ಕ್ಯಾಪ್ಟನ್ ಕೆ.ತಿಮ್ಮಪ್ಪಯ್ಯ ಸ್ಮರಣಾರ್ಥ ಬಹುದಿನಗಳ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ನಾಲ್ಕು ತಂಡಗಳು ಕಣಕ್ಕಿಳಿಯಲಿವೆ. ಮಯಾಂಕ್ ಅಗರ್‌ವಾಲ್, ಕಿಶನ್ ಬೆದರೆ, ಶುಭಾಂಗ್ ಹೆಗಡೆ ಮತ್ತು ಅನೀಶ್ವರ್ ಗೌತಮ್ ನಾಯಕತ್ವದ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ.
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುವ ಕ್ಯಾಪ್ಟನ್ ಕೆ.ತಿಮ್ಮಪ್ಪಯ್ಯ ಸ್ಮರಣಾರ್ಥ ಬಹುದಿನಗಳ ಕ್ರಿಕೆಟ್ ಟೂರ್ನಿಯಲ್ಲಿ ಈ ಬಾರಿ ಕರ್ನಾಟಕದ 4 ತಂಡಗಳು ಕಣಕ್ಕಿಳಿಯಲಿದೆ. ಸೋಮವಾರ ರಾಜ್ಯ ತಂಡಗಳ ಆಟಗಾರರ ಪಟ್ಟಿ ಪ್ರಕಟಿಸಲಾಗಿದೆ.
ಕೆಎಸ್‌ಸಿಎ ಇವೆಲೆವನ್ ತಂಡಕ್ಕೆ ಮಯಾಂಕ್ ಅಗರ್‌ವಾಲ್ ನಾಯಕತ್ವ ವಹಿಸಲಿದ್ದು, ಆರ್.ಸ್ಮರಣ್, ಪ್ರಸಿದ್ಧ್ ಕೃಷ್ಣ₹ ಮ್ಯಾಕ್ನಿಲ್, ಶ್ರೇಯಸ್ ಗೋಪಾಲ್, ವಿದ್ವತ್ ಕಾವೇರಪ್ಪ, ಅಭಿಲಾಶ್ ಶೆಟ್ಟಿ ಸೇರಿ ಪ್ರಮುಖರಿದ್ದಾರೆ. ಕೆಎಸ್‌ಸಿಎ ಪ್ರೆಸಿಡೆಂಡ್ ಇಲೆವೆನ್ ತಂಡಕ್ಕೆ ಕಿಶನ್ ಬೆದರೆ ನಾಯಕತ್ವ ವಹಿಸಲಿದ್ದು, ರೋಹನ್ ಪಾಟೀಲ್, ಯಶ್ ರಾಜ್ ಪೂಂಜ ಸೇರಿ ಯುವ ಪ್ರತಿಭೆಗಳಿದ್ದಾರೆ. ಕೆಎಸ್‌ಸಿಎ ಸೆಕ್ರೆಟರಿ ಇವೆಲೆವನ್ ತಂಡಕ್ಕೆ ಶುಭಾಂಗ್ ಹೆಗಡೆ ನಾಯಕರಾಗಿದ್ದು, ಸಮಿತ್ ದ್ರಾವಿಡ್, ಧ್ರುವ್ ಪ್ರಭಾಕರ್ ಸ್ಥಾನ ಪಡೆದಿದ್ದಾರೆ. ಅನೀಶ್ವರ್ ಗೌತಮ್ ನಾಯಕತ್ವದ ಮತ್ತೊಂದು ತಂಡದಲ್ಲಿ ಮೊಹ್ಸಿನ್ ಖಾನ್, ವಿಶಾಲ್, ಹರ್ಷಿಲ್, ಕಾರ್ತಿಕೇಯ ಸೇರಿ ಯುವ ಆಟಗಾರರಿದ್ದಾರೆ.
ಟೂರ್ನಿಯಲ್ಲಿ ಮುಂಬೈ ಸೇರಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿದ್ದು, ತಲಾ 4 ತಂಡಗಳ 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣ, ಆಲೂರು, ಮೈಸೂರು ಸೇರಿ ಹಲವು ಕಡೆಗಳಲ್ಲಿ ಪಂದ್ಯಗಳು ನಡೆಯಲಿವೆ.
ದುಲೀಪ್ ಟ್ರೋಫಿ: ವೈಶಾಖ್ ಔಟ್, ರಾಜ್ಯದ ಕೌಶಿಕ್ ಆಯ್ಕೆ
ಬೆಂಗಳೂರು: ಸೆ.4ರಿಂದ ಉತ್ತರ ವಲಯ ವಿರುದ್ಧ ನಡೆಯಬೇಕಿರುವ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಿಂದ ದಕ್ಷಿಣ ವಲಯದ ವಿಜಯ್‌ಕುಮಾರ್ ವೈಶಾಖ್ ಹೊರಬಿದ್ದಿದ್ದಾರೆ. ಅವರು ಗಾಯದಿಂದ ಇನ್ನೂ ಸಂಪೂರ್ಣ ಚೇತರಿಸಿಕೊಳ್ಳದ ಕಾರಣ ಪಂದ್ಯಕ್ಕೆ ಗೈರಾಗಲಿದ್ದಾರೆ. ಅವರ ಬದಲು ಕರ್ನಾಟಕದ ಮತ್ತೋರ್ವ ವೇಗಿ ವಾಸುಕಿ ಕೌಶಿಕ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಫಿಟ್ನೆಸ್ ಟೆಸ್ಟ್‌ನಲ್ಲಿ ಗಿಲ್, ಬುಮ್ರಾ, ರೋಹಿತ್ ಪಾಸ್
ಬೆಂಗಳೂರು: ಭಾರತದ ತಾರಾ ಕ್ರಿಕೆಟಿಗರಾದ ಶುಭ್‌ಮನ್ ಗಿಲ್, ರೋಹಿತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಜಿತೇಶ್ ಶರ್ಮಾ, ಯಶಸ್ವಿ ಜೈಸ್ವಾಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ನಗರದ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಫಿಟ್ನೆಸ್ ಪರೀಕ್ಷೆ ನಡೆಯಿತು. ಗಿಲ್, ಬುಮ್ರಾ ಶೀಘ್ರದಲ್ಲೇ ಏಷ್ಯಾಕಪ್‌ಗಾಗಿ ದುಬೈಗೆ ತೆರಳಲಿದ್ದಾರೆ.
ಸಚಿವ ಜ್ಯೋತಿರಾದಿತ್ಯ ಪುತ್ರ, 29ರ ಮಹನಾರ್ಯಮನ್ ಮಧ್ಯಪ್ರದೇಶ ಕ್ರಿಕೆಟ್ ಅಧ್ಯಕ್ಷ!
ಇಂದೋರ್: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪುತ್ರ, 29 ವರ್ಷದ ಮಹನಾರ್ಯಮನ್ ಸಿಂಧಿಯಾ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ(ಎಂಪಿಸಿಎ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ವಾಲಿಯರ್ ರಾಜಮನೆತನ ಮಹನಾರ್ಯಮನ್, ಈ ಸಂಸ್ಥೆಯ ಅತಿ ಕಿರಿಯ ಅಧ್ಯಕ್ಷ ಎನಿಸಿಕೊಂಡಿದ್ದಾರೆ. ಅವರು ಕಳೆದ 3 ವರ್ಷಗಳಿಂದ ಕ್ರಿಕೆಟ್ ಆಡಳಿತದ ಭಾಗವಾಗಿದ್ದಾರೆ. 2022ರಿಂದಲೂ ಎಂಪಿಸಿಎ ಆಜೀವ ಸದಸ್ಯರಾಗಿರುವ ಅವರು, 2024ರಲ್ಲಿ ಮಧ್ಯಪ್ರದೇಶ ಟಿ20 ಲೀಗ್ ಮುಖ್ಯಸ್ಥರಾಗಿಯೂ ಆಯ್ಕೆಯಾಗಿದ್ದರು.
