಟ್‌ ಪ್ರ್ಯಾಕ್ಟೀಸ್‌ ಮಾಡುತ್ತಿದ್ದೇನೆ ಎನ್ನುತ್ತಾರೆ ಮಮತಾ ಮಡಿವಾಳ.

ಎಸಿಸಿ ಉದ​ಯೋ​ನ್ಮುಖ ಮಹಿ​ಳೆ​ಯರ ಏಷ್ಯಾ​ಕಪ್‌ ಕ್ರಿಕೆಟ್‌ ಟೂರ್ನಿಗೆ ಭಾರತ ತಂಡ:

ಶ್ವೇತಾ ಸೆಹ್ರಾವತ್(ನಾಯಕಿ), ಸೌಮ್ಯಾ ತಿವಾರಿ(ಉಪನಾಯಕಿ), ತ್ರಿಶಾ ಗೊಂಗಾಡಿ, ಮುಸ್ಕಾನ್ ಮಲಿಕ್, ಶ್ರೇಯಾಂಕ ಪಾಟೀಲ್, ಕನಿಕಾ ಅಹುಜಾ, ಉಮಾ ಚೆಟ್ರಿ(ವಿಕೆಟ್ ಕೀಪರ್), ಮಮತಾ ಮಡಿವಾಳ(ವಿಕೆಟ್ ಕೀಪರ್), ತಿತಾಸ್ ಸಂಧು, ಸೊಪ್ಪಂದಂಡಿ ಯಶಾರಿ, ಕಶಾವೀ ಗೌತಮ್, ಪರ್ಶಾವಿ ಚೋಪ್ರಾ, ಮನ್ನತ್ ಕಶ್ಯಪ್, ಬಿ ಅನುಷಾ.