French Open: 17ನೇ ಫ್ರೆಂಚ್ ಕ್ವಾರ್ಟರ್ಗೆ ಜೋಕೋವಿಚ್ ಲಗ್ಗೆ!
23ನೇ ಟೆನಿಸ್ ಗ್ರ್ಯಾನ್ ಸ್ಲಾಂಗೆ ಮತ್ತಷ್ಟು ಹತ್ತಿರವಾದ ನೋವಾಕ್ ಜೋಕೋವಿಚ್
17ನೇ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿ ದಾಖಲೆ ಬರೆದ ಜೋಕೋ
55ನೇ ಗ್ರ್ಯಾನ್‌ಸ್ಲಾಂ ಕ್ವಾರ್ಟರ್ಗೆ ಜೋಕೋ ಲಗ್ಗೆ
ಪ್ಯಾರಿಸ್(ಜೂ.05): 22 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ, ಸರ್ಬಿಯಾದ ನೋವಾಕ್ ಜೋಕೋವಿಚ್ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ದಾಖಲೆಯ 17ನೇ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, 3ನೇ ಬಾರಿ ಚಾಂಪಿಯನ್ ಎನಿಸಿಕೊಳ್ಳುವ ಹಾದಿಯಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ.
ಟೂರ್ನಿಯ 2 ಬಾರಿ ಚಾಂಪಿಯನ್ ಜೋಕೋ ಭಾನುವಾರ ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಪೆರು ದೇಶದ ಜ್ವಾನ್ ಪ್ಯಾಬ್ಲೋ ವಾರಿಲ್ಲಸ್ ವಿರುದ್ಧ 6-3, 6-2, 6-2 ನೇರ ಸೆಟ್ಗಳಲ್ಲಿ ಗೆಲುವು ಸಾಧಿಸಿದರು. ಇದರೊಂದಿಗೆ ಗ್ರ್ಯಾನ್ಸ್ಲಾಂನಲ್ಲಿ 55ನೇ ಬಾರಿ ಕ್ವಾರ್ಟರ್ಗೇರಿದ ಸಾಧನೆ ಮಾಡಿದರು. ಅತಿಹೆಚ್ಚು ಬಾರಿ ಕ್ವಾರ್ಟರ್ಗೇರಿದ ದಾಖಲೆ ರೋಜರ್ ಫೆಡರರ್(58) ಹೆಸರಲ್ಲಿದೆ. ಕ್ವಾರ್ಟರ್‌ನಲ್ಲಿ 3ನೇ ಶ್ರೇಯಾಂಕಿತ ಜೋಕೋಗೆ ರಷ್ಯಾದ ಕರೇನ್ ಕಚನೋವ್ ಸವಾಲು ಎದುರಾಗಲಿದೆ. 11ನೇ ಶ್ರೇಯಾಂಕಿತ ಕಚನೋವ್ ಭಾನುವಾರ 4ನೇ ಸುತ್ತಿನ ಪಂದ್ಯದಲ್ಲಿ ಇಟಲಿಯ ಲೊರೆಂಜೊ ಸೊನೆಗೊ ವಿರುದ್ಧ ಗೆಲುವು ಸಾಧಿಸಿದರು. ಇನ್ನು, 22ನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್, ಡೇನಿಲ್ ಡಿಮಿಟ್ರೋವ್ ಪುರುಷರ ಸಿಂಗಲ್ಸ್ನಲ್ಲಿ 4ನೇ ಸುತ್ತು ಪ್ರವೇಶಿಸಿದರು.
Wrestlers Protest: ಕುಸ್ತಿಪಟುಗಳಿಗೆ ನ್ಯಾಯ ಸಿಗಲಿ, ಶೀಘ್ರ ಚಾರ್ಜ್ಶೀಟ್ ಸಲ್ಲಿಕೆ: ಅನುರಾಗ್ ಠಾಕೂರ್
ಪಾವ್ಲುಚೆಂಕೋವಾ, ಮುಚೋವಾ ಕ್ವಾರ್ಟರ್ಗೆ: ಇದೇ ವೇಳೆ ಮಹಿಳಾ ಸಿಂಗಲ್ಸ್ನಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿಯರಿಬ್ಬರು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ರಷ್ಯಾದ ಅನಾಸ್ತೇಸಿಯಾ ಪಾವ್ಲುಚೆಂಕೋವಾ ಹಾಗೂ ಚೆಕ್ ಗಣರಾಜ್ಯದ ಕರೋಲಿನಾ ಮುಚೋವಾ ಅಂತಿಮ 8ರ ಘಟ್ಟಪ್ರವೇಶಿಸಿದರು. ಇವರಿಬ್ಬರು ಮುಂದಿನ ಸುತ್ತಿನಲ್ಲಿ ಮುಖಾಮುಖಿಯಾಗಲಿದ್ದಾರೆ. ಕಳೆದ ಬಾರಿ ರನ್ನರ್-ಅಪ್ ಅಮೆರಿಕದ ಕೊಕೊ ಗಾಫ್, ಕಳೆದ ಬಾರಿ ವಿಂಬಲ್ಡನ್ ಹಾಗೂ ಯುಎಸ್ ಓಪನ್‌ನಲ್ಲಿ ಫೈನಲ್ನಲ್ಲಿ ಸೋತು ಪ್ರಶಸ್ತಿಯಿಂದ ವಂಚಿತರಾಗಿದ್ದ ಟ್ಯುನೀಶಿಯಾದ ಒನ್ಸ್ ಜಬುರ್ 4ನೇ ಸುತ್ತು ಪ್ರವೇಶಿಸಿದರು. ಜಬುರ್ ಸರ್ಬಿಯಾದ ಒಲ್ಗಾ ಡೆನಿಲೋವಿಚ್ ವಿರುದ್ಧ ಗೆದ್ದರೆ, ಗಾಫ್ ರಷ್ಯಾದ ಮಿರ್ರಾ ಆ್ಯಂಡ್ರೀವಾ ವಿರುದ್ಧ ಜಯಗಳಿಸಿ ಪ್ರಿ ಕ್ವಾರ್ಟರ್ಗೆ ಲಗ್ಗೆ ಇಟ್ಟರು.
ನಡಾಲ್ ದಾಖಲೆ ಮುರಿದ ಜೋಕೋ!
ಫ್ರೆಂಚ್ ಓಪನ್‌ನಲ್ಲಿ ಹೆಚ್ಚು ಬಾರಿ ಕ್ವಾರ್ಟರ್ ಪ್ರವೇಶಿಸಿದ ದಾಖಲೆಯನ್ನು ಜೋಕೋವಿಚ್ ತಮ್ಮ ಹೆಸರಿಗೆ ಬರೆದುಕೊಂಡರು. ಜೋಕೋಗೆ ಇದು 17ನೆ ಕ್ವಾರ್ಟರ್ ಆಗಿದ್ದು, ನಡಾಲ್(16) ದಾಖಲೆ ಮುರಿದರು. 20 ಗ್ರ್ಯಾನ್ಸ್ಲಾಂಗಳ ಒಡೆಯ ರೋಜರ್ ಫೆಡರರ್ 12 ಬಾರಿ ಫ್ರೆಂಚ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ಗೇರಿದ್ದರು.